ಮಂಗಳೂರು: ಕಾಂತಾರ ಸಿನಿಮಾ ರೀತಿಯಲ್ಲೇ ಕಾಂತೇರಿ ಜುಮಾದಿ ದೈವಾರಾಧನೆಗೆ ಅಡ್ಡಿ ಆರೋಪ
ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ನಿಂದ ದೈವಾರಾಧನೆಗೆ ತಡೆ ಒಡ್ಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. 800 ವರ್ಷ ಇತಿಹಾಸವಿರುವ ಕಾಂತೇರಿ ಜುಮಾದಿ ದೈವಸ್ಥಾನ ಎಂಎಸ್ಇಝಡ್ ವ್ಯಾಪ್ತಿಯಲ್ಲಿತ್ತು. ಇಲ್ಲಿನ ನೆಲ್ಲಿದಡಿ ಗುತ್ತುಮನೆಗೆ ಪ್ರವೇಶಕ್ಕೆ ಹಾಗೂ ಕಾಂತೇರಿ ಜುಮಾದಿ ದೈವದ ನಿತ್ಯ ಆರಾಧನೆಗೆ ತಡೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಂಗಳೂರು, ಫೆಬ್ರವರಿ 27: ಕಾಂತಾರ, ಕನ್ನಡದಲ್ಲಿ ಬಿಡುಗಡೆಯಾಗಿ ನಂತರ ಬೇರೆ ಭಾಷೆಗಳಿಗೂ ಡಬ್ ಆಗಿ ಅಮೋಘ ಯಶಸ್ಸು ಕಂಡ ಸಿನಿಮಾ. ಕಾಂತಾರ ಸಿನಿಮಾದಲ್ಲಿದ್ದುದು ಕರಾವಳಿಯ ದೈವಾರಾಧನೆಯ ಸುತ್ತ ಹೆಣೆದ ಕಥೆ. ಕರಾವಳಿಯ ಸೊಗಡು, ಅಲ್ಲಿಯ ಸಂಪ್ರದಾಯ, ಆ ಪ್ರಾದೇಶಿಕತೆಗೆ ಇಡೀ ಭಾರತವೇ ಮನಸೋತಿತ್ತು. ಸಿನಿಮಾದ ಕಥೆಯಲ್ಲಿ ಕಾಡಿನಲ್ಲಿ ನಡೆಯುವ ದೈವಾರಾಧನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುವುದನ್ನು ತೋರಿಸಲಾಗಿತ್ತು. ಈಗ ಅಂತಹದ್ದೇ ಘಟನೆ ಮಂಗಳೂರು ಬಜ್ಪೆ ಸಮೀಪ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ನಿಂದ ದೈವಾರಾಧನೆಗೆ ತಡೆ ಒಡ್ಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸುಮಾರು 800 ವರ್ಷಗಳ ಇತಿಹಾಸವಿರುವ ಕಾಂತೇರಿ ಜುಮಾದಿ ದೈವಸ್ಥಾನ ಬಜ್ಪೆ ಸಮೀಪದ ಎಂಎಸ್ಇಝಡ್ ವ್ಯಾಪ್ತಿಯಲ್ಲಿದೆ. ಇಲ್ಲಿನ ನೆಲ್ಲಿದಡಿ ಗುತ್ತುಮನೆ ಪ್ರವೇಶಕ್ಕೆ ಹಾಗೂ ಕಾಂತೇರಿ ಜುಮಾದಿ ದೈವದ ನಿತ್ಯ ಆರಾಧನೆಗೆ ತಡೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾಂತಾರ ಸಿನಿಮಾ ರೀತಿಯಲ್ಲೇ ದೈವಾರಾಧನೆಗೆ ಅಧಿಕಾರಿಗಳಿಂದ ಅಡ್ಡಿ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರದೇಶವನ್ನು 2006ರಲ್ಲಿ ವಿಶೇಷ ಆರ್ಥಿಕ ವಲಯ ಎಂದು ಘೋಷಿಸಿ ಇಡೀ ಊರಿಗೆ ಊರನ್ನೇ ಸರ್ಕಾರ ಒಕ್ಕಲೆಬ್ಬಿಸಿತ್ತು. ಸುಮಾರು 3 ಸಾವಿರ ಎಕರೆ ಭೂಮಿ ಎಂಎಸ್ಇಝಡ್ ವಶವಾದರೂ ಕಾಂತೇರಿ ಜುಮಾದಿ ದೈವಸ್ಥಾನ ಉಳಿದಿತ್ತು. ಇದರ ನಡುವೆ ಅದೆಷ್ಟೋ ದೇವಸ್ಥಾನ, ದೈವಸ್ಥಾನ ,ಮಸೀದಿ, ಚರ್ಚ್ಗಳು ನೆಲಸಮವಾಗಿದ್ದವು. ಆದರೂ ದೈವದ ಕಾರ್ಣಿಕದ ಫಲವಾಗಿ ಕಾಂತೇರಿ ಜುಮಾದಿ ದೈವದ ಐತಿಹಾಸಿಕ ಸ್ಥಳ ಉಳಿದಿತ್ತು.
