ಹಾಸನದಲ್ಲಿ ನಿಲ್ಲದ ಮಾನವ-ವನ್ಯಜೀವಿ ಸಂಘರ್ಷ: ಕಾಡಾನೆ ದಾಳಿಗೆ ಯುವಕ ಬಲಿ
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬ್ಯಾದನೆ ಗ್ರಾಮದ ಬಳಿ ಕಾಡಾನೆಯ ದಾಳಿಯಿಂದ 28 ವರ್ಷದ ಯುವಕ ಮೃತಪಟ್ಟಿದ್ದಾನೆ. ಅಣ್ಣಾಮಲೈ ಎಸ್ಟೇಟ್‌ನಿಂದ ಮನೆಗೆ ಹೋಗುತ್ತಿದ್ದಾಗ ಕಾಡಾನೆ ದಾಳಿ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಹಾಸನ, ಫೆಬ್ರವರಿ 24: ಜಿಲ್ಲೆಯಲ್ಲಿ ಕಾಡಾನೆ-ಮಾನವನ ನಡುವಿನ ಸಂಘರ್ಷ ಮುಂದುವರೆದಿದ್ದು, ಇದೀಗ ಕಾಡಾನೆ (Elephant) ದಾಳಿಗೆ ಯುವಕ ಬಲಿಯಾಗಿರುವಂತಹ ಘಟನೆ ಬೇಲೂರು ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ನಡೆದಿದೆ. ಕಾಡಾನೆ ದಾಳಿಯಿಂದ ಗುಜನಹಳ್ಳಿಯ ನಿವಾಸಿ ಅನಿಲ್(28) ಮೃತಪಟ್ಟಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮೃತ ಅನಿಲ್ ಕೆಲಸ ಮುಗಿಸಿ ಅಣ್ಣಾಮಲೈ ಎಸ್ಟೇಟ್‌ನಿಂದ ಹೋಗುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಸೊಂಡಲಿನಿಂದ ಎತ್ತಿ ಬಿಸಾಕಿ ತುಳಿದು ಸಾಯಿಸಿದೆ. ಸದ್ಯ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಗ್ರಾಮದಲ್ಲಿ ಕಾಡಾನೆ ಪುಂಡಾಟ: ಕರು ತುಳಿದು ಕೊಂದ ಒಂಟಿ ಸಲಗ
ಕಾಡಂಚಿನ ಗ್ರಾಮಕ್ಕೆ ಒಂಟಿ ಸಲಗವೊಂದು ಲಗ್ಗೆ ಇಟ್ಟು ಪುಂಡಾಟ ನಡೆಸಿರುವಂತಹ ಘಟನೆ ರಾಜ್ಯ ಗಡಿಭಾಗ ತಮಿಳುನಾಡಿನ ಜವಳಗೆರೆ ಸಮೀಪದ ಅವಳಕೊಟ್ಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊಲ, ಗದ್ದೆಗಳ ಕಡೆ ಒಂಟಿ ಸಲಗ ಓಡಾಡಿದೆ.
ಇದನ್ನೂ ಓದಿ: ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿರುವ ವಿಡಿಯೋ ನೋಡಿ
ರೈತ ಮುತ್ತಪ್ಪ ಎಂಬುವವರಿಗೆ ಸೇರಿದ್ದ ಕರುವಿನ ಮೇಲೆ ಕಾಡಾನೆ ದಾಳಿ ಮಾಡಿ ತುಳಿದು ಕೊಂದಿದೆ. ಕಾಡಾನೆ ಓಡಾಟದ ವಿಷಯ ತಿಳಿದು ಸುತ್ತಮುತ್ತಲಿನ ಹಳ್ಳಿಗಳ ನೂರಾರು ಜನರು ಜಮಾವಣೆಗೊಂಡಿದ್ದರು. ಕಾಡಿನ ಕಡೆ ಮುಖ ಮಾಡದೆ ಗ್ರಾಮದ ಸುತ್ತಲೂ ಕಾಡಾನೆ ಗಿರ್ಕಿ ಹೊಡೆಯುತ್ತಿದೆ. ಅದರ ಹಿಂದೆಯೇ ಮೊಬೈಲ್ ಹಿಡಿದು ಜನರು ಕೂಡ ರೌಂಡ್ಸ್ ಹೊಡೆಯುತ್ತಿದ್ದಾರೆ. ಕಾಡಾನೆಯನ್ನ ಕಾಡಿಗೆ ಅಟ್ಟುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಆನೆ ದಾಳಿಗೆ ಮಹಿಳೆ ಸಾವು
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕಾಫಿ ಕೊಯ್ಲು ಮಾಡುವ ವೇಳೆ ಕಾಡಾನೆ ಏಕಾಏಕಿ ದಾಳಿ ಮಾಡಿ 55 ವರ್ಷದ ಕಾರ್ಮಿಕ ಮಹಿಳೆ ವಿಜಯನಗರ ಮೂಲದ ವಿನೋದಾ ನಾಯ್ಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮುಂಜಾನೆ ಕಾಫಿ ತೋಟದಲ್ಲಿ ಕಾಫಿ ಕೊಯ್ಲು ಮಾಡುವಾಗ ಕಾಡಾನೆ ವಿನೋದಾ ಅವರನ್ನ ಬಲಿ ಪಡೆದಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:09 pm, Mon, 24 February 25