ನೆಲ್ಲಿದಡಿಯಲ್ಲಿ ಈವರೆಗೂ ದೈವಾರಾಧನೆ ನಿಂತಿಲ್ಲ: ಡಿಸಿ ಮುಲ್ಲೈ ಮುಗಿಲನ್ ಸ್ಪಷ್ಟನೆ
ಮಂಗಳೂರಿನ MSEZ ವಲಯದಲ್ಲಿ ದೈವಾರಾಧನಾ ಸಂಪ್ರದಾಯಕ್ಕೆ ತಡೆ ಒಡ್ಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ, ಯಥಾಸ್ಥಿತಿ ಕಾಪಾಡಲು ಸೂಚಿಸಿದ್ದಾರೆ. ಕುಟುಂಬಸ್ಥರು ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಸಮಸ್ಯೆಗೆ ಕಾನೂನಿನ ಚೌಕಟ್ಟಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.

ಮಂಗಳೂರು, ಮಾರ್ಚ್ 09: ಇತ್ತೀಚೆಗೆ ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ನಿಂದ ದೈವಾರಾಧನೆಗೆ (Daivaradhane) ತಡೆ ಒಡ್ಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರವಾಗಿ ನಿನ್ನೆ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಡಿಸಿ ಮುಲ್ಲೈ ಮುಗಿಲನ್, ನೆಲ್ಲಿದಡಿಯಲ್ಲಿ ಈವರೆಗೂ ದೈವಾರಾಧನೆ ನಿಂತಿಲ್ಲ. ಲಿಖಿತವಾಗಿ ಅನುಮತಿ ಪಡೆಯದಿದ್ದರೆ ಅವಕಾಶ ಇಲ್ಲ ಎಂದಿದ್ದರಿಂದ ಗೊಂದಲಕ್ಕೆ ಕಾರಣವಾಗಿದೆ. ಶಾಶ್ವತ ಪರಿಹಾರ ಸಿಗುವವರೆಗೂ ಯಥಾಸ್ಥಿತಿ ಕಾಪಾಡಲು ಸೂಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದೈವಾರಾಧನೆಗೆ ಎಸ್ಇಝಡ್ನಿಂದ ಅಡ್ಡಿ ವಿಚಾರವಾಗಿ ನಿನ್ನೆ MSEZ ಅಧಿಕಾರಿಗಳು ಹಾಗೂ ಕುಟುಂಬಸ್ಥರ ಸಭೆಯ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಅಧಿಕಾರಿಗಳು ಅನುಮತಿ ಇಲ್ಲ ಎಂದು ಬರೆದಿದ್ದಾರೆ, ಬಿಟ್ಟರೆ ನಿಲ್ಲಿಸಿಲ್ಲ. 2024ರಲ್ಲಿ ದೊಡ್ಡಮಟ್ಟದ ಬಂಡಿ ಉತ್ಸವ ನಡೆದಿದೆ. ಪ್ರತ್ಯೇಕ ರಸ್ತೆ ನಿರ್ಮಾಣಕ್ಕೆ ಕಾನೂನಾತ್ಮಕ್ಕಾಗಿ ಸಾಧ್ಯತೆ ಬಗ್ಗೆ ಪರಿಶೀಲನೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರು: ಕಾಂತಾರ ಸಿನಿಮಾ ರೀತಿಯಲ್ಲೇ ಕಾಂತೇರಿ ಜುಮಾದಿ ದೈವಾರಾಧನೆಗೆ ಅಡ್ಡಿ ಆರೋಪ
MSEZಗೆ ಒತ್ತುವರಿಯಾದ ಜಾಗದಲ್ಲಿ ಮುಜರಾಯಿಗೆ ಸೇರಿದ ದೈವಸ್ಥಾನವಿದೆ. 2007ರಿಂದಲೂ ಬೇರೆ ರೀತಿಯಲ್ಲಿ ಒತ್ತುವರಿ ಸಂಬಂಧ ಗೊಂದಲ ಇತ್ತು. ಪ್ರತಿ ತಿಂಗಳ ಸಂಕ್ರಮಣಕ್ಕೆ ದೈವಸ್ಥಾನಕ್ಕೆ ಹೋಗಲು ಅನುಮತಿ ನೀಡಬೇಕು ಅನ್ನೋದು ಕುಟುಂಬಸ್ಥರ ಮುಖ್ಯ ಒತ್ತಾಯವಾಗಿದೆ ಎಂದರು.
