Booker Prize 2025: ಬೂಕರ್ ಅವಾರ್ಡ್ ಪಟ್ಟಿಯಲ್ಲಿ ಕನ್ನಡ ಲೇಖಕಿ ಬಾನು ಮುಷ್ತಾಕ್ ಕೃತಿ
ಹಾಸನದ ಬಾನು ಮುಷ್ತಾಕ್ ಅವರ "ಹಾರ್ಟ್ ಲ್ಯಾಂಪ್" ಕೃತಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಅಂತಿಮ 13ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮೂಲತಃ ಕನ್ನಡದಲ್ಲಿ ಬರೆದ "ಹಸೀನ" ಮತ್ತು ಇತರೆ ಕಥೆಗಳ ಅನುವಾದಿತ ಕೃತಿ ಇದು. ಬಾನು ಮುಷ್ತಾಕ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಅವರ ಕೃತಿ ಪ್ರಶಸ್ತಿಗೆ ಆಯ್ಕೆಯಾಗಲಿ ಎಂಬ ಹಾರೈಕೆಗಳು ಕೇಳಿಬರುತ್ತಿವೆ.

ಬೆಂಗಳೂರು, ಫೆಬ್ರವರಿ 27: ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಅವಾರ್ಡ್ಗೆ ಕರುನಾಡಿನ ಹೆಮ್ಮೆಯ ಲೇಖಕಿ ಹಾಸನದ (Hassan) ಬಾನು ಮುಷ್ತಾಕ್ (Banu Mushtaq) ಅವರ ಕೃತಿಯೊಂದು ಅಂತಿಮ 13ರ ಪಟ್ಟಿಯಲ್ಲಿ (Booker longlist) ಸ್ಥಾನ ಪಡೆದಿದೆ. ಇದು ಕನ್ನಡ ಸಾರಸ್ವತ ಲೋಕದಲ್ಲಿ ದೊಡ್ಡ ಸಂಭ್ರಮಕ್ಕೆ ಸಾಕ್ಷಿಯಾಗಿದೆ, ಕನ್ನಡದ ಲೇಖಕಿಯೊಬ್ಬರ ಅನುವಾದಿತ ಕೃತಿಯೊಂದು ಬೂಕರ್ ಪ್ರಶಸ್ತಿಯ ಇತಿಹಾಸದಲ್ಲೇ ಮೊದಲ ಬಾರಿಗೆ 13 ಕೃತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಮೂಲತಃ ಹಾಸನದವರೇ ಆದ, ಹಾಸನದಲ್ಲಿಯೇ ನೆಲೆಸಿರುವ, ವೃತ್ತಿಯಲ್ಲಿ ವಕೀಲೆಯಾಗಿರುವ ಚಿಂತಕಿ ಬಾನು ಮುಷ್ತಾಕ್ ಅವರು ಪತ್ರಕರ್ತೆಯಾಗಿಯೂ ಗಮನ ಸೆಳೆದವರು. ವೃತ್ತಿ ಬದುಕಿನ ಜೊತೆಗೆ ಸಾಹಿತ್ಯಿಕವಾಗಿಯೂ ಸಾಕಷ್ಟು ಕೆಲಸ ಮಾಡಿರುವ ಇವರಿಗೆ ಸಾಕಷ್ಟು ಪ್ರಶಸ್ತಿಗಳು ಒಲಿದು ಬಂದಿವೆ. ಬಾನು ಮುಷ್ತಾಕ್ ಅವರ ‘ಹಸೀನ’ ಮತ್ತು ಇತರೆ ಕತೆಗಳನ್ನು ಪತ್ರಕರ್ತೆ ದೀಪಾ ಭಕ್ತಿಯವರು ಇಂಗ್ಲಿಷ್ಗೆ ಅನುವಾದಿಸಿದ್ದು, ‘ಹಾರ್ಟ್ ಲ್ಯಾಂಪ್’ ಕೃತಿ ಇದೀಗ ಪ್ರತಿಷ್ಟಿತ ಬೂಕರ್ ಅವಾರ್ಡ್ ಹೊಸ್ತಿಲಿಗೆ ಬಂದು ನಿಂತಿದೆ. ಕಳೆದ ವರ್ಷ ಇದೇ ಕೃತಿಗೆ ಪ್ರತಿಷ್ಠಿತ ಪೆನ್ ಅವಾರ್ಡ್ ಕೂಡ ಇವರಿಗೆ ಲಭಿಸಿತ್ತು.
ಬೂಕರ್ ಪ್ರಶಸ್ತಿಗೆ ಆಯ್ಕೆ ಹೇಗೆ?
ಇಂಗ್ಲೆಂಡ್ನಲ್ಲಿ ಕೊಡಮಾಡುವ ಈ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಆರಂಭದಲ್ಲಿ 154 ಕೃತಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ತೀರ್ಪುಗಾರರು ಪರಾಮರ್ಶೆ, ಅಧ್ಯಯನದ ಬಳಿಕ ಅಂತಿಮವಾಗಿ 13 ಕೃತಿಗಳನ್ನು ಲಾಂಗ್ ಲಿಸ್ಟ್ ಮಾಡುತ್ತಾರೆ. ಅದರಲ್ಲಿ ಈ ಬಾರಿ ‘ಹಾರ್ಟ್ ಲ್ಯಾಂಪ್’ ಕೃತಿ ಕೂಡ ಸ್ಥಾನ ಪಡೆದಿದೆ.
