Madhya pradesh Bus Accident: ನಾಲೆಗೆ ಬಿದ್ದ ಬಸ್​; 32 ಮೃತದೇಹಗಳನ್ನು ಹೊರತೆಗೆದ ರಕ್ಷಣಾ ಸಿಬ್ಬಂದಿ

Madhya pradesh Bus Accident: ಇದು ತುಂಬ ಆಳವಾದ ನಾಲೆಯಾಗಿದ್ದು, ಬಸ್​ ಮೊದಲು ಅರ್ಧ ಮುಳುಗಿತ್ತು. ಬರುಬರುತ್ತ ಪೂರ್ತಿಯಾಗಿ ಮುಳುಗಿ ಕಣ್ಮರೆಯಾಗಿದೆ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Madhya pradesh Bus Accident: ನಾಲೆಗೆ ಬಿದ್ದ ಬಸ್​; 32 ಮೃತದೇಹಗಳನ್ನು ಹೊರತೆಗೆದ ರಕ್ಷಣಾ ಸಿಬ್ಬಂದಿ
ನಾಲೆಯಲ್ಲಿ ಮುಳುಗಿದ ಬಸ್​..ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ
Follow us
Lakshmi Hegde
|

Updated on:Feb 16, 2021 | 1:12 PM

ಭೋಪಾಲ್​: ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪಟ್ನಾ ಹಳ್ಳಿಯ ಬಳಿ ಬಸ್​ ಸೇತುವೆಯಿಂದ ನಾಲೆಗೆ ಬಿದ್ದಿದೆ. ಈ ದುರ್ಘಟನೆಯಲ್ಲಿ 32 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಹೆಚ್ಚಾಗಿದೆ. ಬಸ್​ನಲ್ಲಿ ಸುಮಾರು 54 ಮಂದಿ ಪ್ರಯಾಣ ಮಾಡುತ್ತಿದ್ದರು, ಅದರಲ್ಲಿ ಏಳು ಮಂದಿ ಈಜಿಕೊಂಡು ದಡಸೇರಿದ್ದಾರೆ ಎಂದು ವರದಿಯಾಗಿದೆ. ಬಸ್​ ಪೂರ್ತಿ ಮುಳುಗಿದ್ದು, ಕಣ್ಣಿಗೆ ಕಾಣುತ್ತಿಲ್ಲ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಈ ಬಸ್​ ಸಿಧಿಯಿಂದ ಸತ್ನಾಕ್ಕೆ ಪ್ರಯಾಣ ಮಾಡುತ್ತಿತ್ತು. ಬೆಳಗ್ಗೆ 8.30ರ ಹೊತ್ತಿಗೆ ಘಟನೆ ನಡೆದಿದ್ದು, ಆಗಿನಿಂದಲೂ ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ (State Disaster Response Fund (SDRF)ಸಿಬ್ಬಂದಿ ಮತ್ತು ನುರಿತ ಈಜುಗಾರರು ಪ್ರಯಾಣಿಕರ ರಕ್ಷಣೆಯಲ್ಲಿ ತೊಡಗಿದ್ದಾರೆ. ಇದು ತುಂಬ ಆಳವಾದ ನಾಲೆಯಾಗಿದ್ದು, ಬಸ್​ ಮೊದಲು ಅರ್ಧ ಮುಳುಗಿತ್ತು. ಬರುಬರುತ್ತ ಪೂರ್ತಿಯಾಗಿ ಮುಳುಗಿ ಕಣ್ಮರೆಯಾಗಿದೆ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ್ದೇ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​, ದುರ್ಘಟನೆಯ ಬಗ್ಗೆ ವರದಿ ಕೇಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಬಗ್ಗೆ ಸಿಧಿ ಜಿಲ್ಲಾಧಿಕಾರಿಯಿಂದ ಮಾಹಿತಿ ಕೇಳಿದ್ದಾರೆ. ಇನ್ನು ಈ ನಾಲೆಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ರಕ್ಷಣಾ ಕಾರ್ಯಾಚರಣೆಯೂ ಕಷ್ಟವಾಗುತ್ತಿದೆ. ಹಾಗಾಗಿ ಶಾಹದಲ್ ಜಿಲ್ಲೆಯಲ್ಲಿ ಸೋನೆ ನದಿಗೆ ಕಟ್ಟಲಾದ ಬಾಣ್​ಸಾಗರ್​ ಅಣೆಕಟ್ಟೆಯಿಂದ ನೀರು ಬಿಡುವುದನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಚೌಹಾಣ್​ ನಿರ್ದೇಶನ ನೀಡಿದ್ದಾರೆ.

ಅಮಿತ್ ಶಾ ಕಾರ್ಯಕ್ರಮ ರದ್ದು ಮಧ್ಯಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್​ ​ ಯೋಜನೆಯಡಿ ನಿರ್ಮಿಸಲಾದ ಸುಮಾರು 1 ಲಕ್ಷಕ್ಕೂ ಹೆಚ್ಚು ಮನೆಗಳ ಫಲಾನುಭವಿಗಳಿಗಾಗಿ ಇಂದು ಗೃಹ ಪ್ರವೇಶ ಎಂಬ ಸರ್ಕಾರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಿಂಟೋ ಹಾಲ್​ನಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸುವವರಿದ್ದರು. ಆದರೆ ಬಸ್​ ಅಪಘಾತ ನಡೆದ ಬೆನ್ನಲ್ಲೇ ಈ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಕಾರ್ಯಕ್ರಮ ನಡೆಯಲಿದ್ದ ಸ್ಥಳಕ್ಕೆ ಆಗಮಿಸಿದ ಶಿವರಾಜ್​ ಸಿಂಗ್​ ಚೌಹಾಣ್​ ಕಾರ್ಯಕ್ರಮ ರದ್ದು ಮಾಡುವುದಾಗಿ ಘೋಷಿಸಿದರು.

ಇದನ್ನೂ ಓದಿ: Khopoli Road Accident ಮಹಾರಾಷ್ಟ್ರದ ಕೋಪೋಲಿ ಬಳಿ ಸರಣಿ ಅಪಘಾತ, ಐವರು ಸ್ಥಳದಲ್ಲೇ ಸಾವು

Published On - 1:09 pm, Tue, 16 February 21