AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಕ್ರವರ್ತಿ ಸೂಲಿಬೆಲೆ ಭಾಗಿಗೆ ವಿರೋಧ: ಕೃಷಿ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಂಘದ ಪದಗ್ರಹಣ ರದ್ದು

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಘದ ಪದಗ್ರಹಣದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಭಾಗಿಗೆ ದಲಿತ ಸಂಘಟನೆಗಳು ಮತ್ತು ವಿವಿ ಬೋರ್ಡ್ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಕಾರ್ಯಕ್ರಮ ರದ್ದಾಗಿದೆ. ಸೂಲಿಬೆಲೆ ಕೋಮು ಗಲಭೆಗೆ ಕಾರಣವಾಗುವ ವ್ಯಕ್ತಿ ಎಂದು ಆರೋಪಿಸಿದ ಪ್ರತಿಭಟನಕಾರರು, ಕುಲಪತಿಗಳ ನಡೆ ಬಗ್ಗೆಯೂ ಆಕ್ರೋಶ ಹೊರಹಾಕಿದ್ದಾರೆ.. ಘಟನೆ ಸಂಬಂಧ ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದ ಪ್ರಸಂಗವೂ ನಡೆದಿದೆ.

ಚಕ್ರವರ್ತಿ ಸೂಲಿಬೆಲೆ ಭಾಗಿಗೆ ವಿರೋಧ: ಕೃಷಿ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಂಘದ ಪದಗ್ರಹಣ ರದ್ದು
ಕೃಷಿ ವಿಶ್ವ ವಿದ್ಯಾಲಯದ ಗೇಟ್​​ ಬಳಿ ಪ್ರತಿಭಟನೆ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on:Dec 30, 2025 | 5:07 PM

Share

ಧಾರವಾಡ, ಡಿಸೆಂಬರ್​​ 30: ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಕಾರ್ಯಕ್ರಮ ರದ್ದಾಗಿದೆ. ಸೂಲಿಬೆಲೆ‌ ಭಾಗವಹಿಸೋದನ್ನು ವಿರೋಧಿಸಿ ದಲಿತ ಸಂಘಟನೆ, ಕೃಷಿ ವಿವಿ ಬೋರ್ಡ್ ಸದಸ್ಯರು ವಿಶ್ವ ವಿದ್ಯಾಲಯದ ಗೇಟ್ ಮುಂದೆ ಧರಣಿ ನಡೆಸಿದ್ದು, ಕಾರ್ಯಕ್ರಮ ರದ್ದಾದರೂ ಪ್ರತಿಭಟನೆ ಮುಂದುವರಿಸಿದ ಪ್ರಸಂಗ ನಡೆದಿದೆ. ಹೀಗಾಗಿ ಪ್ರತಿಭಟನಾನಿರತರನ್ನು ಉಪನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೃಷಿ ವಿವಿ ಕುಲಪತಿ ಪಿ.ಎಲ್. ಪಾಟೀಲ್ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್​​ ಒಳಗೆ ನಡೆಯುವ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಗಿಯಾಗುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಶಾಸಕರು, ಸಚಿವರನ್ನು ಕರೆಯದೆ ಸೂಲಿಬೆಯವರನ್ನೇ ಕರೆದಿದ್ದು ಯಾಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ಮನವಿ ಸ್ವೀಕರಿಸಲು ಬಂದಿದ್ದ ಡೀನ್​​ರನ್ನು ಕೂಡ ತರಾಟೆಗೆ ಪಡೆಯಲಾಗಿದ್ದು, ಕುಲಪತಿಗಳೇ ಬಂದು ನಮ್ಮ ಮನವಿ ಸ್ವೀಕಾರ ಮಾಡಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಜೊತೆಗೆ ಕೆಲ ಉದ್ರಿಕ್ತರು ವಿಶ್ವವಿದ್ಯಾಲಯದ ಗೇಟ್ ಏರಿ ಪ್ರತಿಭಟನೆ ನಡೆಸಿದ ಕಾರಣ ಹೈಡ್ರಾಮಾವೇ ನಡೆದಿದೆ.

ಇದನ್ನೂ ಓದಿ:  ಶಿಕ್ಷಕರ ಕೊರತೆ; ಸರ್ಕಾರಿ ಶಾಲೆಗಳ ವಿಲೀನಕ್ಕೆ ಶಿಕ್ಷಣ ಇಲಾಖೆ ಚಿಂತನೆ

ಸಮಾಜದಲ್ಲಿ ಕೋಮು ಗಲಭೆಗೆ ಕಾರಣವಾಗುವಂತವರನ್ನು ಕರೆದು ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸಬಾರದು. ಅದರ ಬದಲು, ಕೃಷಿ ಸಾಧಕರನ್ನೋ, ವಿಜ್ಞಾನಿಗಳನ್ನೋ ಕರೆಸಬಹುದಿತ್ತು. ಸಿಂಂಡಿಕೇಟ್​​​ ಮೆಂಬರ್​​ಗಳಿಗೆ ತಿಳಿಸದೆ ಕುಲಪತಿಗಳು ಕಾರ್ಯಕ್ರಮ ಮಾಡಲು ಹೊರಟಿದ್ದಾರೆ. ಇದೇ ರೀತಿ ಅವರು ಉದ್ಧಟತನ ಮುಂದುವರಿಸಿದರೆ ಅವರ ಕಚೇರಿಗೆ ನುಗ್ಗಿ ದಾಂಧಲೆ ನಡೆಸುತ್ತೇವೆ ಎಂದು ಡಿಎಸ್​​ಎಸ್​​ ಮುಖಂಡ ಪರಮೇಶ್​​ ಎಚ್ಚರಿಸಿದ್ದಾರೆ. ಮೊನ್ನೆ ನಡೆದ ಬೋರ್ಡ್​​ ಮೀಟಿಂಗ್​​ನಲ್ಲಿಯೂ ಕುಲಪತಿಗಳು ಈ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಶಿಷ್ಟಾಚಾರ ಉಲ್ಲಂಘಿಸಿ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗ್ತಿದೆ. ಚಕ್ರವರ್ತಿ ಸೂಲಿಬೆಲೆ ಏನು ಚಿನ್ನದ ರಸ್ತೆ ಮಾಡಲು ಇಲ್ಲಿ ಬರುತ್ತಿದಾರಾ? ಎಂದು ಸಿಂಡಿಕೇಟ್​​ ಸದಸ್ಯ ರವಿ ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:06 pm, Tue, 30 December 25