ಮಹಾದೇವ್ ಬೆಟ್ಟಿಂಗ್ ಆ್ಯಪ್(Mahadev Betting App) ಹಗರಣದ ಪ್ರಮುಖ ಆರೋಪಿಯ ತಂದೆ ಛತ್ತೀಸ್ಗಢದ ದುರ್ಗ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತರು ಇತ್ತೀಚೆಗೆ ಮಹದೇವ್ ಸತ್ತಾ ಆಪ್ ಪ್ರಕರಣದಲ್ಲಿ ಬಂಧಿತರಾದ ಅಸೀಂ ದಾಸ್ ಅವರ ತಂದೆ ಎನ್ನಲಾಗಿದೆ. ಅಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಅಚೋಟಿ ಗ್ರಾಮದ ಬಾವಿಯಲ್ಲಿ ವೃದ್ಧರ ಶವ ತೇಲುತ್ತಿತ್ತು. ವ್ಯಕ್ತಿಯನ್ನು ಸುಶೀಲ್ ದಾಸ್ ಎಂದು ಗುರುತಿಸಲಾಗಿದೆ.
ಮಗನ ಬಂಧನದ ನಂತರ ಮನನೊಂದು ನಿತ್ಯ ಮದ್ಯ ಸೇವಿಸುತ್ತಿರು ಎಂಬುದು ತಿಳಿದುಬಂದಿದೆ. ಈ ಸಂಬಂಧ ಅಂಡಾ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಸೀಂ ದಾಸ್ ತಂದೆ ಸುಶೀಲ್ ದಾಸ್ ಅವರು ಅಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಅಚೋಟಿ ಗ್ರಾಮದ ರೂಪೇಶ್ ಗೌತಮ್ ಅವರ ತೋಟದ ಮನೆಯಲ್ಲಿ ಸುಮಾರು ಐದು ವರ್ಷಗಳಿಂದ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು.
ತೋಟದ ಮನೆಯಲ್ಲಿ ನಿರ್ಮಿಸಿದ ಕೋಣೆಯಲ್ಲಿ ವಾಸಿಸುತ್ತಿದ್ದರು. ಸೋಮವಾರ ರಾತ್ರಿ ಮನೆಯಿಂದ ಜಮೀನಿಗೆ ತೆರಳಿದ್ದರೂ ತೋಟದ ಮನೆಗೆ ಬಂದಿರಲಿಲ್ಲ. ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇತರೆ ಜನರು ಹುಡುಕಾಡಿದಾಗ ತೋಟದ ಮನೆಯಲ್ಲಿದ್ದ ಬಾವಿಯಲ್ಲಿ ಸುಶೀಲ್ ದಾಸ್ ಶವ ಪತ್ತೆಯಾಗಿದ್ದು,ಮೃತರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ.
ಮತ್ತಷ್ಟು ಓದಿ: ಮಹಾದೇವ ಬೆಟ್ಟಿಂಗ್ ಆ್ಯಪ್ ಸೇರಿ ಇತರೇ 21 ಆ್ಯಪ್ ನಿಷೇಧ: ಕೇಂದ್ರ ಸರ್ಕಾರದ ಮಹತ್ವದ ಆದೇಶ
ನವೆಂಬರ್ 2ರಂದು ಮೃತ ಸುಶೀಲ್ ದಾಸ್ ಪುತ್ರ ಅಸೀಂ ದಾಸ್ ನಿವಾಸದ ಹೌಸಿಂಗ್ ಬೋರ್ಡ್ ಹೌಸ್ ನಂ.15ರ ಮೇಲೆ ಇಡಿ ತಂಡ ದಾಳಿ ನಡೆಸಿತ್ತು. 5 ಕೋಟಿಗೂ ಅಧಿಕ ಮೊತ್ತವನ್ನು ವಸೂಲಿ ಮಾಡಲಾಗಿದೆ. ಇದಾದ ಬಳಿಕ ಇಡಿ ತಂಡ ಅಸೀಮ್‌ನನ್ನು ಬಂಧಿಸಿತ್ತು. ನಂತರ ನ್ಯಾಯಾಲಯ ಅವರನ್ನು ಜೈಲಿಗೆ ಕಳುಹಿಸಿತು. ಮಗನ ಬಂಧನದಿಂದ ಅವರ ತಂದೆ ತೀವ್ರ ನೊಂದಿದ್ದರು ಎಂದು ಹೇಳಲಾಗುತ್ತಿದೆ.
ಛತ್ತೀಸಗಢದ ನಿರ್ಗಮಿತ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರಿಗೆ ಮಹದೇವ್ ಬೆಟ್ಟಿಂಗ್ ಆ್ಯಪ್‌ನ ಪ್ರವರ್ತಕರು 508 ಕೋಟಿ ರೂ. ನೀಡಿರುವ ಕುರಿತು ಆರಂಭಿಕ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