ಚಾರ್ಮಾಡಿ ಘಾಟ್ ತಿರುವಿನಲ್ಲೇ ಕೆಎಸ್ಆರ್ಟಿಸಿ ಬಸ್ ಸ್ಟೇರಿಂಗ್ ಕಟ್: ಆಮೇಲೇನಾಯ್ತು?
ಧರ್ಮಸ್ಥಳ ಲಕ್ಷ ದೀಪೋತ್ಸವಕ್ಕೆ ಆಗಮಿಸಿದ್ದ ಭಕ್ತರು ಮರಳಿ ಊರಿಗೆ ತೆರಳಲು ಶಿವಮೊಗ್ಗ ಬಸ್ ಏರಿದ್ದರು. ಆದರೆ, ಆ ಕೆಎಸ್ಆರ್ಟಿಸಿ ಬಸ್ ಚಾರ್ಮಾಡಿ ಘಾಟ್ ತಿರುವಿನಲ್ಲಿ ಸ್ಟೇರಿಂಗ್ ಜಾಯಿಂಟ್ ಕಟ್ ಆಗಿ ನಿಂತಿದೆ. ಅದೃಷ್ಟವಶಾತ್, ಚಾಲಕನ ಸಮಯಪ್ರಜ್ಞೆಯಿಂದ ಸಂಭಾವ್ಯ ಅಪಘಾತ ತಪ್ಪಿದೆ. ಬದಲಿ ಬಸ್ಗಾಗಿ ಪ್ರಯಾಣಿಕರು ರಸ್ತೆಯಲ್ಲಿಯೇ ಕಾದು ಕುಳಿತಿದ್ದಾರೆ.
ಮಂಗಳೂರು, ಫೆಬ್ರವರಿ 27: ಚಾರ್ಮಾಡಿ ಘಾಟ್ ರಸ್ತೆಯ ತಿರುವಿನಲ್ಲೇ ಕೆಎಸ್ಆರ್ಟಿಸಿ ಬಸ್ಸೊಂದರ ಸ್ಟೇರಿಂಗ್ ಜಾಯಿಂಟ್ ತುಂಡಾಗಿದೆ. ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ KA 17-F-1487 ಶಿವಮೊಗ್ಗ ವಿಭಾಗದ ಬಸ್, ಚಾರ್ಮಾಡಿ ಘಾಟ್ನಲ್ಲಿ ಸಂಚರಿಸುತ್ತಿದ್ದಾಗ ಸ್ಟೇರಿಂಗ್ ಜಾಯಿಂಟ್ ಕಟ್ ಆಗಿದೆ. ಆದರೆ, ಚಾಲಕನ ಚಾಕಚಕ್ಯತೆಯಿಂದ ಪ್ರಯಾಣಿಕರ ಜೀವ ಉಳಿದಿದೆ.
ಅಪಾಯದ ಅರಿವಾಗುತ್ತಿದ್ದಂತೆಯೇ ಬಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ಹೇಗೋ ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ. ಇದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಬಸ್ನಲ್ಲಿದ್ದ ಪ್ರಯಾಣಿಕರನ್ನು ಬದಲಿ ಬಸ್ನಲ್ಲಿ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುತ್ತಿದೆ.
Latest Videos