ಮಧ್ಯಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಹಿಜಾಬ್(Hijab) ಧರಿಸುವಂತೆ ಒತ್ತಾಯಿಸುತ್ತಿದ್ದರು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ದಾಮೋಹ್‌ನಲ್ಲಿರುವ ಖಾಸಗಿ ಶಾಲೆಯೊಂದು ಇದೀಗ ವಿವಾದಕ್ಕೀಡಾಗಿದೆ. ಒಂದಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಅವರ ಪೋಸ್ಟರ್ನ್ನು ಶಾಲೆಯ ಗೋಡೆಯ ಮೇಲೆ ಅಂಟಿಸಬೇಕಿತ್ತು. ಆ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೂ ಬಲವಂತವಾಗಿ ಹಿಜಾಬ್ ಹಾಕಿಸಲಾಗಿತ್ತು ಎನ್ನಲಾಗಿದೆ. ಮಧ್ಯಪ್ರದೇಶದ ಶಿಕ್ಷಣ ಸಚಿವ ನರೋತ್ತಮ್ ಸಿಂಗ್ ಮಾತನಾಡಿ, ಈ ಕುರಿತು ಬಾಲಕಿಯ ಕುಟುಂಬದವರು ಯಾವುದೇ ದೂರು ನೀಡಿಲ್ಲ, ಆದರೆ ತನಿಖೆ ನಡೆಸುವಂತೆ ಎಸ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಗಂಗಾ-ಜಮುನಾ ಕಾನ್ವೆಂಟ್ ಶಾಲೆಯನ್ನು ಮುಸ್ಲಿಂ ಸಂಘಟನೆ ನಡೆಸುತ್ತಿದೆ. ವಾಸ್ತವವಾಗಿ ಈ ಸ್ಕಾರ್ಫ್ ಶಾಲೆಯ ಸಮವಸ್ತ್ರದ ಒಂದು ಭಾಗವಾಗಿದೆ. ಶಾಲೆಯ ಎಲ್ಲಾ ಮಕ್ಕಳು ಧರಿಸಬಹುದು, ಆದರೆ ಯಾರ ಮೇಲೂ ಒತ್ತಡವಿಲ್ಲ. ಶಾಲಾ ಸಮವಸ್ತ್ರದಲ್ಲಿ ಸ್ಕಾರ್ಫ್ ಇದೆ ಎಂದು ಶಾಲೆಯ ನಿರ್ದೇಶಕ ಮುಸ್ತಾಕ್ ಖಾನ್ ಅವರು ಹೇಳಿದ್ದಾರೆ. ಆದರೆ ಅದನ್ನು ಧರಿಸಲು ಯಾರೂ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ.
ಹಿಂದೂ ಸಂಘಟನೆಯ ದೂರಿನ ನಂತರ ಈ ಬಗ್ಗೆ ತನಿಖೆ ಆರಂಭವಾಗಿದೆ. ಈ ಘಟನೆ ಬಯಲಿಗೆ ಬಂದ ನಂತರ ಇಡೀ ನಗರದಲ್ಲಿ ಕೋಲಾಹಲ ಉಂಟಾಗಿದೆ. ಶಾಲೆಯ ದಾಖಲಾತಿ ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದೂ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು. ವಿದ್ಯಾರ್ಥಿನಿಯರ ಕುಟುಂಬದಿಂದ ಅನುಮತಿ ಪಡೆದಿರುವ ಕುರಿತು ಕೂಡ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಮತ್ತಷ್ಟು ಓದಿ: Hijab: ಹಿಜಾಬ್ ಧರಿಸದ ಹೆಣ್ಣುಮಕ್ಕಳ ಮೇಲೆ ಕಣ್ಣಿಡಲು ಇರಾನ್ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನುಂಗೋ ಟ್ವೀಟ್ ಮಾಡಿದ್ದು, ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಶಾಲೆಯೊಂದು ಮುಸ್ಲಿಮೇತರ ಹುಡುಗಿರಯರನ್ನು ಬುರ್ಖಾ, ಹಿಜಾಬ್ ಧರಿಸುವಂತೆ ಒತ್ತಾಯಿಸಿದ ಕುರಿತು ದೂರುಗಳು ಬಂದಿವೆ, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ದಾಮೋಹ್ನ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