‘ನಮ್ಮ ಮೇಲೆ ಕೃಪೆ ತೋರಿ’: ಮಂತ್ರಾಲಯದ ರಾಯರಿಗೆ ವಿಚಿತ್ರ ಪತ್ರ ಬರೆದ ಉದ್ಯೋಗಾಕಾಂಕ್ಷಿಗಳು
ಕರ್ನಾಟಕ ರಾಜ್ಯ ನಿರುದ್ಯೋಗಿ ದೈಹಿಕ ಶಿಕ್ಷಕರ ಸಂಘದಿಂದ ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳಿಗೆ ವಿಚಿತ್ರ ಪತ್ರ ಬರೆಯಲಾಗಿದೆ. ರಾಜ್ಯದಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡದಿರುವ ಹಿನ್ನೆಲೆಯಲ್ಲಿ, ಸ್ವಾಮೀಜಿಗಳು ತಮ್ಮ ಮೇಲೆ ಕೃಪೆ ತೋರಿ ನೇಮಕಾತಿ ಆಗುವಂತೆ ಮಾಡುವಂತೆ ಮನವಿ ಮಾಡಿದ್ದಾರೆ.

ಧಾರವಾಡ, ಜನವರಿ 01: ರಾಜ್ಯದಲ್ಲಿ ಹಲವು ವರ್ಷಗಳಿಂದ ಯಾವುದೇ ಸರ್ಕಾರಿ ನೇಮಕಾತಿಗಳು ಆಗಿಲ್ಲ. ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಇತ್ತೀಚೆಗೆ ಬೃಹತ್ ಪ್ರತಿಭಟನೆ ಕೂಡ ಮಾಡಲಾಯಿತು. ಆದರೂ ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಉದ್ಯೋಗಾಕಾಂಕ್ಷಿಗಳು (Job seekers) ಇದೀಗ ರಾಯರ ಮೊರೆ ಹೋಗಿದ್ದಾರೆ. ನಮ್ಮ ಮೇಲೆ ಕೃಪೆ ತೋರುವಂತೆ ವಿಚಿತ್ರ ಪತ್ರವೊಂದನ್ನು ಬರೆಯುವ ಮೂಲಕ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿ (mantralaya raghavendra swamy) ಮುಂದೆ ತಮ್ಮ ಬೇಡಿಕೆ ಇಟ್ಟಿದ್ದಾರೆ.
ರಾಯರ ಮೊರೆಹೋದ ಉದ್ಯೋಗಾಕಾಂಕ್ಷಿಗಳು
ರಾಜ್ಯದಲ್ಲಿ ಆಡಳಿತ ಸುಧಾರಣೆ ಸೇರಿದಂತೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ನಿರುದ್ಯೋಗಿ ದೈಹಿಕ ಶಿಕ್ಷಕರ ಸಂಘ ರಾಯರಿಗೆ ಮನವಿ ಪತ್ರ ಸಲ್ಲಿಸಿದೆ. ಸರ್ಕಾರ ಸಂಪೂರ್ಣ ಆಡಳಿತ ಸುಧಾರಣೆಯಲ್ಲಿ ವಿಫಲವಾಗಿದೆ. ಹಲವು ವರ್ಷಗಳಿಂದ ಯಾವುದೇ ನೇಮಕಾತಿ ಆಗಿಲ್ಲ. ಹಲವು ಹೋರಾಟ ಮಾಡಿದರೂ ಸಮಸ್ಯೆ ಬಗೆ ಹರಿದಿಲ್ಲ. ಹೀಗಾಗಿ ಖಾಲಿ ಇರುವ ಎಲ್ಲ ದೈಹಿಕ ಶಿಕ್ಷಕರ ಹುದ್ದೆಗಳನ್ನ ಭರ್ತಿ ಮಾಡಿಸುವಂತೆ ರಾಯರ ಮುಂದೆ ವಿಚಿತ್ರ ಬೇಡಿಕೆ ಇಡಲಾಗಿದೆ.
ರಾಯರಿಗೆ ಬರೆದ ಪತ್ರದಲ್ಲೇನಿದೆ?
ಶ್ರೀ ಗುರು ರಾಘವೇಂದ್ರ ಸ್ವಾಮೀಜಿಗಳು ಭಕ್ತರ ಆರಾಧ್ಯ ದೈವ ಆದ ತಾವು ಕರ್ನಾಟಕ ರಾಜ್ಯದಲ್ಲಿ ಆಡಳಿತಮಟ್ಟ ಎಲ್ಲಿಗೆ ಬಂದು ತಲುಪಿದೆ ತಮಗೆ ತಿಳಿದಿದೆ ಇದನ್ನು ಬಗೆಹರಿಸಿ. ತಾವುಗಳು ರಾಜ್ಯದಲ್ಲಿ ಸುಮಾರು ವರ್ಷದಿಂದ ನೇಮಕಾತಿ ನಡೆದಿಲ್ಲ. ನಿರುದ್ಯೋಗಿಗಳು ಸುಮಾರು ಹೋರಾಟ ಮಾಡಿ ಬೇಸತ್ತು ಹೋಗಿದ್ದೇವೆ. ಇದಕ್ಕೆ ಬೇಗ ಕಡಿವಾಣ ಹಾಕಿ ತಮ್ಮ ದಿವ್ಯ ದೃಷ್ಟಿಯಿಂದ. ನಿರುದ್ಯೋಗ ಸಮಸ್ಯೆ ಹೋಗಲಾಡಿಸಿ ಉದ್ಯೋಗ ಭಾಗ್ಯ ದೊರಕಲಿ ದೇವ ಹಾಗೂ ನಾವು ದೈಹಿಕ ಶಿಕ್ಷಣ ಶಿಕ್ಷಕರು.
ಇದನ್ನೂ ಓದಿ: ಬೆಂಗಳೂರು ಬನಶಂಕರಿ ದೇವಸ್ಥಾನ ಹುಂಡಿ ಎಣಿಕೆ: ‘ನನ್ನ ತಾಯಿ ಕಡೆಯಿಂದ ಬರುವ ಆಸ್ತಿ ನನಗೆ ಬರಲೆಂದು ಕರುಣಿಸು’ ಎಂದು ದೇವಿಗೆ ಪತ್ರ
ನೇಮಕಾತಿ ನಡೆಯದೆ ಸುಮಾರು ದಶಮಾನ ಕಳೆದು ಹೋಗಿವೆ. ಮಕ್ಕಳು, ಆರೋಗ್ಯ ಸಮಸ್ಯೆ ಮತ್ತು ದೈಹಿಕ ಶಿಕ್ಷಣ ಪದವಿ ಪಡೆದು ನಿರುದ್ಯೋಗ ಸಮಸ್ಯೆಯಿಂದ ಸಂಸಾರಗಳು ಬೀದಿಗೆ ಬರುತ್ತಿವೆ. ಕಾರಣ ಕರ್ನಾಟಕ ಸರ್ಕಾರಕ್ಕೆ ಬುದ್ಧಿ ಕಲಿಸಿ, ಬೇಗ ನೇಮಕಾತಿ ಪ್ರಾರಂಭವಾಗಬೇಕೆಂದು ಭಕ್ತಿಪೂರಕ ಕೇಳಿಕೊಳ್ಳುತ್ತಿದ್ದೇವೆ. ಭಕ್ತಿಪೂರಕ ನಮಸ್ಕಾರಗಳೊಂದಿಗೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:49 pm, Thu, 1 January 26




