ಧಾರವಾಡದಲ್ಲಿ ಕಿಡ್ನ್ಯಾಪ್ ಆಗಿದ್ದ ಮಕ್ಕಳಿಬ್ಬರು ಪಕ್ಕದ ಜಿಲ್ಲೆಯಲ್ಲಿ ಪತ್ತೆ: ಪರಿಚಿತ ವ್ಯಕ್ತಿಯಿಂದಲೇ ಅಪಹರಣ
ಧಾರವಾಡದ ಕಮಲಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಅಪಹರಣಕ್ಕೊಳಗಾಗಿದ್ದ ಮಕ್ಕಳಿಬ್ಬರು ದಾಂಡೇಲಿ ಬಳಿ ಪತ್ತೆ ಆಗಿದ್ದಾರೆ. ಪರಿಚಿತ ವ್ಯಕ್ತಿ ಮಕ್ಕಳನ್ನು ಬೈಕ್‌ನಲ್ಲಿ ಅಪಹರಿಸಿದ್ದ. ಆದರೆ ದಾಂಡೇಲಿಗೆ ತೆರಳುವಾಗ ಸಂಭವಿಸಿದ ಅಪಘಾತದಿಂದ ಇದೀಗ ಮಕ್ಕಳು ಪತ್ತೆಯಾಗಿದ್ದಾರೆ. ಸದ್ಯ ಇಬ್ಬರು ಮಕ್ಕಳು ಪೊಲೀಸರ ವಶದಲ್ಲಿದ್ದು, ಸುರಕ್ಷಿತರಾಗಿದ್ದಾರೆ.

ಧಾರವಾಡ, ಜನವರಿ 12: ಎಂದಿನಂತೆ ಆ ಮಕ್ಕಳು (Children) ಶಾಲೆಗೆ ಹೋಗಿದ್ದರು. ಎಂದಿನಂತೆಯೇ ಮಧ್ಯಾಹ್ನದ ಊಟವನ್ನೂ ಮಾಡಿದ್ದರು. ಬಳಿಕ ಆ ಎರಡೂ ಮಕ್ಕಳು ನಾಪತ್ತೆಯಾಗಿದ್ದರು. ಮಧ್ಯಾಹ್ನದ ಬಳಿಕ ತರಗತಿಗೆ ಬರದೇ ಇರೋದ್ರಿಂದಾಗಿ ಶಿಕ್ಷಕರು ಅವರ ಪೋಷಕರಿಗೆ ಫೋನ್ ಮಾಡಿ ಮಕ್ಕಳು ಮನೆಗೆ ಬಂದಿದ್ದಾರೆಯೇ ಅಂತಾ ಕೇಳಿದಾಗಲೇ ಆ ಮಕ್ಕಳು ಶಾಲೆಯಲ್ಲಿಯೂ ಇಲ್ಲ, ಮನೆಗೂ ಹೋಗಿಲ್ಲ ಅನ್ನೋದು ಗೊತ್ತಾಗಿದ್ದು. ಕೂಡಲೇ ಶಾಲೆಗೆ ಸಿಸಿಟಿವಿ ಕ್ಯಾಮೆರಾ ನೋಡಿದರೆ ಅವರಿಬ್ಬರನ್ನೂ ಓರ್ವ ವ್ಯಕ್ತಿ ತನ್ನ ಬೈಕ್ ಮೇಲೆ ಕರೆದೊಯ್ದಿರೋದು ಗೊತ್ತಾಗಿದೆ. ಇದೀಗ ಅಪಹರಣಕಾರ (Kidnap) ಸಿಕ್ಕಿಬಿದ್ದಿದ್ದು, ಮಕ್ಕಳು ಪಕ್ಕದ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಇದೆಲ್ಲಾ ನಡೆದಿದ್ದು ವಿದ್ಯಾಕಾಶಿ ಧಾರವಾಡದಲ್ಲಿ.
ನಡೆದದ್ದೇನು?
ಲಕ್ಷ್ಮೀ ಕರೆಯಪ್ಪನವರ್ ಹಾಗೂ ಅನ್ವರ್ ದೊಡ್ಡಮನಿ ಧಾರವಾಡದ ಕಮಲಾಪುರ ಬಡಾವಣೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 3 ನೇ ತರಗತಿಯಲ್ಲಿ ಓದುತ್ತಿರು ವಿದ್ಯಾರ್ಥಿಗಳು. ಇಂದು ಎಂದಿನಂತೆ ಶಾಲೆಗೆ ಬಂದಿದ್ದರು. ಮಧ್ಯಾಹ್ನದ ಬಿಸಿಯೂಟವನ್ನೂ ಸೇವಿಸಿದ್ದರು. ಈ ವೇಳೆ ಶಾಲೆಗೆ ಬಂದ ಓರ್ವ ವ್ಯಕ್ತಿ ಮೊದಲು ಅನ್ವರ್ ನನ್ನು ಕರೆದು ಮಾತನಾಡಿಸಿದ್ಧಾನೆ. ಅನ್ವರ್ಗೆ ಆತ ಪರಿಚಯವಿದ್ದಿದ್ದಕ್ಕೆ ಉಳವಿ ಬಸಪ್ಪ ದೇವಸ್ಥಾನದ ಜಾತ್ರೆಗೆ ಹೋಗೋಣ ಬರುತ್ತೀಯಾ ಅಂತಾ ಕೇಳಿದ್ದಾನೆ. ಆ ಮುಗ್ಧ ಬಾಲಕ ಬರುತ್ತೇನೆ ಅಂತಾ ಹೇಳಿದಾಗ ಪಕ್ಕದಲ್ಲಿಯೇ ಇದ್ದ ಲಕ್ಷ್ಮೀಯನ್ನು ಕೂಡ ಕೇಳಿದ್ದಾನೆ. ಆ ಬಾಲಕಿ ಕೂಡ ಬರೋದಾಗಿ ಹೇಳಿದ್ದಾಳೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: 3 ಅಪ್ರಾಪ್ತ ಬಾಲಕರಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಬಾಲಕಿಗೆ ಕಿರುಕುಳ, ಹಲ್ಲೆ
