ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ (Bhopal) ಬಡತನದಿಂದ ಬಳಲುತ್ತಿದ್ದ ಕುಟುಂಬವೊಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾರೆ. ಮನೆಯಲ್ಲಿರುವ 6 ಜನರ ಕುಟುಂಬ ಇಂದು ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದು, ಅವರಲ್ಲಿ 8 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಖಜೂರಿ ಪ್ರದೇಶದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಗುತ್ತಿಗೆದಾರನಾಗಿದ್ದ 40 ವರ್ಷದ ಕಿಶೋರ್ ಜಾಧವ್ ಹಣಕಾಸಿನ ಸಮಸ್ಯೆಗಳಿಂದಾಗಿ ಬಹಳ ಒತ್ತಡಕ್ಕೊಳಗಾಗಿದ್ದರು. ಇದರಿಂದ ಅವರು ಮನೆಯವರೆಲ್ಲರಿಗೂ ವಿಷ ನೀಡಿ, ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಆದರೆ, ದುರದೃಷ್ಟವಶಾತ್ ಕಿಶೋರ್ ಅವರ 8 ವರ್ಷದ ಮಗಳು ಮೃತಪಟ್ಟಿದ್ದಾಳೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: Knowledge Park Metro Station: ನೋಯ್ಡಾದ ನಾಲೆಡ್ಜ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಎದುರು ಜಿಗಿದು ಯುವಕ ಆತ್ಮಹತ್ಯೆ
ಬುಧವಾರ ಕಿಶೋರ್ ಮತ್ತು ಅವರ 35 ವರ್ಷದ ಪತ್ನಿ ಸೀತಾ ವಿಷ ಸೇವಿಸಿ ತಮ್ಮ ಮಕ್ಕಳಾದ ಕಾಂಚನ್ (15), ಪೂರ್ವಾ (8), ಅಣ್ಣು (10) ಮತ್ತು ಅಭಯ್ (12) ಅವರಿಗೆ ವಿಷ ಮಿಶ್ರಿತ ಹಾಲನ್ನು ಕುಡಿಸಿದ್ದರು. ಜೋರಾಗಿ ಕಿರುಚಾಡುತ್ತಿದ್ದ ಅವರನ್ನು ಅಕ್ಕಪಕ್ಕದವರು ಆಸ್ಪತ್ರೆಗೆ ಸೇರಿಸಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇಂದು ಬೆಳಗ್ಗೆ 8 ವರ್ಷದ ಪೂರ್ವಾ ಸಾವನ್ನಪ್ಪಿದ್ದು, ಉಳಿದ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಅವರ ಪೋಷಕರು ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.