- Kannada News Photo gallery Navaguliga Seve: Witnessing a Rare Ritual in Coastal Karnataka, taja suddi
ಏಕಕಾಲದಲ್ಲಿ 9 ದೈವಗಳ ನರ್ತನೆ: ಇದು ಕರಾವಳಿಯಲ್ಲಿ ಮಾತ್ರ ನಡೆಯುವ ಏಕೈಕ ನವ ಗುಳಿಗ ಸೇವೆ
ಬೆಳ್ತಂಗಡಿ ತಾಲೂಕಿನ ಬರ್ಕಜೆಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಒಂಬತ್ತು ಗುಳಿಗ ದೈವಗಳಿಗೆ ಏಕಕಾಲದಲ್ಲಿ ನರ್ತನ ಸೇವೆ ವಿಶೇಷತೆಯಿಂದ ಕೂಡಿದೆ. ಕರಾವಳಿಯಲ್ಲಿ ಅಪರೂಪವಾದ ಈ ನವಗುಳಿಗ ಸೇವೆ, ಭಕ್ತರಿಗೆ ರೋಮಾಂಚಕ ಅನುಭವ ನೀಡಿದೆ. ದುರ್ಗಾಪರಮೇಶ್ವರಿಯ ಕ್ಷೇತ್ರಪಾಲಕರಾಗಿರುವ ಈ ಗುಳಿಗ ದೈವಗಳು, ಕ್ಷೇತ್ರದಲ್ಲಿ ಪ್ರಾರ್ಥಿಸುವವರ ಸಂಕಷ್ಟಗಳನ್ನು ನಿವಾರಣೆ ಮಾಡುತ್ತವೆ ಎಂಬ ನಂಬಿಕೆಯಿದೆ.
Updated on: Feb 06, 2025 | 4:58 PM

ಸಾಮಾನ್ಯವಾಗಿ ಕರಾವಳಿಯಲ್ಲಿ ಏಕಕಾಲದಲ್ಲಿ ಒಂದೆರಡು ಗುಳಿಗ ದೈವಗಳಿಗೆ ನರ್ತನ ಸೇವೆ ನಡೆಯುತ್ತೆ. ಆದರೆ ಇಲ್ಲೊಂದು ಸನ್ನಿಧಾನದಲ್ಲಿ ಏಕಕಾಲದಲ್ಲಿ ಒಂಬತ್ತು ದೈವಗಳಿಗೆ ನರ್ತನ ಸೇವೆ ನಡೆದಿದೆ. ಒಂಬತ್ತು ಗುಳಿಗ ದೈವಗಳ ರೋಷಾವೇಷ ಭಕ್ತರಿಗೆ ರೋಮಾಂಚಕ ಅನುಭವ ನೀಡಿದೆ.

ಹೀಗೇ ಮೈ ನವಿರೇಳುವಂತೆ ರೋಷಾವೇಶದಿಂದ ನರ್ತಿಸ್ತಾ ಇರೋ ಈ ದೈವಗಳ ಹೆಸರು ಗುಳಿಗ. ಕರಾವಳಿ ಭಾಗದ ಜನರಿಂದ ಹೆಚ್ಚಾಗಿ ಆರಾಧಿಸಲ್ಪಡುವ ಈ ಗುಳಿಗ ದೈವಕ್ಕೆ ಸಾಮಾನ್ಯವಾಗಿ ಏಕಕಾಲದಲ್ಲಿ ಒಂದೆರಡು ದೈವಗಳು ಹೀಗೇ ನರ್ತನ ಸೇವೆ ಮಾಡೋದು ಇದೆ. ಆದರೆ ಇಲ್ಲಿ ಹೀಗೇ ಒಂಬತ್ತು ಗುಳಿಗ ದೈವಗಳಿಗೆ ವಿಶೇಷವಾಗಿ ನರ್ತನ ಸೇವೆ ನೀಡಲಾಗುತ್ತಿದ್ದು, ಇದು ಕರಾವಳಿಯಲ್ಲಿ ಒಂದು ಕಡೆ ಮಾತ್ರ ನಡೆಯುವ ಏಕೈಕ ನವ ಗುಳಿಗ ಸೇವೆಯಾಗಿದೆ.