ಕೂಡಲೇ ಇಬ್ಬರನ್ನೂ ಹತ್ತಿಸಿಕೊಂಡ ಆ ವ್ಯಕ್ತಿ ಅಲ್ಲಿಂದ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಯಾವಾಗ ಮಧ್ಯಾಹ್ನದ ಬಳಿಕ ತರಗತಿಯಲ್ಲಿ ಇಬ್ಬರು ಮಕ್ಕಳು ಕಾಣಲಿಲ್ಲವೋ ಶಿಕ್ಷಕರು ಅವರಿಬ್ಬರ ಪೋಷಕರಿಗೆ ಫೋನ್ ಮಾಡಿ, ಮಕ್ಕಳು ಮನೆಗೆ ಬಂದಿದ್ದಾರಾ ಅಂತಾ ಕೇಳಿದ್ದಾರೆ. ಆಗ ಮನೆಗೆ ಬಂದಿಲ್ಲ ಅನ್ನೋದು ಗೊತ್ತಾಗುತ್ತಿದ್ದಂತೆಯೇ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದು, ವ್ಯಕ್ತಿಯೊಬ್ಬ ಇಬ್ಬರು ಮಕ್ಕಳನ್ನು ಬೈಕ್‌ನಲ್ಲಿ ಹತ್ತಿಸಿಕೊಂಡು ಅಲ್ಲಿಂದ ಪರಾರಿಯಾಗಿರುವುದು ಗೊತ್ತಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಪೊಲೀಸರು ಎಲ್ಲಾ ಕಡೆ ಮಾಹಿತಿ ರವಾನಿಸಿದ್ಧಾರೆ. ಇದೇ ವೇಳೆ ಈ ಮಾಹಿತಿ ಸಿಗುತ್ತಿದ್ದಂತೆಯೇ ಶಾಲೆಗೆ ಆಗಮಿಸಿದ ಅನೇಕ ಪೋಷಕರು ಶಾಲೆಯ ಮುಂದೆ ಜಮಾವಣೆಗೊಂಡರು. ಈ ವೇಳೆ ಎಲ್ಲರ ಮುಖದಲ್ಲಿಯೂ ಆತಂಕ ಎದ್ದು ಕಾಣುತ್ತಿತ್ತು. ಇನ್ನು ಅಪಹರಣಗೊಂಡ ಮಕ್ಕಳ ಪೋಷಕರಂತೂ ತಮ್ಮ ಮಕ್ಕಳು ಎಲ್ಲಿದ್ದಾರೋ? ಹೇಗಿದ್ದಾರೋ? ಅನ್ನೋ ಆತಂಕದಲ್ಲಿಯೇ ಇದ್ದರು.
ಮಕ್ಕಳು ಸಿಕ್ಕಿದ್ಹೇಗೆ?
ಇನ್ನು ಇದೇ ವೇಳೆ ಪೊಲೀಸರಿಗೆ ಮಾಹಿತಿಯೊಂದು ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ಬೈಕ್ ವೊಂದು ರಸ್ತೆ ಬದಿಯ ಗುಂಡಿಯಲ್ಲಿ ಬಿದ್ದಿದ್ದು, ಬೈಕ್ ಮೇಲೆ ಓರ್ವ ವ್ಯಕ್ತಿ ಹಾಗೂ ಇಬ್ಬರು ಮಕ್ಕಳಿರುವ ಮಾಹಿತಿ ಲಭ್ಯವಾಗಿದೆ. ಇದೇ ವೇಳೆ ದಾಂಡೇಲಿ ಪೊಲೀಸರು ವ್ಯಕ್ತಿಯ ವಿಚಾರಣೆ ನಡೆಸಿದಾಗ ಆತ ಧಾರವಾಡ ನಗರದ ಅಬ್ದುಲ್ ಕರೀಂ ಮೇಸ್ತ್ರಿ ಅನ್ನೋದು ಖಚಿತವಾಗಿದೆ. ಅಪಘಾತದಲ್ಲಿ ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತನಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: ಮನೆ ಹೆಸರಲ್ಲಿ ಮಸೀದಿ ನಿರ್ಮಾಣ: ರೊಚ್ಚಿಗೆದ್ದ ಹಿಂದೂ ಸಂಘಟನೆಗಳು
ಇದೀಗ ಉಪನಗರ ಠಾಣೆ ಪೊಲೀಸರು ಪೋಷಕರಿಂದ ದೂರನ್ನು ಪಡೆದಿದ್ದು, ದಾಂಡೇಲಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಅಬ್ದುಲ್ ಕರೀಂ ಯಾವ ಕಾರಣಕ್ಕೆ ಈ ಎರಡೂ ಮಕ್ಕಳನ್ನು ಅಪಹರಣ ಮಾಡಿದ ಅನ್ನೋದರ ಬಗ್ಗೆ ಖಾಕಿ ತನಿಖೆ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ಅಪಘಾತವೊಂದು ಎರಡೂ ಮಕ್ಕಳನ್ನು ಪತ್ತೆ ಹಚ್ಚಲು ಕಾರಣವಾಗಿದ್ದು ಮಾತ್ರ ವಿಚಿತ್ರ ಸಂಗತಿಯೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
