ಶಿಕ್ಷಕರ ಕೊರತೆ: ಸರ್ಕಾರಿ ಶಾಲೆಗಳ ವಿಲೀನಕ್ಕೆ ಶಿಕ್ಷಣ ಇಲಾಖೆ ಚಿಂತನೆ
ಕರ್ನಾಟಕದಲ್ಲಿ 50 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದೆ. ಇದನ್ನು ನಿಭಾಯಿಸಲು ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳ ವಿಲೀನಕ್ಕೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಈ ನಡೆಗೆ ಪೋಷಕರು ಮತ್ತು ಶಿಕ್ಷಣ ಚಿಂತಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಶಿಕ್ಷಣ ಸಚಿವರು ಶಾಲೆ ಮುಚ್ಚುವ ವದಂತಿ ಅಲ್ಲಗಳೆದಿದ್ದಾರೆ.

ಬೆಂಗಳೂರು, ನವೆಂಬರ್ 14: ಕರ್ನಾಟಕದಲ್ಲಿ (Karnataka) ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ಕೊರತೆ ಇದೆ. ಮಾದರಿ ಶಾಲೆ (Schools) ಸೇರಿದಂತೆ ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಈ ಶಿಕ್ಷಕರ ಕೊರತೆ ಸರಿಪಡಿಸಲು ಶಿಕ್ಷಣ ಇಲಾಖೆ ಶಾಲೆಗಳ ವಿಲೀನದ ಚಿಂತನೆಗೆ ಮುಂದಾಗಿರುವ ಆರೋಪ ಶುರುವಾಗಿದೆ.
ಸರ್ಕಾರಿ ಶಾಲೆಗಳ ವಿಲೀನಕ್ಕೆ ಸರ್ಕಾರ ಮುಂದಾಯ್ತಾ ಎಂಬ ಮಾತುಗಳು ಕೇಳಿಬರುತ್ತಿವೆ. ಕಡಿಮೆ ಮಕ್ಕಳ ಸಂಖ್ಯೆ ಮುಂದಿಟ್ಟುಕೊಂಡು ಶಿಕ್ಷಕರ ಕೊರತೆ ಸರಿಪಡಿಸಲು ಸರ್ಕಾರಿ ಶಾಲೆಗಳನ್ನ ಮುಚ್ಚಲು ಶಿಕ್ಷಣ ಇಲಾಖೆ ಪ್ಲಾನ್ ಮಾಡಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಶೈಕ್ಷಣಿಕ ಅವಧಿ ಕಡಿಮೆ: SSLC ಪರೀಕ್ಷೆಗೆ ಬ್ಲೂಪ್ರಿಂಟ್ ಸಿದ್ಧ, ಉತ್ತೀರ್ಣ ನಿಯಮದಲ್ಲಿ ಬದಲಾವಣೆ
ರಾಜ್ಯದಲ್ಲಿ 150 ಶಾಲೆಗಳಲ್ಲಿ 0 ಮಕ್ಕಳಿರುವ ಶಾಲೆಗಳಿವೆ. 0 ದಿಂದ 10 ಮಕ್ಕಳಿರುವ 3646 ಶಾಲೆಗಳಿವೆ. ಈ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರಿದ್ದಾರೆ. ಹೀಗಾಗಿ ಕಡಿಮೆ ವಿದ್ಯಾರ್ಥಿಗಳು ಅಂದರೆ 10ಕ್ಕಿಂತ ಕಡಿಮೆ ದಾಖಲಾತಿ ಇರುವ ಶಾಲೆಗಳನ್ನ ವಿಲೀನ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಚಿಂತನೆ ಶುರುಮಾಡಿದೆ ಎನ್ನಲಾಗಿದೆ.
ಸುತ್ತೋಲೆ ವೈರಲ್
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯನ್ನು ಒಟ್ಟುಗೂಡಿಸಿ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಪರಿವರ್ತಿಸಲು ಅನುಮತಿ ನೀಡಿರುವ ಶಿಕ್ಷಣ ಇಲಾಖೆ, ಈ ಶಾಲೆಯ ಸುತ್ತಲ 6 ಕಿಮೀ ವ್ಯಾಪ್ತಿಯ 7 ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಲು ಒಪ್ಪಿಗೆ ನೀಡಿದೆ. ಅದರಂತೆ ಶಾಲೆಗಳ ವಿಲೀನಕ್ಕೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮ ವಹಿಸಿ ಸುತ್ತೋಲೆ ನೀಡಿದ್ದು, ಸದ್ಯ ಸಾಕಷ್ಟು ವೈರಲ್ ಆಗುತ್ತಿದೆ.