ಅಷ್ಟಕ್ಕೂ ಇದು ನಡೆದಿರುವುದು ಎಲ್ಲಿ ಅಂದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನ ನಿಟ್ಟಡೆ ಗ್ರಾಮದ ಬರ್ಕಜೆ ಎಂಬ ಪುಟ್ಟ ಊರಿನಲ್ಲಿ. ಇಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ನವಗುಳಿಗ ದೈವಗಳ ನರ್ತನ ಸೇವೆ ನಡೆಸಲಾಗಿತ್ತು. ದುರ್ಗಾಪರಮೇಶ್ವರಿಯ ಕ್ಷೇತ್ರಪಾಲಕರಾಗಿ ಒಂಬತ್ತು ಗುಳಿಗ ದೈವಗಳು ಇಲ್ಲಿ ನೆಲೆಯಾಗಿರೋ ಕಾರಣ ಇಲ್ಲಿ ಈ ನವ ಗುಳಿಗ ನರ್ತನ ಸೇವೆ ನಡೆಸಲಾಗಿದೆ.

ಸಾಮಾನ್ಯವಾಗಿ ದೇವಿ ನೆಲೆಸಿರುವ ಕ್ಷೇತ್ರಗಳಲ್ಲಿ ಕ್ಷೇತ್ರಪಾಲಕನಾಗಿ ಗುಳಿಗ ಇದ್ದೇ ಇರ್ತಾನೆ. ಇಂತಹ ಕ್ಷೇತ್ರಗಳಲ್ಲಿ ವಾರ್ಷಿಕವಾಗಿ ಗುಳಿಗನಿಗೆ ಈ ರೀತಿಯಾಗಿ ನರ್ತನ ಸೇವೆಯನ್ನು ನೀಡಲಾಗುತ್ತದೆ. ಇನ್ನು ತುಳುನಾಡಿನ ಹೆಚ್ಚಿನ ಜನರ ಮನೆಯಲ್ಲೂ ಈ ಗುಳಿಗನ ಆರಾಧನೆ ನಡೆಯುತ್ತದೆ.

ಐದು ವರ್ಷಗಳ ಹಿಂದೆ ನಿಟ್ಟಡೆ ಗ್ರಾಮದ ಬರ್ಕಜೆ ಎಂಬ ಊರಿನಲ್ಲಿ ಪುನರ್ ನಿರ್ಮಾಣವಾದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವ ಗುಳಿಗ ದೈವಗಳು ಕ್ಷೇತ್ರಪಾಲಕರಾಗಿ ನೆಲೆಸಿದ್ದಾರೆ ಅನ್ನೋ ವಿಚಾರ ಗೊತ್ತಾಗಿತ್ತು. ಹೀಗಾಗಿ ಆ ಒಂಬತ್ತು ದೈವಗಳಿಗೂ ಏಕಕಾಲದಲ್ಲಿ ನರ್ತನ ಸೇವೆ ಮಾಡಲಾಗುತ್ತಿದೆ.

ಇದು ತುಳುನಾಡಿನಲ್ಲಿ ಬಹಳ ಅಪರೂಪವಾಗಿದ್ದು ಇದನ್ನು ವೀಕ್ಷಿಸುವುದಕ್ಕೆ ದೂರದ ಊರುಗಳಿಂದಲೂ ಜನ ಇಲ್ಲಿಗೆ ಬಂದಿದ್ದರು. ಗುಳಿಗ ದೈವದ ರೋಷಾವೇಶ ಬಂದಂತಹ ಭಕ್ತರಿಗೆ ರೋಮಾಂಚಕ ಅನುಭವ ನೀಡಿದೆ.

ಈ ಕ್ಷೇತ್ರದಲ್ಲಿ ಪ್ರಾರ್ಥಿಸಿ ಹೋದವರಿಗೆ ಎದುರಾಗುವ ಎಲ್ಲಾ ಸಂಕಷ್ಟಗಳೂ ನಿವಾರಣೆ ಆಗುತ್ತೆ ಅನ್ನೋ ನಂಬಿಕೆ ಕೂಡ ಇದೆ. ಹೀಗಾಗಿ ಜಿಲ್ಲೆ ಮಾತ್ರವಲ್ಲದೇ ಹೊರಜಿಲ್ಲೆಯಿಂದಲೂ ಜನರು ಇಲ್ಲಿಗೆ ಆಗಮಿಸಿ ಈ ನವ ಗುಳಿಗನ ನರ್ತನ ಸೇವೆಯನ್ನು ಕಣ್ತುಂಬಿಕೊಂಡಿದ್ದಾರೆ.
























