ರಾಯರ ಮಠದಲ್ಲಿ ಭಾಷಾ ವಿವಾದ: ಕನ್ನಡ ಶ್ಲೋಕದೊಂದಿಗೆ ಸಾಕ್ಷಿ ಸಮೇತ ಕನ್ನಡಿಗರ ಕೌಂಟರ್
ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕನ್ನಡ ಶ್ಲೋಕದ ಕುರಿತು ಭಾಷಾ ವಿವಾದ ತಲೆದೋರಿದೆ. ತೆಲುಗು ಭಾಷಿಕರ ವಿರೋಧಕ್ಕೆ ಕನ್ನಡಿಗರು ಕೆರಳಿದ್ದು, 1981ರ 'ಭಾಗ್ಯವಂತ' ಸಿನೆಮಾದಲ್ಲಿ ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ನಟಿಸಿದ ದೃಶ್ಯದಲ್ಲಿ ಕನ್ನಡ ಶ್ಲೋಕವಿದ್ದದ್ದನ್ನು ಸಾಕ್ಷಿಯಾಗಿ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.

ರಾಯಚೂರು, ಡಿಸೆಂಬರ್ 28: ಕಲಿಯುಗದ ಕಾಮಧೇನು ಅಂತಲೇ ಭಕ್ತರಿಂದ ಕರೆಸಿಕೊಳ್ಳುವ ಮಂತ್ರಾಲಯ (Mantralaya) ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾಷಾ ವಿವಾದ ಇದೀಗ ಕನ್ನಡಿಗರನ್ನ ಕೆರಳಿಸಿದೆ. ಶ್ರೀ ಮಠದ ಮುಖ್ಯದ್ವಾರದಲ್ಲಿ ಕನ್ನಡ ಭಾಷೆಯಲ್ಲಿರುವ ರಾಯರ ಶ್ಲೋಕವನ್ನ ತೆಲುಗು ಭಾಷಿಗರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಕರ್ನಾಟಕದ ಭಕ್ತರು 1981ರಲ್ಲಿ ಇದೇ ಮಂತ್ರಾಲಯದಲ್ಲಿ ಚಿತ್ರೀಕರಣವಾದ ರಾಜ್ ಕುಮಾರ್ ಅಭಿನಯದ ಭಾಗ್ಯವಂತ ಸಿನೆಮಾದಲ್ಲೂ ಕನ್ನಡದಲ್ಲೇ ರಾಯರ ಶ್ಲೋಕ ಇರುವುದನ್ನ ತೋರಿಸಿ ಕೌಂಟರ್ ಕೊಟ್ಟಿದ್ದಾರೆ.
ಸಾಕ್ಷ ಸಮೇತ ಕನ್ನಡಿಗರಿಂದ ಕೌಂಟರ್
ಆಂಧ್ರಪ್ರದೇಶದಲ್ಲಿರುವ ಕರ್ನಾಟಕದ ಗಡಿಯ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾಷಾ ವಿವಾದವನ್ನ ಸೃಷ್ಟಿ ಮಾಡಿರೋದರ ವಿರುದ್ಧ ಭಕ್ತ ವೃಂದವೇ ಕೆರಳಿದೆ. ವಿವಾದ ಸೃಷ್ಟಿಸುತ್ತಿರುವವರ ವಿರುದ್ಧ ಭಕ್ತರು ಆಕ್ರೋಶ ಹೊರಹಾಕ್ತಿದ್ದಾರೆ. ಶ್ರೀ ಮಠದ ಮುಖ್ಯ ದ್ವಾರದಲ್ಲಿ ಕನ್ನಡ ಭಾಷೆಯಲ್ಲಿ ರಾಯರ ಶ್ಲೋಕವಿದೆ. ಇದೇ ಶ್ಲೋಕ ತೆಲುಗು ಭಾಷೆಯಲ್ಲಿ ಯಾಕಿಲ್ಲ ಅಂತ ತೆಲುಗು ಭಾಷಿಕರು ಸಾಮಾಜಿಕ ಜಾಲತಾಣಗಳ ಮೂಲಕ ಅಲ್ಲಿನ ಸಿಎಂ, ಡಿಸಿಎಂ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕರ್ನಾಟಕದ ಭಕ್ತರು ಕೌಂಟರ್ ಕೊಟ್ಟಿದ್ದಾರೆ. ರಾಯರ ಮಠದ ಇತಿಹಾಸದಲ್ಲೇ ಇಂದೆಂದು ವಿವಾದವಾಗಿಲ್ಲ. ಅದರಲ್ಲೂ ಕನ್ನಡ ಭಾಷೆಯಲ್ಲಿ ಶ್ಲೋಕ ಇದೆ ಅನ್ನೋದು ದಶಕಗಳಿಂದ ಎಲ್ಲರಿಗೂ ಗೊತ್ತು. ಆದರೆ ಇದೀಗ ಅದನ್ನೇ ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುತ್ತಿರುವವರಿಗೆ ಕರ್ನಾಟಕದ ಭಕ್ತರ ಸಾಕ್ಷ ಸಮೇತ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ಕನ್ನಡದಲ್ಲಿರುವ ಫಲಕಕ್ಕೆ ತೆಲುಗು ಭಾಷಿಕರ ವಿರೋಧ
1981ರಲ್ಲಿ ಕನ್ನಡದ ಭಾಗ್ಯವಂತ ಸಿನೆಮಾದ ಬಗ್ಗೆ ವಿವರಿಸಿದ್ದಾರೆ. ಆ ಸಿನೆಮಾದಲ್ಲಿ ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಬಾಲ ಕಲಾವಿದನಾಗಿ ನಟಿಸಿದ್ದಾರೆ. ಆ ಸಿನೆಮಾವನ್ನು ಇದೇ ಮಂತ್ರಾಲಯದಲ್ಲೇ ಚಿತ್ರೀಕರಣ ಮಾಡಲಾಗಿದೆ. ಆ ಸಿನೆಮಾದ ಕ್ಲೈಮ್ಯಾಕ್ಸ್ನಲ್ಲಿ ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಜೊತೆ ಮಾತನಾಡಿ, ಮನವೊಲಿಸುವ ದೃಶ್ಯವಿದೆ. ಅದರಲ್ಲಿ ಸ್ಪಷ್ಟವಾಗಿ ಕನ್ನಡ ಭಾಷೆಯಲ್ಲಿ ಈಗಿರುವ ಶ್ಲೋಕವೂ ಇದೆ ನೋಡಿಕೊಳ್ಳಿ ಅಂತ ಕರ್ನಾಟಕದ ಭಕ್ತರು ಕೌಂಟರ್ ಕೊಟ್ಟಿದ್ದಾರೆ.
ದಶಕಗಳಿಂದ ಇರದ ಈ ವಿಚಾರವನ್ನ ಈಗ ಬೇಕಂತಲೇ ಹಬ್ಬಿಸುತ್ತಿರುವ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ರಾಯರ ಮಠದಲ್ಲಿ ತೆಲುಗು ಭಾಷೆಯೇ ಪ್ರಮುಖ ಭಾಷೆಯನ್ನಾಗಿ ಶ್ರೀ ಮಠ ಪರಿಗಣಿಸಿದೆ. ಅಲ್ಲದೇ ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಇಂಗ್ಲಿಷ್, ಹಿಂದಿ ಕನ್ನಡದಲ್ಲೂ ನಾಮಫಲಕಗಳನ್ನ ಹಾಕಲಾಗಿದೆ. ಆದರೆ ಈ ವಿವಾದದ ಬೆನ್ನಲ್ಲೇ ರಾಯರ ಪರಮ ಭಕ್ತರಾಗಿರುವ ಉಪನ್ಯಾಕ ಜಿ.ರಾಮ್ ರಾವ್ ಅನ್ನೋರು ರಾಯರಿಗೆ ಅಚ್ಚುಮೆಚ್ಚಿನ ಭಾಷೆಯೇ ಕನ್ನಡ ಅಂತ ಇತಿಹಾಸ ತಿಳಿಸಿದೆ. ರಾಯರು ಎಲ್ಲಾ ಭಾಷೆಗೆ ಕೊಡುಗೆ, ಗೌರವ ಕೊಟ್ಟಿದ್ದಾರೆ. ಗುರುಗಳಿಗೆ ಭಾಷೆ ತರುವುದು ಬೇಡ ಅನ್ನೋದು ಭಕ್ತರ ವಾದ.
