ಮುಂಬೈ: ಕೊರೊನಾ ವಿಚಾರದಲ್ಲಿ ಮಹಾರಾಷ್ಟ್ರ ಮತ್ತೊಂದು ದಾಖಲೆ ಬರೆದಿದೆ. ಅದು ಅಂತಿಂಥ ದಾಖಲೆಯಲ್ಲ ಯುರೋಪ್, ಯುಕೆ ಮತ್ತು ಸ್ಪೇನ್ ದೇಶವನ್ನೇ ಮೀರಿಸುವಂಥ ರೆಕಾರ್ಡ್. ಹಾಗಾದ್ರೆ ಏನದು ದಾಖಲೆ.? ಈ ಸ್ಟೋರಿ ಓದಿ.
ಕೊರೊನಾ ಆತಂಕದ ನಡುವೆ ಇಡೀ ದೇಶ ನಲುಗಿಹೋಗಿದೆ. ಜೊತೆ ಜೊತೆಗೆ ಆರ್ಥಿಕತೆ ಹಳ್ಳ ಹಿಡಿದುಬಿಟ್ಟಿದೆ. ಅದರಲ್ಲೂ ದೇಶದ ವಾಣಿಜ್ಯ ನಗರಿ ಮುಂಬೈನ ಸ್ಥಿತಿ ದಯನೀಯವಾಗಿದೆ. ಇದು ಮುಂಬೈ ಒಂದರ ಕಥೆಯಲ್ಲ. ನೆರೆ ರಾಜ್ಯ ಮಹಾರಾಷ್ಟ್ರದ ಜಿಲ್ಲೆ ಜಿಲ್ಲೆಗಳೂ ಕೊರೊನಾ ಹೊಡೆತಕ್ಕೆ ತತ್ತರಿಸಿವೆ. ಈ ಹೊತ್ತಲ್ಲೇ ಮಹಾರಾಷ್ಟ್ರ ಕೊರೊನಾ ಕೇಸ್ಗಳಲ್ಲಿ ಬ್ರಿಟನ್, ಸ್ಪೇನ್ ದೇಶಗಳನ್ನೇ ಹಿಂದಿಕ್ಕಿದೆ.
12 ಕೋಟಿ ಜನಸಂಖ್ಯೆ, 3 ಲಕ್ಷ ಕೊರೊನಾ ಕೇಸ್!
ಮಹಾರಾಷ್ಟ್ರದ ಜನಸಂಖ್ಯೆ 12 ಕೋಟಿ. ಈ ರಾಜ್ಯದಲ್ಲಿ ಏಪ್ರಿಲ್ವರೆಗೆ ಕೊರೊನಾ ಕಂಟ್ರೋಲ್ನಲ್ಲೇ ಇತ್ತು. ಬಳಿಕ ಭಾರಿ ಪ್ರಮಾಣದಲ್ಲಿ ಪ್ರಕರಣಗಳು ಏರಿದ್ದವು. ಹೀಗಾಗಿ ಜುಲೈ 25ರ ಶನಿವಾರ ಸಂಜೆ ವೇಳೆಗೆ ಒಟ್ಟು 3 ಲಕ್ಷದ 66 ಸಾವಿರ ಕೇಸ್ ಕನ್ಫರ್ಮ್ ಆಗಿವೆ. ಈಪೈಕಿ ಮಹಾರಾಷ್ಟ್ರದಲ್ಲಿ 1ಲಕ್ಷ 45 ಸಾವಿರ ಸಕ್ರಿಯ ಪ್ರಕರಣಗಳಿವೆ.
