
ನವದೆಹಲಿ, ಜನವರಿ 14: ಹಣಕ್ಕಾಗಿ, ವೈಯಕ್ತಿಕ ದ್ವೇಷಕ್ಕಾಗಿ, ಉದ್ಯೋಗದ ಕಾರಣಕ್ಕಾಗಿ ಹೀಗೆ ನಾನಾ ಕಾರಣಗಳಿಂದ ಅಪಹರಣದ (Kidnap) ಘಟನೆಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಆದರೆ, ಗಂಡನೇ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕಿಡ್ನಾಪ್ ಮಾಡಿದ್ದನ್ನು ನೀವು ಎಲ್ಲಾದರೂ ಕೇಳಿದ್ದೀರಾ? ಮಧ್ಯಪ್ರದೇಶದಲ್ಲಿ ಈ ರೀತಿಯ ಅಚ್ಚರಿಯ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಂಗಳವಾರ (ಜನವರಿ 13) ಶಿವಪುರಿ ಜಿಲ್ಲೆಯಲ್ಲಿ ಹಾಡಹಗಲೇ ಪತಿಯೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ಅಪಹರಿಸಿದ ಸಿನಿಮೀಯ ಶೈಲಿಯ ಘಟನೆ ನಡೆದಿದೆ.
ಈ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ಈ ಘಟನೆ ನಡೆದು 24 ಗಂಟೆಗಳ ನಂತರವೂ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕರೈರಾ ವಿಧಾನಸಭಾ ಕ್ಷೇತ್ರದ ನರವರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಖಾರ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕನಸಲ್ಲಿ ಕಾಡಿದ 3 ಮಹಿಳೆಯರು; ಭಯದಿಂದ ಪ್ರಾಣವನ್ನೇ ಕಳೆದುಕೊಂಡ ಯುವಕ
ಪೊಲೀಸರ ಪ್ರಕಾರ, ನರ್ವಾರ ಪಟ್ಟಣದ ನಿವಾಸಿ ಪಾರ್ವತಿ ಜಾಧವ್, ಮಗರುಣಿ ನಿವಾಸಿ ಜಗನ್ನಾಥ್ ಅಲಿಯಾಸ್ ಜಗತ್ ಸಿಂಗ್ ಜಾಧವ್ ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ಅವರಿಗೆ ಇಬ್ಬರು ಮಕ್ಕಳಾಗಿದ್ದರು. ಸುಮಾರು 6 ವರ್ಷಗಳ ಹಿಂದೆ ಕುಟುಂಬದಲ್ಲಿ ನಿರಂತರ ಜಗಳಗಳ ಕಾರಣದಿಂದ ಪಾರ್ವತಿ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದರು. ತನ್ನ ಪತಿ ಮತ್ತು ಅತ್ತೆ ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಆಕೆ ಆರೋಪಿಸಿದ್ದರು. ಮಂಗಳವಾರ ಮಧ್ಯಾಹ್ನ, ಅವರು ತಮ್ಮ ಮಕ್ಕಳನ್ನು ಶಾಲೆಯಿಂದ ಕರೆತರುತ್ತಿದ್ದಾಗ ಹಿಂದಿನಿಂದ ಒಂದು ಕಾರು ಬಂದಿತು. ಮೂವರು ಯುವಕರು ಕಾರಿನಿಂದ ಇಳಿದು, ಮಹಿಳೆ ಮತ್ತು ಮಕ್ಕಳನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ವಿದೇಶದಿಂದ ಗುಟ್ಟಾಗಿ ಬಂದು ಅಮ್ಮನನ್ನೇ ಕೊಲೆ ಮಾಡಿದ ಮಗ!
ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಆ ಅಪಹರಣಕಾರ ಬೇರಾರೂ ಅಲ್ಲ, ಆಕೆಯ ಗಂಡನೇ ಎಂಬುದು ಬಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಯಿತು. ಪೊಲೀಸರು ಜಗನ್ನಾಥ್ ಅವರನ್ನು ಹುಡುಕುತ್ತಿದ್ದಾರೆ. ಜಗನ್ನಾಥ್ ಪಾರ್ವತಿ ಮತ್ತು ಮಕ್ಕಳನ್ನು ಏಕೆ ಅಪಹರಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