ಮನೆ ಹೆಸರಲ್ಲಿ ಮಸೀದಿ ನಿರ್ಮಾಣ: ರೊಚ್ಚಿಗೆದ್ದ ಹಿಂದೂ ಸಂಘಟನೆಗಳು
ಹುಬ್ಬಳ್ಳಿಯ ನೇಕಾರ ನಗರದಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ಪಡೆದು, ಅಕ್ರಮವಾಗಿ ಮಸೀದಿ ನಿರ್ಮಿಸಿದ ಆರೋಪ ಕೇಳಿಬಂದಿದೆ. ಹಿಂದೂಗಳ ಬಹುಸಂಖ್ಯಾತ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಂದು ಸ್ಥಳೀಯ ಹಿಂದೂ ಸಮುದಾಯದಿಂದ ಬೃಹತ್ ಪ್ರತಿಭಟನೆ ಮಾಡಲಾಗಿದೆ. ಒಂದು ವಾರದೊಳಗೆ ಮಸೀದಿ ತೆರವಿಗೆ ಆಗ್ರಹಿಸಿದ್ದಾರೆ.

ಹುಬ್ಬಳ್ಳಿ, ಜನವರಿ 02: ನಗರದ ನೇಕಾರ ನಗರದ ಶಿವನಾಗರ ಬಡಾವಣೆಯಲ್ಲಿ ಕುಟುಂಬವೊಂದು ಮನೆ ನಿರ್ಮಾಣಕ್ಕೆ ಪಾಲಿಕೆಯಿಂದ ಪರವಾನಗಿ ಪಡೆದು ಮನೆ ನಿರ್ಮಾಣ ಮಾಡಿತ್ತು. ಆದರೆ ಹಿಂದೂ ಧರ್ಮದವರು ಹೆಚ್ಚಿರುವ ಸ್ಥಳದಲ್ಲಿ ಮುಸ್ಲಿಂ ಸಮುದಾಯ ಮನೆ ಕಟ್ಟಿದ್ದಕ್ಕೆ ಯಾರು ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ ಮನೆ ಕಟ್ಟಿದವರು ವಾಸಿಸುವ ಬದಲು, ಅದನ್ನು ಮಸೀದಿಯಾಗಿ (Mosque) ಬದಲಾವಣೆ ಮಾಡಲಾಗಿದೆ. ಮನೆ ಮುಂದೆಯೇ ಮಸೀದಿ ನಿರ್ಮಾಣ ಮಾಡಿ, ಪ್ರತಿನಿತ್ಯ ನೂರಾರು ಜನರು ನಮಾಜ್ ಮಾಡಲು ಆರಂಭಿಸಿದ್ದರು. ಇದು ಬಹುಸಂಖ್ಯಾತ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ರಮವಾಗಿ ಕಟ್ಟಿರುವ ಮಸೀದಿ ತೆರವುಗೊಳಿಸಬೇಕು ಅಂತ ಆಗ್ರಹಿಸಿ ಇಂದು ಬೃಹತ್ ಪ್ರತಿಭಟನೆ (Protest) ಮಾಡಿದ್ದಾರೆ.
ಹುಬ್ಬಳ್ಳಿ ನಗರದ ನೇಕಾರನಗರ, ಶಿವನಾಗರ ಬಡಾವಣೆ, ಛಬ್ಬಿ ಪ್ಲಾಟ್ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯಲ್ಲಿ ಶೇಕಡಾ 95ಕ್ಕೂ ಹೆಚ್ಚು ಹಿಂದೂಗಳೇ ವಾಸವಾಗಿದ್ದಾರೆ. ಆದರೆ ಇದೇ ಛಬ್ಬಿ ಪ್ಲಾಟ್ ಮತ್ತು ಶಿವನಾಗರ ಬಡಾವಣೆಗೆ ಹೊಂದಿಕೊಂಡು ಮುಸ್ಲಿಂ ಸಮುದಾಯದವರೊಬ್ಬರು ಮನೆ ಕಟ್ಟಿಕೊಂಡಿದ್ದಾರೆ. ಇಲ್ಲಿನ ಜನರು ಅನ್ಯ ಧರ್ಮೀಯರು ಮನೆ ಕಟ್ಟಿಕೊಂಡಿದ್ದಕ್ಕೆ, ಅವರು ಅಲ್ಲೇ ವಾಸವಾಗಿದ್ದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ ಮನೆ ನಿರ್ಮಾಣ ಮಾಡಿದ್ದ ಜಹೀರ್ ಸಾರವಾಡ್, ಜಾಕೀರ್ ಸಾರವಾಡ್ ಅನ್ನೋ ಸಹೋದರರು, ಅಲ್ಲಿ ವಾಸವಾಗದೇ ಅಲ್ಲಿ ಮಸೀದಿ ನಿರ್ಮಾಣ ಮಾಡಿದ್ದರು.
ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಭಾಗಿಗೆ ವಿರೋಧ: ಕೃಷಿ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಂಘದ ಪದಗ್ರಹಣ ರದ್ದು
ಪಾಲಿಕೆಯಿಂದ ಪರವಾನಗಿ ಪಡೆದಿದ್ದು ಮನೆಗಾಗಿ, ಆದರೆ ಅಲ್ಲಿ ಮಸೀದಿ ನಿರ್ಮಾಣ ಮಾಡಿದ್ದರಂತೆ. ಜೊತೆಗೆ ಅಲ್ಲಿ ಪ್ರತಿನಿತ್ಯ ಐವತ್ತರಿಂದ ನೂರು ಜನರು ಆಗಮಿಸಿ ನಮಾಜ್ ಮಾಡೋದು ಮಾಡುತ್ತಿದ್ದರಂತೆ. ಇದು ಸ್ಥಳೀಯ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈಗಾಗಲೇ ಸುತ್ತಮುತ್ತ ಮೂರು ಮಸೀದಿಗಳಿವೆ. ಇದೀಗ ಮತ್ತೆ ಮನೆಯೊಂದರಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಿದ್ದಾರೆ ಅಂತ ಆರೋಪಿಸಿ, ಅದನ್ನು ತೆರವುಗೊಳಿಸಬೇಕು ಅಂತ ಆಗ್ರಹಿಸಿದ್ದರು.
ಕಳೆದ ಐದಾರು ತಿಂಗಳಿಂದ ಸ್ಥಳೀಯರು ಮತ್ತು ಮಸೀದಿ ನಿರ್ಮಾಣ ಮಾಡಿದ್ದ ಸಾರವಾಡ್ ಕುಟುಂಬದವರ ನಡುವೆ ವಾಗ್ವಾದಗಳು ಮೇಲಿಂದ ಮೇಲೆ ನಡೆಯುತ್ತಲೇ ಇದ್ದವು. ಈ ಪ್ರಕರಣ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಮಟ್ಟಿಲೇರಿತ್ತು. ಪೊಲೀಸರು ಕೂಡ ಎರಡು ಕಡೆಯವರನ್ನು ಕರೆಸಿ, ಶಾಂತಿ ಸುವ್ಯವಸ್ಥೆ ಹಾಳು ಮಾಡದಂತೆ ಎಚ್ಚರಿಕೆ ನೀಡಿದ್ದರು. ಆದರೆ ಅನ್ಯ ಧರ್ಮೀಯರು, ನಮಾಜ್ ಮಾಡುವುದು ಮುಂದುವರಿಸಿದ್ದರಿಂದ ಹಿಂದೂ ಧರ್ಮೀಯರು ಹೋರಾಟಕ್ಕೆ ಕರೆ ಕೊಟ್ಟಿದ್ದರು. ಇಂದು ಹುಬ್ಬಳ್ಳಿ ನಗರದ ನೇಕಾರ ನಗರದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಸೇರಿದ್ದ ನೂರಾರು ಜನರು ಪ್ರತಿಭಟನೆ ಮಾಡಿದರು.
