ಪ್ರಧಾನಿ ಮೋದಿ ನಿರ್ಧಾರವೇ ಅಂತಿಮ; ಮಹಾರಾಷ್ಟ್ರ ಸಿಎಂ ಸ್ಥಾನದ ಕುರಿತು ಏಕನಾಥ್ ಶಿಂಧೆ ಸ್ಪಷ್ಟನೆ

|

Updated on: Nov 27, 2024 | 4:26 PM

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್​ಸಿಪಿ (ಅಜಿತ್ ಪವಾರ್ ಬಣ)ವನ್ನು ಒಳಗೊಂಡಿದ್ದ ಮಹಾಯುತಿ ಮೈತ್ರಿಕೂಟ ಗೆಲುವು ಕಂಡಿದೆ. ಸದ್ಯದಲ್ಲೇ ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಯಾಗಲಿದೆ. ಈ ಬಗ್ಗೆ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ.

ಪ್ರಧಾನಿ ಮೋದಿ ನಿರ್ಧಾರವೇ ಅಂತಿಮ; ಮಹಾರಾಷ್ಟ್ರ ಸಿಎಂ ಸ್ಥಾನದ ಕುರಿತು ಏಕನಾಥ್ ಶಿಂಧೆ ಸ್ಪಷ್ಟನೆ
ಏಕನಾಥ್ ಶಿಂಧೆ
Follow us on

ಥಾಣೆ: ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಭಾರೀ ಅಂತರದ ಗೆಲುವು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿರುವ ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ನಾನು ಜನಪ್ರಿಯತೆಗಾಗಿ ಯಾವ ಕೆಲಸವನ್ನೂ ಮಾಡಲಿಲ್ಲ. ಜನರಿಗಾಗಿ ನಮ್ಮ ಸರ್ಕಾರ ಮಾಡಿದ ಕೆಲಸವೇ ನಮಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ನಾನು ಮತ್ತು ನಮ್ಮ ಸರ್ಕಾರದ ಉಪಮುಖ್ಯಮಂತ್ರಿಗಳು ದಿನದ 24 ಗಂಟೆಯೂ ಕೆಲಸ ಮಾಡಿದ್ದೇವೆ. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ನಿರ್ಧಾರವನ್ನು ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಟ್ಟಿದ್ದೇವೆ. ಅವರು ಯಾವ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧರಿದ್ದೇವೆ ಎಂದು ಹೇಳಿದ್ದಾರೆ.

ನಾನೆಂದೂ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ನಾನು ಜನಸಾಮಾನ್ಯನಂತೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸಿದ್ದೇನೆ. ನನಗೆ ಆ ಬಗ್ಗೆ ಆತ್ಮತೃಪ್ತಿಯಿದೆ. ಈ ಬಾರಿಯ ಗೆಲುವು ಜನರ ಗೆಲುವು. ನಮ್ಮ ಸರ್ಕಾರಕ್ಕೆ ನೀಡಿದ ಸಹಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು. ಅವರ ಮಾರ್ಗದರ್ಶನದಲ್ಲಿ ಈ ಬಾರಿ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಕಾಣಲು ಸಾಧ್ಯವಾಯಿತು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.


ಇದನ್ನೂ ಓದಿ: ‘ವಿಕ್ಷಿತ್ ಭಾರತ್’ ಯುವ ನಾಯಕರ ಸಂವಾದ ಕಾರ್ಯಕ್ರಮದಲ್ಲಿ ಭಾಗಹಿಸುವ ಮುನ್ನ ಈ ರಸ ಪ್ರಶ್ನೆಗಳಿಗೆ ಉತ್ತರಿಸಿ: ಪ್ರಧಾನಿ ಮೋದಿ

ನನಗೆ ಯಾವುದೇ ಬೇಸರವಿಲ್ಲ. ನಾನು ಎರಡೂವರೆ ವರ್ಷದ ಆಡಳಿತದ ಬಗ್ಗೆ ತೃಪ್ತಿ ಹೊಂದಿದ್ದೇನೆ. ಮಹಾರಾಷ್ಟ್ರದಲ್ಲಿ ನಮ್ಮ ಸರ್ಕಾರದ ಗೆಲುವಿಗೆ ನಮ್ಮ ಬೆನ್ನೆಲುಬಾಗಿ ನಿಂತಿದ್ದು ಬಿಜೆಪಿ. ಹೀಗಾಗಿ, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಯನ್ನು ಕೂಡ ನರೇಂದ್ರ ಮೋದಿಯವರಿಗೆ ಬಿಟ್ಟಿದ್ದೇನೆ. ಅವರ ನಿರ್ಧಾರವೇ ಅಂತಿಮ. ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.


ಸಿಎಂ ಆಯ್ಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ನಿರ್ಧಾರ ಮಾಡುತ್ತಾರೆ. ಮುಖ್ಯಮಂತ್ರಿ ಸ್ಥಾನದ ಆಸೆ ನನಗೆ ಇಲ್ಲ. ನಾನು ಯಾವುದೇ ನಿರ್ಧಾರಕ್ಕೂ ಬದ್ಧ ಎಂದು ಪಿಎಂ ಮೋದಿಗೆ ಹೇಳಿದ್ದೇನೆ. ನಿನ್ನೆ ನಾನು ಪ್ರಧಾನಮಂತ್ರಿ ಮೋದಿ, ಅಮಿತ್ ಶಾಗೆ ಕರೆ ಮಾಡಿದ್ದೆ. ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಬದ್ಧ ಎಂದು ಹೇಳಿದ್ದೇನೆ. ಸರ್ಕಾರ ರಚನೆಯಾಗಲು ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಥಾಣೆಯಲ್ಲಿ ಹಂಗಾಮಿ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