ಒಟ್ಟು ಕೊರೊನಾ ಕೇಸ್ ಸಂಖ್ಯೆ ಬ್ರಿಟನ್ ಮತ್ತು ಸ್ಪೇನ್ ದೇಶಕ್ಕಿಂತಲೂ ಹೆಚ್ಚಾಗಿದೆ. ಬ್ರಿಟನ್ನಲ್ಲಿ ಈವರೆಗೆ 2 ಲಕ್ಷದ 98 ಸಾವಿರ ಕೇಸ್ ಪತ್ತೆಯಾಗಿದ್ರೆ, ಸ್ಪೇನ್ನಲ್ಲಿ 3 ಲಕ್ಷದ 19 ಸಾವಿರ ಕೊರೊನಾ ಕೇಸ್ಗಳಿವೆ. ಆದ್ರೆ ನಮ್ಮ ಮಹಾರಾಷ್ಟ್ರ ಒಂದರಲ್ಲೇ ಈ ಎರಡೂ ದೇಶಗಳನ್ನ ಮೀರಿಸುವಷ್ಟು ಕೇಸ್ಗಳು ಪತ್ತೆಯಾಗಿವೆ. ಇನ್ನು ರಾಜ್ಯದ ಉಳಿದ ರಾಜ್ಯಗಳ ಪರಿಸ್ಥಿತಿ ಹಾಗೂ ಅಂಕಿ-ಅಂಶ ಹೇಗಿದೆ ಅನ್ನೋದನ್ನ ನೋಡೋದಾದ್ರೆ.
ಕೊರೊನಾ ಕರಿನೆರಳು
ಮೊದಲೇ ಹೇಳಿದಂತೆ ದೇಶದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, 3,66,368 ಸೋಂಕಿತರ ಪೈಕಿ 13,389 ಜನ ಮೃತಪಟ್ಟಿದ್ದಾರೆ. ಇನ್ನು ತಮಿಳುನಾಡಿನಲ್ಲಿ ಒಟ್ಟು 2,06,737 ಕೇಸ್ ಕನ್ಫರ್ಮ್ ಆಗಿದ್ದು, 3409 ಜನರು ಡೆಡ್ಲಿ ವೈರಸ್ಗೆ ಬಲಿಯಾಗಿದ್ದಾರೆ. ದೆಹಲಿಯಲ್ಲಿ 1,29,531 ಪ್ರಕರಣ ಪತ್ತೆಯಾಗಿದ್ದು, 3,806 ಜನ ಸಾವನ್ನಪ್ಪಿದ್ದಾರೆ.
ಕರ್ನಾಟಕ 4ನೇ ಸ್ಥಾನದಲ್ಲಿದ್ದು, 90,942 ಜನರಿಗೆ ಸೋಂಕು ವಕ್ಕರಿಸಿ ಈವರೆಗೂ 1,798 ಮಂದಿ ಮೃತರಾಗಿದ್ದಾರೆ. ನೆರೆಯ ಆಂಧ್ರಪ್ರದೇಶದಲ್ಲಿ ಒಟ್ಟು 88,671 ಪ್ರಕರಣ ಪತ್ತೆಯಾಗಿದ್ದು, 985 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಾಗೇ ತೆಲಂಗಾಣದಲ್ಲಿ 52,466 ಕೇಸ್ ಕನ್ಫರ್ಮ್ ಆಗಿದ್ದರೆ, 455 ಜನ ಮೃತಪಟ್ಟಿರುವ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ.
ಒಟ್ನಲ್ಲಿ ಸೋಂಕು ಕಂಟ್ರೋಲ್ಗೆ ಸಿಗುತ್ತಿಲ್ಲ. ಕ್ಷಣಕ್ಷಣಕ್ಕೂ ನೂರಾರು ಕೇಸ್ಗಳು ದೇಶದಲ್ಲಿ ಪತ್ತೆಯಾಗುತ್ತಿವೆ. ಇದು ಇನ್ನೂ ಕೆಲತಿಂಗಳ ಕಾಲ ಹೀಗೆ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನ ತಪ್ಪದೆ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ಗಳನ್ನ ಬಳಸಬೇಕಿದೆ.
Published On - 7:06 am, Sun, 26 July 20