ಮಸೀದಿ ತೆರವುಗೊಳಿಸದಿದ್ದರೆ ಮತ್ತೆ ಹೋರಾಟ ಎಂದ ಪ್ರಮೋದ್ ಮುತಾಲಿಕ್
ಪ್ರತಿಭಟನೆ ಹಿನ್ನೆಲೆಯಲ್ಲಿ ನೇಕಾರ ನಗರ ಸೇರಿದಂತೆ ಮಸೀದಿ ನಿರ್ಮಾಣ ಮಾಡಿದ್ದ ಸ್ಥಳದ ಸುತ್ತಮುತ್ತ ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆಮ ಮಾಡಲಾಗಿತ್ತು. ಬ್ಯಾರಿಕೇಡ್ಗಳನ್ನು ಹಾಕಿ ಮಸೀದಿ ನಿರ್ಮಾಣ ಮಾಡಿದ್ದ ಸ್ಥಳಕ್ಕೆ ಬೇರೆಯವರು ಹೋಗದಂತೆ ನಿಷೇಧ ಹೇರಲಾಗಿತ್ತು. ಇನ್ನು ಪ್ರತಿಭಟನೆಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭಾಗಿಯಾಗಿದ್ದರು. ಮನೆ ನಿರ್ಮಾಣ ಅಂತ ಹೇಳಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಲಾಗಿದೆ. ಅಲ್ಲಿ ಪ್ರತಿನಿತ್ಯ ನೂರಾರು ಜನರು ಬಂದು ನಮಾಜ್ ಮಾಡ್ತಿದ್ದಾರೆ. ಸುತ್ತಮುತ್ತ ಮೂರು ಮಸೀದಿಗಳಿದ್ದರು ಕೂಡ, ಮತ್ತೊಂದು ಮಸೀದಿಯನ್ನು ಅಕ್ರಮವಾಗಿ ನಿರ್ಮಾಣ ಮಾಡಿದ್ದಾರೆ. ನಾವು ಎಲ್ಲಿಯಾದರೂ ಪ್ರಾರ್ಥನೆ ಮಾಡಿದರೆ, ದೇವಸ್ಥಾನ ಕಟ್ಟಿದ್ದರೆ ನಮ್ಮ ಮೇಲೆ ಕೇಸ್ ಹಾಕುತ್ತಾರೆ. ಅವುಗಳನ್ನು ತೆರವು ಮಾಡುತ್ತಾರೆ. ಆದರೆ ಇಲ್ಲಿ ಪರವಾನಗಿ ಪಡೆಯದೇ ಮಸೀದಿ ನಿರ್ಮಾಣ ಮಾಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು. ಒಂದು ವಾರದೊಳಗೆ ನಿರ್ಮಾಣ ಮಾಡಿರುವ ಮಸೀದಿಯನ್ನು ತೆರವುಗೊಳಿಸದೇ ಇದ್ದರೆ ಮತ್ತೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ‘ನಮ್ಮ ಮೇಲೆ ಕೃಪೆ ತೋರಿ’: ಮಂತ್ರಾಲಯದ ರಾಯರಿಗೆ ವಿಚಿತ್ರ ಪತ್ರ ಬರೆದ ಉದ್ಯೋಗಾಕಾಂಕ್ಷಿಗಳು
ಘಟನಾ ಸ್ಥಳಕ್ಕೆ ಗುರುವಾರ ಪಾಲಿಕೆ ಮೇಯರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಕ್ರಮವಾಗಿ ನಿರ್ಮಾಣ ಮಾಡಿರುವ ಮಸೀದಿ ತೆರವಿಗೆ ಗಡುವು ನೀಡಿದ್ದಾರೆ. ಇನ್ನು ಹಿಂದೂಗಳೇ ಹೆಚ್ಚಾಗಿರುವ ಪ್ರದೇಶದಲ್ಲಿ ಮಸೀದಿ ನಿರ್ಮಾಣಕ್ಕೆ ಹಿಂದೂಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಅನ್ನೋದಕ್ಕೆ ಕಾಲವೇ ಉತ್ತರ ಹೇಳಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