ಇದನ್ನೂ ಓದಿ: ಹಾಸನದಲ್ಲಿ ನಿಲ್ಲದ ಮಾನವ-ವನ್ಯಜೀವಿ ಸಂಘರ್ಷ: ಕಾಡಾನೆ ದಾಳಿಗೆ ಯುವಕ ಬಲಿ
ಹೆಜ್ಜೆ ಮೂಡಿದ ಹಾದಿ, ಬೆಂಕಿ-ಮಳೆ,ಎದೆಯ ಹಣತೆ, ಬಡವರ ಮಗಳು ಹೆಣ್ಣಲ್ಲ ಸೇರಿ ಹಲವು ಮಹತ್ತರ ಕೃತಿಗಳನ್ನ ರಚಿಸಿರುವ ಬಾನು ಮುಷ್ತಾಕ್ ಅವರ ‘ಹಸೀನ’ ಕಥೆಯನ್ನು ಗಿರೀಶ್ ಕಾಸರವಳ್ಳಿಯವರು ಸಿನಿಮಾವಾಗಿ ತೆರೆಯ ಮೇಲೆ ತಂದಿದ್ದಾರೆ.
ಮುಂದಿನ ಪ್ರಕ್ರಿಯೆ ಏನು?
ಅಂತಿಮವಾಗಿ ಆಯ್ಕೆ ಮಾಡಲಾದ 13 ಕೃತಿಗಳ ಮತ್ತೊಂದು ಸುತ್ತಿನ ಮೌಲ್ಯಮಾಪನ ನಡೆಯಲಿದ್ದು ಅಂತಿಮವಾಗಿ 6 ಕೃತಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಬಹುತೇಕ ಈ ಪಟ್ಟಿ ಏಪ್ರಿಲ್ 8ಕ್ಕೆ ಹೊರಬೀಳಲಿದ್ದು ಕುತೂಹಲ ಹೆಚ್ಚಿಸಿದೆ. ಅಂತಿಮ ಸುತ್ತಿಗೆ ಆಯ್ಕೆಯಾದ 6 ಕೃತಿಗಳಲ್ಲಿ ಒಂದು ಕೃತಿ ಬೂಕರ್ ಅವಾರ್ಡ್ಗೆ ಆಯ್ಕೆಯಾಗಲಿದ್ದು ಇದೇ ಮೇ ತಿಂಗಳಿನಲ್ಲಿ ಲಂಡನ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಏನಿದು ಬೂಕರ್ ಅವಾರ್ಡ್?
1968ರಲ್ಲಿ ಇಂಗ್ಲಿಷ್ ಭಾಷೆಯ ಕೃತಿಗಳಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಲು ಬೂಕರ್ ಸಂಸ್ಥೆ ಆರಂಭಿಸಿದ ಪ್ರಶಸ್ತಿ ಇದಾಗಿದೆ. ಇಂಗ್ಲೆಂಡ್, ಐರ್ಲೆಂಡ್ , ಪ್ರಾನ್ಸ್ ದೇಶಗಳಿಗೆ ಸೀಮಿತವಾಗಿ ವಾರ್ಷಿಕವಾಗಿ ನೀಡಲಾಗಗುತ್ತಿದ್ದ ಈ ಪ್ರಶಸ್ತಿಯನ್ನು 2013ರಲ್ಲಿ ವಿಶ್ವ ವ್ಯಾಪಿಯಾಗಿ ನೀಡಲು ಆರಂಬಿಸಲಾಗಿತ್ತು. ಅಂತಿಮ 6ರ ಘಟ್ಟಕ್ಕೆ ಆಯ್ಕೆಯಾಗುವ ಎಲ್ಲಾ ಕೃತಿಗಳ ಕೃತಿಕರ್ತರಿಗೆ ಹಾಗೂ ಅನುವಾದಕರಿಗೆ 5,51,312 ರೂ.ಗಳ ನಗದಿನೊಂದಿಗೆ ಪ್ರಶಸ್ತಿ ಸಿಗಲಿದೆ. ಅಂತಿಮವಾಗಿ ಆಯ್ಕೆಯಾಗೋ ಒಂದು ಕೃತಿಗೆ 27,38,110 ರೂ.ಗಳ ಬೃಹತ್ ಮೊತ್ತ ಸಿಗಲಿದ್ದು ಅಂತರಾಷ್ಟ್ರೀಯ ಮನ್ನಣೆ ಜೊತೆಗೆ ಪ್ರಶಸ್ತಿ ಕೂಡ ಲಭಿಸಲಿದೆ.
ಬಾನು ಮುಷ್ತಾಕ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೇರಿ ನಾಡಿಗ ಗಣ್ಯರು ಶುಭಾಶಯ ತಿಳಿಸಿದ್ದಾರೆ.