ಹಂಪಿ ಕ್ಷೇತ್ರದಲ್ಲಿ ಅವರ ಪೂರ್ವಜರು ಇದ್ದದ್ದು, ಬಳಿಕ ಯತಿ ಪರಂಪರೆಯಲ್ಲಿ ಕನ್ನಡದಲ್ಲಿ ಕೊಡುಗೆ ಕೊಟ್ಟಿದ್ದಾರೆ. ಕನ್ನಡದಲ್ಲಿ ಕೃತಿ, ಹಾಡು ರಚನೆ ಮಾಡಿದ್ದಾರೆ. ಅವರ ಕಾಲದ ಅವಧಿಯಲ್ಲಿ ರಾಯಚೂರಿನ ಬಿಚ್ಚಾಲಿ, ಪಂಚಮುಖಿಯಲ್ಲಿ ಸೇವೆ ಮಾಡಿದ್ದಾರೆ. ದೈವಿ ಸಂಕಲ್ಪದಿಂದ ಗಡಿ ಪ್ರಾಂತ್ಯದ ಮಂತ್ರಾಲಯ ಅಂತಿಮ ಕ್ಷೇತ್ರ ಆಯ್ತು. ಗುರುಗಳಿಗೆ ಕನ್ನಡ ಭಾಷೆ ಪ್ರಿಯವಾದ ಭಾಷೆ ಅಂತ ಉಪನ್ಯಾಸಕ ಜಿ.ರಾಮ್ ರಾವ್ ಹೇಳಿದ್ದಾರೆ.
ಇದನ್ನೂ ಓದಿ: ಮಂತ್ರಾಲಯಕ್ಕೂ ತಟ್ಟಿದ ಭಾಷಾ ವಿವಾದದ ಕಿಚ್ಚು, ಇದು ಕಿಡಿಗೇಡಿಗಳ ಕೃತ್ಯವೆಂದ ಭಕ್ತರು
ಇದಷ್ಟೇ ಅಲ್ಲ ಮಂತ್ರಾಲಯದ ಮಠಕ್ಕೆ ಕರ್ನಾಟಕದಿಂದಲೇ ಸುಮಾರು 80ರಷ್ಟು ಭಕ್ತರು ಬರುತ್ತಾರೆ. ಅಲ್ಲದೇ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆ ಶ್ಲೋಕ ಅಳವಡಿಸಲಾಗಿದೆಯೇ ಹೊರತು ಬೇರೆ ಉದ್ದೇವಿಲ್ಲ ಅಂತ ಭಕ್ತರ ವಾದ. ಹೀಗಾಗಿ ಈ ಬಗ್ಗೆ ಸುಖಾಸುಮ್ಮನೇ ಭಾಷೆ ವಿವಾದ ಸೃಷ್ಟಿಸುವುದನ್ನು ಬಿಟ್ಟು ರಾಯರ ಅನುಗೃಹಕ್ಕಾಗಿ ಪ್ರಾರ್ಥನೆ ಮಾಡಿ ಅಂತ ಹೇಳ್ತಿದ್ದಾರೆ ಅಪಾರ ಭಕ್ತ ಗಣ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



