ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಚುನಾವಣೆಗೆ ಮುನ್ನಾ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಫಲಿತಾಂಶದ ನಂತರ ಸಿಎಂ ಸ್ಥಾನಕ್ಕೆ ಶಿವಸೇನೆ ಸ್ಕೆಚ್ ಹಾಕಿದೆ.
ಮರಾಠರ ನಾಡಿನಲ್ಲೀಗ ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಬಂದು 14 ದಿನ ಕಳೆದರೂ ಸರ್ಕಾರ ರಚನೆಯಾಗಿಲ್ಲ. ಕಾರಣ ಚುನಾವಣೆಗೂ ಮುನ್ನ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ, ಇದೀಗ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದೆ. 50-50 ಸೂತ್ರದಡಿ ಮುಖ್ಯಮಂತ್ರಿ ಸ್ಥಾನದ ಹಂಚಿಕೆಗೆ ಬೇಡಿಕೆ ಇಟ್ಟಿದೆ. ಆದ್ರೆ ಇದಕ್ಕೆ ಬಿಜೆಪಿ ನಾಯಕರು ಒಪ್ಪುತ್ತಿಲ್ಲ, ಇದು ಎರಡೂ ಪಕ್ಷಗಳ ಮಧ್ಯೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.
ಎನ್ಸಿಪಿ-ಕಾಂಗ್ರೆಸ್ ಒಪ್ಪುತ್ತಿಲ್ಲ, ಶಿವಸೇನೆ ಸಿಎಂ ಪಟ್ಟ ಬಿಡ್ತಿಲ್ಲ!
ತನ್ನ ಬಹುಕಾಲದ ಗೆಳೆಯ ಬಿಜೆಪಿಗೆ ಗುಡ್ಬೈ ಹೇಳಿ, ಎನ್ಸಿಪಿ ಹಾಗೂ ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ರಚನೆಗೆ ಶಿವಸೇನೆ ಒಲವು ತೋರಿತ್ತು. ಆದ್ರೆ ಇದಕ್ಕೆ ಎನ್ಸಿಪಿ-ಕಾಂಗ್ರೆಸ್ ವರಷ್ಠರು ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ ಮಹಾರಾಷ್ಟ್ರದಲ್ಲಿ ಫಲಿತಾಂಶ ಬಂದು 2 ವಾರ ಕಳೆದರೂ ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗಿಲ್ಲ. ಇನ್ನು ಸರ್ಕಾರ ರಚನೆ ಕಸರತ್ತಿನ ಭಾಗವಾಗಿ ಉದ್ಧವ್ ಠಾಕ್ರೆ ನಿವಾಸ ‘ಮಾತೋಶ್ರೀ’ಯಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಎನ್ಡಿಎ ಮೈತ್ರಿ ಮುರಿದುಕೊಳ್ಳಲು ಇಷ್ಟವಿಲ್ಲ ಅಂತಾ ಉದ್ಧವ್ ಠಾಕ್ರೆ ಹೇಳಿದ್ದಾರೆ. ಇನ್ನು ಸರ್ಕಾರ ರಚನೆ ಅಂತಿಮ ನಿರ್ಧಾರ ಉದ್ಧವ್ ಠಾಕ್ರೆಗೆ ಬಿಟ್ಟಿದ್ದು ಅಂತಾ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸಭೆ ಬಳಿಕ ಶಿವಸೇನೆ ಶಾಸಕರನ್ನ ಬಾಂದ್ರಾದ ರಂಗ್ಶಾರದಾ ಹೋಟೆಲ್ಗೆ ಶಿಫ್ಟ್ ಮಾಡಲಾಗಿದೆ.
‘ಮಹಾ’ ಅಖಾಡಕ್ಕೆ ಗಡ್ಕರಿ ಎಂಟ್ರಿ ಹುಸಿ!
ಇನ್ನು ಸರ್ಕಾರ ರಚನೆ ಕಸರತ್ತಿಗೆ ನಿತಿನ್ ಗಡ್ಕರಿ ಎಂಟ್ರಿಯಾಗಲಿದ್ದಾರೆ, ಅವರ ಆಗಮನದಿಂದ ಬಹು ದೊಡ್ಡ ಬದಲಾವಣೆ ಆಗಲಿದೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದ್ರೆ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ನಾನು ಮತ್ತೆ ಮಹಾರಾಷ್ಟ್ರ ರಾಜಕೀಯಕ್ಕೆ ಎಂಟ್ರಿಯಾಗೋದಿಲ್ಲ ಎಂದಿದ್ದಾರೆ. ಹೀಗಾಗಿ ಗಡ್ಕರಿ ಆಗಮನದ ನಿರೀಕ್ಷೆಯಲ್ಲಿದ್ದ ಮಹಾರಾಷ್ಟ್ರದ ಸ್ಥಳೀಯ ಬಿಜೆಪಿ ನಾಯಕರಿಗೆ ಭಾರಿ ನಿರಾಸೆಯಾಗಿದೆ.
ಇವತ್ತು ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಗೆ ಡೆಡ್ಲೈನ್ ಇದ್ದು, ಇಂದು ಸರ್ಕಾರ ರಚನೆಗೆ ಯಾವುದೇ ಪಕ್ಷ ಮುಂದಾಗದಿದ್ರೆ ರಾಷ್ಟ್ರಪತಿ ಆಳ್ವಿಕೆಗೆ ಮಹಾರಾಷ್ಟ್ರ ರಾಜ್ಯಪಾಲರು ಶಿಫಾರಸು ಮಾಡಬಹುದು.
Published On - 8:42 am, Fri, 8 November 19