ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ: ಇಡ್ಲಿ ತಿಂದರೆ ಬರಬಹುದು ಕ್ಯಾನ್ಸರ್! ಆಘಾತಕಾರಿ ವರದಿ ಬಹಿರಂಗ
ರಾಸಾಯನಿಕ, ಕೃತ ಬಣ್ಣಗಳನ್ನು ಬಳಸುವ ಕಾರಣ ಗೋಬಿ ಮಂಚೂರಿ, ಪಾನಿ ಪುರಿ ಹಾಗೂ ಇನ್ನಿತರ ಫಾಸ್ಟ್ ಫುಡ್ ಐಟಂಗಳು ಅವುಗಳನ್ನು ಸೇವಿಸುವವರಲ್ಲಿ ಕ್ಯಾನ್ಸರ್ ಉಂಟು ಮಾಡಬಲ್ಲವು ಎಂದು ಈ ಹಿಂದೆ ಆಹಾರ ಇಲಾಖೆ ಅವುಗಳ ವಿರುದ್ಧ ಕ್ರಮ ಕೈಗೊಂಡಿತ್ತು. ರಾಸಾಯನಿಕ, ಕೃತಕ ಬಣ್ಣ ಬಳಕೆಗೆ ನಿಷೇಧ ಹೇರಿತ್ತು. ಇದೀಗ ಅನೇಕರ ನೆಚ್ಚಿನ ಆಹಾರ ಇಡ್ಲಿಯ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಬೆಂಗಳೂರು, ಫೆಬ್ರವರಿ 27: ಬೆಂಗಳೂರಿನ ಆಹಾರಪ್ರಿಯರಿಗೆ ಆಹಾರ ಇಲಾಖೆ ಶಾಕಿಂಗ್ ಸುದ್ದಿ ನೀಡಿದೆ. ಅದರಲ್ಲೂ, ಹೋಟೆಲ್‌ಗೆ ತೆರಳಿ ಇಡ್ಲಿ ಸವಿಯುವ ಗ್ರಾಹಕರಂತೂ ಇನ್ನು ಮುಂದೆ ಸಾಕಷ್ಟು ಎಚ್ಚರಿಕೆ ವಹಿಸಲೇಬೇಕಾಗಿದೆ. ಇದಕ್ಕೆ ಕಾರಣ, ಆಹಾರ ಇಲಾಖೆ ಪರೀಕ್ಷೆಯಲ್ಲಿ ಕಂಡುಬಂದ ಅಂಶ. ಬೆಂಗಳೂರಿನ ಅನೇಕ ಹೋಟೆಲ್‌ಗಳಲ್ಲಿ ತಯಾರಾಗುವ ಇಡ್ಲಿ ಅಸುರಕ್ಷಿತ ಎಂಬುದು ಆಹಾರ ಇಲಾಖೆಯ ಪ್ರಯೋಗದಿಂದ ದೃಢಪಟ್ಟಿದೆ.
ಬೆಂಗಳೂರಿನ ವಿವಿಧೆಡೆಗಳಿಂದ ಇಡ್ಲಿ ಮಾದರಿಗಳನ್ನು ಪಡೆದಿದ್ದ ಆಹಾರ ಇಲಾಖೆ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಇದೀಗ ಪ್ರಯೋಗಾಲಯ ವರದಿ ಬಂದಿದ್ದು, 35 ಕ್ಕೂ ಹೆಚ್ಚು ಇಡ್ಲಿ ಮಾದರಿಗಳು ಅಸುರಕ್ಷಿತ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಇದು, ರಸ್ತೆಬದಿಯ ಇಡ್ಲಿ ಖರೀದಿಸಿ ತಿನ್ನುವ ಮೊದಲು ಎರಡು ಬಾರಿ ಯೋಚಿಸುವಂತೆ ಮಾಡಿದೆ.
ಇಡ್ಲಿಯಿಂದ ಕ್ಯಾನ್ಸರ್: ಹೇಗೆ ಸಾಧ್ಯ, ಕಾರಣವೇನು?
ಬೆಂಗಳೂರಿನ ಹಲವಡೆ ಇತ್ತೀಚೆಗೆ ಇಡ್ಲಿ ತಯಾರಿಸಲು ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್ ಬಳಕೆ ಮಾಡಲಾಗುತ್ತಿದೆ. ಇಡ್ಲಿ ಮಾಡುವಾಗ ಮಾತ್ರವಲ್ಲದೆ ಆಹಾರವನ್ನು ಬಡಿಸುವಾಗ ಮತ್ತು ಪ್ಯಾಕ್ ಮಾಡುವಾಗಲೂ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಹಾಳೆಯು ಶಾಖಕ್ಕೆ ಒಡ್ಡಿಕೊಂಡು ಹಾನಿಕಾರಕ ವಸ್ತುವನ್ನು ಹೊರಸೂಸುತ್ತಿದೆ. ಇದು ಕ್ಯಾನ್ಸರ್ ಕಾರಕವಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು.
500ಕ್ಕೂ ಹೆಚ್ಚು ಇಡ್ಲಿ ಮಾದರಿ ಸಂಗ್ರಹ
ತಜ್ಞರ ಎಚ್ಚರಿಕೆ ಬೆನ್ನಲ್ಲೇ ಆಹಾರ ಇಲಾಖೆ ಬೆಂಗಳೂರಿನ ಹಲವಡೆಯಿಂದ ಇಡ್ಲಿ ಮಾದರಿಗಳನ್ನು ಸಂಗ್ರಹ ಮಾಡಿದೆ. ಆಹಾರ ಹಾಗೂ ಗುಣಮಟ್ಟ ಇಲಾಖೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ 500ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿದೆ. ಹೋಟೆಲ್ ಹಾಗೂ ತಿಂಡಿಗಳ ಅಂಗಡಿಗಳಿಂದಲೂ ಮಾದರಿ ಸಂಗ್ರಹ ಮಾಡಲಾಗಿದೆ. ಇವುಗಳಲ್ಲಿ 35 ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್ ಅಸುರಕ್ಷಿತ ಎಂಬ ವರದಿ ಬಂದಿದೆ.
ಇದನ್ನೂ ನೋಡಿ: ಹುಬ್ಬಳ್ಳಿ: ಗ್ರಾಹಕರಿಗೆ ಬಟ್ಟೆ ತೋರಿಸುತ್ತಿದ್ದಾಗಲೇ ಹೃದಯಾಘಾತದಿಂದ ಸಿಬ್ಬಂದಿ ಸಾವು, ಕೊನೇ ಕ್ಷಣದ ಸಿಸಿಟಿವಿ ವಿಡಿಯೋ
ಇನ್ನೂ ನೂರಾರು ಇಡ್ಲಿ ಸ್ಯಾಂಪಲ್ಸ್ ವರದಿಗೆ ಕಾಯಲಾಗುತ್ತಿದೆ. ಪೂರ್ಣ ವರದಿ ಕೈಸೇರಿದ ಬಳಿಕ ಪ್ಲಾಸ್ಟಿಕ್ ಪೇಪರ್ ನಿಷೇಧಿಸಲು ಆಹಾರ ಇಲಾಖೆ ಚಿಂತನೆ ನಡೆಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 am, Thu, 27 February 25







