Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗುವಂತೆ ಚಕ್ರವರ್ತಿ ಸೂಲಿಬೆಲೆ ಕರೆ: ವ್ಯಾಪಕ ವಿರೋಧ

ಹಿಂದೂ ಯುವಕರು ಅನ್ಯ ಧರ್ಮದ ಯುವತಿಯರನ್ನು ಮದುವೆಯಾಗಬೇಕೆಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಂಗಳೂರಿನಲ್ಲಿ ಕರೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಚಕ್ರವರ್ತಿ ಹೇಳಿಕೆಗೆ ಡಿವೈಎಫ್ಐ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಹಾಗಾದರೆ, ಚಕ್ರವರ್ತಿ ಹೇಳಿದ್ದೇನು? ಏನೆಲ್ಲ ವಿರೋಧ ವ್ಯಕ್ತವಾಯಿತು? ಇಲ್ಲಿದೆ ವಿವರ.

ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗುವಂತೆ ಚಕ್ರವರ್ತಿ ಸೂಲಿಬೆಲೆ ಕರೆ: ವ್ಯಾಪಕ ವಿರೋಧ
ಚಕ್ರವರ್ತಿ ಸೂಲಿಬೆಲೆ
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: Ganapathi Sharma

Updated on: Mar 10, 2025 | 2:14 PM

ಮಂಗಳೂರು, ಮಾರ್ಚ್​ 10: ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗುವಂತೆ ಹಿಂದೂ ಯುವಕರಿಗೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಕರೆ ನೀಡಿದರು. ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ (Ullal) ತಾಲೂಕಿನ ಕುತ್ತಾರು ಎಂಬಲ್ಲಿ ವಿಹೆಚ್​ಪಿ (VHP) ಹಮ್ಮಿಕೊಂಡಿದ್ದ ‘‘ಕೊರಗಜ್ಜನ‌ ಆದಿ ಕ್ಷೇತ್ರಕ್ಕೆ ನಮ್ಮ ನಡೆ’’ ಪಾದಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಎಲ್ಲಿಯ ವರೆಗೂ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿರೋಣ? ಸ್ವಲ್ಪ ಬದಲಾವಣೆ ತರೋಣ. ನಮ್ಮ ಗಂಡು ಮಕ್ಕಳಿಗೂ ಈ ಬಗ್ಗೆ ಹೇಳಬೇಕು ಎಂದರು.

ಎಷ್ಟು ದಿನ ಅಂತ ನಮ್ಮದೇ ಹೆಣ್ಣುಮಕ್ಕಳನ್ನು ನೋಡುತ್ತೀರಾ? ಹುಡುಗಿ ಸಿಗಲಿಲ್ಲ, ಹುಡುಗಿ ಸಿಗಲಿಲ್ಲ ಎಂದು ಎಷ್ಟು ದಿನ ಅಂತ ಹೇಳೋಣ. ಸ್ವಲ್ಪ ಬೇರೆಯವರನ್ನು ನೋಡಿ ಅಲ್ವಾ. ನಮ್ಮ ಸಮಾಜದಲ್ಲಿ ನಾವು ನಮ್ಮ ಸಮಾಜದ ಗಂಡು ಮಕ್ಕಳಿಗೆ ಹೆಣ್ಣು ಸಿಕ್ಕಿಲ್ಲವೆಂದು ಆಲೋಚನೆ ಮಾಡುತ್ತಿರುವಾಗ, ಪಕ್ಕದ ಸಮಾಜದಲ್ಲೂ ಸಮಸ್ಯೆಗಳು ಇದೆ ಅಲ್ವಾ? ಧೈರ್ಯ ತುಂಬಿ ಅಲ್ವಾ ಎಂದು ಸೂಲಿಬೆಲೆ ಹೇಳಿದರು.