ಇನ್ನು 2026-27ನೇ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಹೊಸದಾಗಿ 700 ಕೆಪಿಎಸ್ ಶಾಲೆ ಆರಂಭಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿದೆ. ಈ ಒಂದೊಂದು ಕೆಪಿಎಸ್ ಶಾಲೆಗಳಿಗೂ ಸುತ್ತಮುತ್ತಲ ಐದಾರು ಕಿಮೀ ವ್ಯಾಪ್ತಿಯ ಕನಿಷ್ಠ 5ರಿಂದ ಗರಿಷ್ಠ 10 ಶಾಲೆಗಳ ವಿಲೀನಕ್ಕೆ ಸದ್ದಿಲ್ಲದೆ ಪ್ರಕ್ರಿಯೆ ಆರಂಭವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದರಿಂದ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಕನಿಷ್ಠ 5 ಸಾವಿರದಿಂದ ಗರಿಷ್ಠ 7 ಸಾವಿರ ಸರ್ಕಾರಿ ಶಾಲೆಗಳು ಈ ಕೆಪಿಎಸ್ ಶಾಲೆಗಳಲ್ಲಿ ವಿಲೀನವಾಗಲಿವೆ ಎನ್ನಲಾಗುತ್ತಿದೆ.
ಸರ್ಕಾರಿ ಶಾಲೆಗಳನ್ನು ಮುಚ್ಚಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರಿ ಶಾಲೆಗಳನ್ನು ಮುಚ್ಚಲ್ಲ, ಯಾರು ಈ ವದಂತಿ ಹಬ್ಬಿಸುತ್ತಾರೋ ಅವರು ಬಾಯಿ ಮುಚ್ಕೊಂಡು ಇರಬೇಕು. ಒಂದು ಮಗು ಇದ್ದರೂ ಸರ್ಕಾರಿ ಶಾಲೆ ಮುಚ್ಚುವುದಿಲ್ಲ. ಶಾಲೆಗಳನ್ನು ಮುಚ್ಚುವ ಕುರಿತು ಬಿಇಒ ಸುತ್ತೋಲೆ ವೈರಲ್ ಆಗುತ್ತಿರುವ ಬಗ್ಗೆ ಪರಿಶೀಲಿಸುತ್ತೇವೆ ಎಂದಿದ್ದಾರೆ.
ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಇದು ಸ್ಪಷ್ಟ, ಆದರೆ ಶಾಲೆಗಳ ವಿಲೀನ ಸಹಜ ಇರುತ್ತೆ. ಶಾಲೆ ಬಂದ್ ಮಾಡಲ್ಲ. ಶಾಲೆಗಳಿಗೆ ಮಕ್ಕಳ ವಿಲೀನವಾಗುತ್ತಿರುತ್ತಾರೆ. ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಮಕ್ಕಳ ಹೋಗಬಹುದು. ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಒಂದು ಮಗು ಇದ್ದರೂ ಶಾಲೆ ಇರುತ್ತೆ ಮುಚ್ಚಲ್ಲ. ಕಿಡಿಗೇಡಿಗಳು ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಪೋಷಕರು ಕಿವಿ ಕೊಡಬೇಡಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸದ್ಯ ಸರ್ಕಾರದ ಈ ನಡಗೆ ತೀವ್ರ ವಿರೋಧ ಕೇಳಿ ಬರುತ್ತಿದೆ. ಮಕ್ಕಳ ದಿನದ ಕಾರ್ಯಕ್ರಮದಲ್ಲೂ ಪೋಷಕರು ಈ ಪ್ರಶ್ನೆ ಕೇಳುತ್ತಿದ್ದಾರೆ. ಇನ್ನು ಶಿಕ್ಷಣ ಚಿಂತಕ ಲೋಕೇಶ್ ತಾಳಿಕಟ್ಟೆ ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಪಾಸಿಂಗ್ ಮಾರ್ಕ್ಸ್ ಕಡಿತಗೊಳಿಸಿದ್ದಕ್ಕೆ ಹೊರಟ್ಟಿ ಬೇಸರ: ಪತ್ರದ ಮೂಲಕ ಶಿಕ್ಷಣ ಸಚಿವರಿಗೆ ಸಲಹೆ
ಒಟ್ಟಿನಲ್ಲಿ ಸರ್ಕಾರಿ ಶಾಲೆ ಹಾಗೂ ಕಾಲೇಜ್ಗಳಲ್ಲಿ ಶೇ 90% ಬಡ ಮಕ್ಕಳು ಓದುತ್ತಿದ್ದಾರೆ. ಹೀಗಾಗಿ ಸರ್ಕಾರ ಮೊದಲು ಸರ್ಕಾರಿ ಶಾಲೆಗಳತ್ತ ಹೆಚ್ಚು ಗಮನಹರಿಸಬೇಕಿದೆ. ವಿಲೀನ ಪ್ರಕ್ರಿಯೆ ಬಿಟ್ಟು ಮಕ್ಕಳ ಭವಿಷ್ಯಕ್ಕೆ ಶಿಕ್ಷಕರ ನೇಮಕಾತಿ ಜೊತೆಗೆ ಸರ್ಕಾರಿ ಶಾಲಾಕಾಲೇಜ್ಗಳನ್ನ ಮಾದರಿಯಾಗಿ ಮಾಡಬೇಕಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