ದೈವಾರಾಧನೆ ಪ್ರಕ್ರಿಯೆಗಳಿಗೆ ಅಡಚಣೆ ಮಾಡಬಾರದು ಎಂಬ ಬೇಡಿಕೆ ಇದ್ದು, ಇಷ್ಟು ವರ್ಷ ಆಚರಣೆ ಮಾಡ್ತಾ ಬಂದಿದ್ದಾರೆ, ಈವರೆಗೂ ತೊಂದರೆಯಾಗಿಲ್ಲ. ಕುಟುಂಬಸ್ಥರು ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಜಾಗ ಒತ್ತುವರಿವಾಗಿದೆ ವಿಶೇಷ ಆರ್ಥಿಕ ವಲಯ ಎಂದು ಘೋಷಿಸಿದೆ. ವಿಶೇಷ ಆರ್ಥಿಕ ವಲಯ ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂದು ಹೇಳಿದ್ದಾರೆ.
ಸಂಸದ ಬ್ರಿಜೇಶ್ ಚೌಟ ಹೇಳಿದ್ದಿಷ್ಟು
ಸಭೆ ಬಳಿಕ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಪ್ರತಿಕ್ರಿಯಿಸಿ, ತುಳುನಾಡಿನ ನಂಬಿಕೆಯನ್ನ ಕಾನೂನು ಹಾಗೂ ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ಉಳಿಸುವ ಪ್ರಯತ್ನ ಮಾಡುತ್ತೇವೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ಆರ್ಥಿಕ ವಲಯದ ಅಧಿಕಾರಿಗಳ ಹಾಗೂ ಗುತ್ತು ಮನೆತನದವರ ಸಭೆ ನಡೆದಿದೆ. ಧಾರ್ಮಿಕ ವಿಧಿ ವಿಧಾನಗಳಿಗೆ ತೊಂದರೆಯಾಗದ ರೀತಿ ಸಮಸ್ಯೆ ಬಗೆ ಹರಿಸಲು ಚರ್ಚೆ ನಡೆದಿದೆ ಎಂದು ತಿಳಿಸಿದರು.
ಇದನ್ನೂ ಓದಿ: ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವ ವಸ್ತುವಲ್ಲ: ಸರ್ಕಾರದ ವಿರುದ್ಧ ದೈವರಾಧಕರು ಕಿಡಿಕಾರಿದ್ದೇಕೆ?
ಸಮನ್ವಯತೆಗಾಗಿ MSEZ ಅಧಿಕಾರಿಗಳು ಹಾಗು ಕುಟುಂಬಸ್ಥರ ನಡುವೆ ಚರ್ಚೆಯಾಗಿದೆ. MSEZ ಅಧಿಕಾರಿಗಳು ಹಾಗೂ ಕುಟುಂಬಸ್ಥರಿಗೆ ಸಮನ್ವಯಕ್ಕೆ ಬರೋದಕ್ಕೆ ಹೇಳಲಾಗಿದೆ. ನೆಲ್ಲಿದಡಿ ಗುತ್ತುವಿನ ಜಾಗ ಈಗಾಗಲೇ ಒತ್ತುವರಿಯಾಗಿದೆ. ಈ ಸಂಬಂಧ ಪುನರ್ವಸತಿ ಹಾಗೂ ಪರಿಹಾರವೂ ಸಿಕ್ಕಿದೆ. ಇದೆಲ್ಲದರ ನಡುವೆ ಸಮಸ್ಯೆ ಬಗೆಹರಿಸಲು ರೂಪರೇಷೆ ನೀಡಲು ಸೂಚನೆ ನೀಡಲಾಗಿದೆ. ವರದಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಇಲ್ಲಿ ನಂಬಿಕೆಯ ವಿರುದ್ಧ ಯಾರೂ ಇಲ್ಲ. ತುಳುನಾಡಿನ ನಂಬಿಕೆಯನ್ನ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ಮಾಡುತ್ತೇವೆ. ಶಾಶ್ವತ ಪರಿಹಾರಕ್ಕಾಗಿ ಒಂದು ಸಮನ್ವಯತೆ ದೃಷ್ಟಿಯಿಂದ ಸಭೆ ನಡೆದಿದೆ. ಇತ್ಯಾರ್ಥ ಮಾಡುವುದಿದ್ದರು ಯಾವ ರೀತಿ ಮಾಡಬಹುದು ಅನ್ನೋದರ ಬಗ್ಗೆ ವರದಿ ನೀಡೋದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:45 pm, Sun, 9 March 25