ಹೋರಾಟದ ಫಲವಾಗಿ ಸ್ಮಾರಕದ ರೀತಿ ಉಳಿದುಕೊಂಡಿದ್ದ ನೆಲ್ಲಿದಡಿ ಗುತ್ತು
ಹೋರಾಟದ ಫಲವಾಗಿ 2016ರಲ್ಲಿ ಸ್ಮಾರಕದ ರೀತಿ ನೆಲ್ಲಿದಡಿ ಗುತ್ತನ್ನು ಜಿಲ್ಲಾಡಳಿತ ಉಳಿಸಿಕೊಂಡಿತ್ತು. ಕೇವಲ ದೈವಾರಾಧನೆಗೆ ಮಾತ್ರ ವಿಶೇಷ ಅನುಮತಿ ನೀಡಿ ನೆಲ್ಲಿದಡಿ ಗುತ್ತಿಗೆ ಹೋಗಲು MSEZ ಅವಕಾಶ ನೀಡುತ್ತಿತ್ತು. ಪ್ರತಿ ಬಾರಿ ದೈವಾರಾಧನೆಗಾಗಿ ಒಳ ಹೋಗುವಾಗ ಅನುಮತಿ ಪಡೆದು ನೆಲ್ಲಿದಡಿ ಗುತ್ತಿನ ಪ್ರಮುಖರು ಹೋಗುತ್ತಿದ್ದರು.
ವರ್ಷಕ್ಕೊಮ್ಮೆ ಅನುಮತಿ ಮೇರೆಗೆ ನಡೆಯುತ್ತಿದ್ದ ಉತ್ಸವ
ವರ್ಷಕ್ಕೊಮ್ಮೆ ಊರಿನವರ ಸಹಭಾಗಿತ್ವದಲ್ಲಿ ದೈವದ ಉತ್ಸವ ನಡೆಯುತ್ತಿತ್ತು. ಆದರೆ ಇದೀಗ ದೈವದ ಆರಾಧನೆಗೆ MSEZ ಅಧಿಕಾರಿಗಳು ಕಿರಿಕ್ ತೆಗೆದಿದ್ದಾರೆ. ತಿಂಗಳ ಸಂಕ್ರಮಣ ವೇಳೆ ದೈವಸ್ಥಾನಕ್ಕೆ ಹೋಗಿ ಧಾರ್ಮಿಕ ಕಾರ್ಯ ನೆರವೇರಿಸಲು ಅನುಮತಿ ನಿರಾಕರಿಸಿದ್ದಾರೆ. MSEZ ಪ್ರವೇಶಕ್ಕೆ ಅಧಿಕಾರಿಗಳು ತಡೆಯೊಡ್ಡುತ್ತಿದ್ದಂತೆಯೇ ದೈವಾರಾಧಕರ ಆಕ್ರೋಶದ ಕಟ್ಟೆಯೊಡೆದಿದೆ.

ಕಾಂತೇರಿ ಜುಮಾದಿ ದೈವ ಕೋಲದ ಸಂಗ್ರಹ ಚಿತ್ರ
ಇನ್ನು ಕಾಂತಗೇರಿ ಜುಮಾದಿ ದೈವಸ್ಥಾನ ಬಹಳಷ್ಟು ಕಾರಣಿಕ ಶಕ್ತಿ ಹೊಂದಿದೆ. ಇಲ್ಲಿರುವ ಬಾವಿಯ ಸ್ಫಟಿಕ ಶುದ್ಧದಂತಿರುವ ತೀರ್ಥ ಕುಡಿದರೆ ಕ್ಷಣಾರ್ಧದಲ್ಲಿ ಮೈಗೆ ಏರಿದ ವಿಷ ಇಳಿಯುತ್ತದೆ ಎಂಬ ನಂಬಿಕೆ ಇದೆ. ಈ ಬಾವಿಯ ತೀರ್ಥ, ಇಲ್ಲಿನ ಒಂದು ಚಿಟಿಕೆ ಮಣ್ಣನ್ನು ಜುಮಾದಿ ದೈವದ ಹೆಸರು ಹೇಳಿ ಕೊಟ್ಟರೆ ಜೀವ ಉಳಿಯುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಚಾರ್ಮಾಡಿ ಘಾಟ್ ತಿರುವಿನಲ್ಲೇ ಕೆಎಸ್ಆರ್ಟಿಸಿ ಬಸ್ ಸ್ಟೇರಿಂಗ್ ಕಟ್: ಆಮೇಲೇನಾಯ್ತು?
ಇನ್ನು ಈ ದೈವಸ್ಥಾನದ ಎತ್ತರ ಮೀರಿ ಯಾರೂ ಸಹ ಕಟ್ಟಡ ಕಟ್ಟಬಾರದೆಂಬ ನಿಯಮವೂ ಇಲ್ಲಿದೆ. ನಿಯಮ ಮೀರಿ ಕಟ್ಟಡ ಕಟ್ಟಿದ ಫ್ಯಾಕ್ಟರಿಗಳಿಗೆ ಬೆಂಕಿ ಬಿದ್ದ ಉದಾಹರಣೆಯೂ ಇದೆ. ಇದೀಗ ಈ ದೈವಸ್ಥಾನಕ್ಕೆ ಹೋಗಲು ಪ್ರತ್ಯೇಕ ರಸ್ತೆಯ ವ್ಯವಸ್ಥೆ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.