ಆರಂಭದಲ್ಲಿ ನಮ್ಮ (ಹಿಂದೂ) ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಮೂಲಕ ಮದುವೆಯಾಗುತ್ತಿದ್ದರು. ಮತಾಂತರ ಮಾಡುತ್ತಿದ್ದರು. ಈಗ ಹಿಂದೂ ಯುವತಿಯರು ಎಚ್ಚೆತ್ತುಕೊಂಡಿದ್ದಾರೆ. ಹಾಗಾಗಿ, ಹೆಸರನ್ನೇ ಬದಲಾಯಿಸಿ ಹಿಂದೂ ಹೆಸರು ಇಟ್ಟುಕೊಂಡು ಪ್ರೀತಿಯ ನಾಟಕವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಸೂಲಿಬೆಲೆ ಆರೋಪಿಸಿದರು.

ಇದನ್ನೂ ಓದಿ
Image
ದಿಗಂತ್ ಪತ್ತೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಭಜರಂಗದಳ ಮುಖಂಡನಿಗೆ ಬೆದರಿಕೆ
Image
ನೆಲ್ಲಿದಡಿಯಲ್ಲಿ ಈವರೆಗೂ ದೈವಾರಾಧನೆ ನಿಂತಿಲ್ಲ: ಡಿಸಿ ಸ್ಪಷ್ಟನೆ
Image
ನಾಪತ್ತೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕ ಶವವಾಗಿ ಪತ್ತೆ
Image
ದಿಗಂತ್ ನಾಪತ್ತೆ ಕೆಸ್​ಗೆ ​ಟ್ವಿಸ್ಟ್​: SP ಬಿಚ್ಚಿಟ್ಟರು ಸ್ಫೋಟಕ ಮಾಹಿತಿ

ಅನೇಕ ರಾಜ್ಯಗಳಲ್ಲಿ ಮುಸ್ಲಿಂ ಯುವಕರು ಹಿಂದೂ ಹೆಣ್ಣುಮಕ್ಕಳನ್ನು ಓಲೈಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ, ಆ ಕೃತ್ಯವನ್ನು ವಿಡಿಯೋ ಮಾಡಿ ಇಟ್ಟುಕೊಂಡು ಹೆದರಿಸಿ ಮತಾಂತರ ಮಾಡುವ ಕೃತ್ಯಗಳೂ ನಡೆಯುತ್ತಿವೆ ಎಂದು ಸೂಲಿಬೆಲೆ ಆರೋಪಿಸಿದರು.

ಡಿವೈಎಫ್​ಐ ವಿರೋಧ

ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಡಿವೈಎಫ್​ಐ ಮುಖಂಡ ಮುನೀರ್ ಕಾಟಿಪಳ್ಳ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ‘ಟಿವಿ9’ಗೆ ಹೇಳಿಕೆ ನೀಡಿದ ಅವರು, ಚಕ್ರವರ್ತಿ ಸೂಲಿಬೆಲೆ ಭಾಷಣವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಮ್ಮಲ್ಲಿ ಯಾರು ಯಾರನ್ನು ಬೇಕಾದರೂ ಮದುವೆಯಾಗಬಹುದು. ಯಾವ ಧರ್ಮ, ಯಾವ ಜಾತಿಯವರನ್ನು ಬೇಕಾದರೂ ಮದುವೆಯಾಗಲು ನಮ್ಮ ಸಂವಿಧಾನ ನಮಗೆ ಹಕ್ಕನ್ನು ನೀಡಿದೆ‌. ಅದನ್ನು ಸೂಲಿಬೆಲೆ ಹೇಳಬೇಕಾಗಿಲ್ಲ. ಮುಸ್ಲಿಂ ಹೆಣ್ಣುಮಕ್ಕಳನ್ನು ಹಿಂದೂಗಳು, ಹಿಂದೂ ಹೆಣ್ಣು ಮಕ್ಕಳನ್ನು ಮುಸ್ಲಿಮರು ಪರಸ್ಪರ ಒಪ್ಪಿಗೆ ಇದ್ದರೆ ಮದುವೆಯಾಗಲು ಯಾವುದೇ ಸಮಸ್ಯೆಗಳಿಲ್ಲ. ಮುಸ್ಲಿಮರ ವಿರುದ್ಧ ದ್ವೇಷ ಹುಟ್ಟಿಸಲು ಹೇಳಿಕೆ ನೀಡಿದ್ದಾರೆ. ಶಾಂತವಾಗಿರುವ ದಕ್ಷಿಣಕನ್ನಡದ ಸ್ಥಿತಿ ಕೆಡಿಸಲು ಈ ಹೇಳಿಕೆ ನೀಡಿದ್ದಾರೆ. ಕೋಮು ದ್ವೇಷದ ಬೆಳೆ ಬೆಳೆಯಲು ಈ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊರಗ ತನಿಯನ ಕ್ಷೇತ್ರದಲ್ಲಿ ಸೂಲಿಬೆಲೆ ಈ ಭಾಷಣ ಮಾಡಿದ್ದಾರೆ. ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಭಾಷಣ ಮಾಡಿದ್ದಾರೆ. ಕೊರಗಜ್ಜನ ಮೇಲೆ ಇವರಿಗೆ ಯಾವುದೇ ಭಕ್ತಿ ಇಲ್ಲ. ಪೊಲೀಸ್ ಇಲಾಖೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಸೂಲಿಬೆಲೆಯನ್ನು ಬಂಧಿಸಬೇಕು. ಕಾರ್ಯಕ್ರಮ ಆಯೋಜಕರಾದ ವಿ‌ಎಚ್​​ಪಿ, ಭಜರಂಗದಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುನೀರ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಲವಂತದ ಮತಾಂತರಕ್ಕೆ ಮರಣದಂಡನೆ? ಚರ್ಚೆಗೆ ಗ್ರಾಸವಾಗ್ತಿದೆ ಮಧ್ಯ ಪ್ರದೇಶ ಸಿಎಂ ಹೇಳಿಕೆ

ನಾಳೆ ಸೂಲಿಬೆಲೆ ಬೇಕಾದರೆ ಮದುವೆಯಾಗಲಿ. ಅವರು ಸಹ ಅವಿವಾಹಿತರು, ಮುಸ್ಲಿಂ ಹೆಣ್ಣು ಮಕ್ಕಳು ಒಪ್ಪಿದರೆ ಮದುವೆಯಾಗಲಿ‌. ಅದಕ್ಕೆ ನಮ್ಮದೇನು ತಕರಾರು ಇಲ್ಲ. ಆದರೆ ಇದು ಬೆಂಕಿ ಹಚ್ಚುವ ಕೆಲಸ. ಇಲ್ಲಿ ಉದ್ಯೋಗ ಇಲ್ಲದ ಕಾರಣ ಹಿಂದೂ ಯುವಕರಿಗೆ ಹೆಣ್ಣು ಸಿಕ್ತಿಲ್ಲ. ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಕಂಪೆನಿಗಳಿಗೆ ಹೊರ ರಾಜ್ಯದವರನ್ನು ತುಂಬಿಸುತ್ತಿದ್ದಾರೆ. ನಿಜಕ್ಕೂ ಇವರಿಗೆ ಕಾಳಜಿ ಇದ್ರೆ ಕೇಂದ್ರದಲ್ಲಿ ಕಾನೂನು ತಂದು ಜಿಲ್ಲೆಯ ಜನರಿಗೆ ಉದ್ಯೋಗ ಕೊಡಲಿ. ಆಗ ಹೆಣ್ಣು ಸಿಗುತ್ತೆ, ಉದ್ಯೋಗವು ಸಿಗುತ್ತೆ, ಒಳ್ಳೆ ಜೀವನವು ಸಿಗುತ್ತೆ. ಸೂಲಿಬೆಲೆಯಿಂದ ಬುದ್ದಿ ಹೇಳಿಸಿಕೊಳ್ಳುವಂತಹ ದರ್ದು ನಮ್ಮ ಯುವ ಜನರಿಗೆ ಬಂದಿಲ್ಲ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