ಪಕ್ಕದ ಮಹಾರಾಷ್ಟ್ರದ ಹಲವೆಡೆ ಲಾಕ್​ಡೌನ್​, ಕೊರೊನಾ ಕಾಟ ನಮಗೂ ಕಾಡಬಹುದು

| Updated By: Skanda

Updated on: Mar 11, 2021 | 7:28 PM

ಪಕ್ಕದ ಮಹಾರಾಷ್ಟ್ರದಲ್ಲಿ ಏರುತ್ತಿರುವ ಕೊವಿಡ್ ಕೇಸುಗಳನ್ನು ನೋಡಿ ಅಲ್ಲಿನ ಸರಕಾರ ಹಲವೆಡೆ ಲಾಕ್​ಡೌನ್​ ಹೇರಿದೆ. ಇದನ್ನು ನೋಡಿದಾಗ ಕರ್ನಾಟಕದ ಜನ ಎಚ್ಚೆತ್ತುಕೊಳ್ಳಲೇಬೇಕಾದ ಪರಿಸ್ಥಿತಿ ಉದ್ಭವವಾಗಿದೆ.

ಪಕ್ಕದ ಮಹಾರಾಷ್ಟ್ರದ ಹಲವೆಡೆ ಲಾಕ್​ಡೌನ್​, ಕೊರೊನಾ ಕಾಟ ನಮಗೂ ಕಾಡಬಹುದು
ಆರೋಗ್ಯ ಸಚಿವ ಡಾ.ಸುಧಾಕರ್ ಕರ್ನಾಟಕದಲ್ಲಿ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
Follow us on

ಪಕ್ಕದ ಮಹಾರಾಷ್ಟ್ರದಲ್ಲಿ ಕೊವಿಡ್ ವೈರಸ್ ಮತ್ತೆ ತಲೆ ಎತ್ತಿ ಜನರಿಗೆ ತುಂಬಾ ತಲೆನೋವು ಕೊಡುತ್ತಿರುವ ಹಿನ್ನೆಲೆಯಲ್ಲಿ ಆ ರಾಜ್ಯದ ಹಲವಾರು ಪಟ್ಟಣಗಳಲ್ಲಿ ಮತ್ತೆ ಲಾಕ್ಡೌನ್ ಹೇರಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ. ಇದನ್ನು ಗಮನಿಸಿ ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ಕರ್ನಾಟಕದಲ್ಲಿ ಮತ್ತೆ ನಾವು ಕೂಡ ಲಾಕ್ಡೌನ್ ಎದುರಿಸುವ ಪರಿಸ್ಥಿತಿ ಬರಬಹುದು. ಈ ಕುರಿತು ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ಇಂದು ಮಧ್ಯಾಹ್ನ ಮಾರುಕಟ್ಟೆಗೆ ಬಂದ ಆಡಳಿತ ಪಕ್ಷ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ ಈ ವಿಚಾರದ ಕುರಿತು ಪ್ರಸ್ತಾಪಿಸಲಾಗಿದೆ. ಇಡೀ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ಡೌನ್ ಆಗುತ್ತಾ ಎಂಬ ಪ್ರಶ್ನೆಯೊಂದಿಗೆ ಈ ವಿಚಾರವನ್ನು ಚರ್ಚಿಸಲಾಗಿದೆ. ಈ ಮಧ್ಯೆ, ದೇಶದಲ್ಲಿ ಏರುತ್ತಿರುವ ಕೊವಿಡ್ ಕೇಸುಗಳಲ್ಲಿ ಮಹಾರಾಷ್ಟ್ರದ ಕೊಡುಗೆ ಜಾಸ್ತಿಯಾಗಿದ್ದುದರಿಂದ ಅಲ್ಲಿನ ಸರಕಾರ ತುಂಬಾ ತಲೆಕೆಡಿಸಿಕೊಂಡಿದೆ. ರಾಜ್ಯದ ಹಲವಾರು ಕಡೆ ನಾವು ಲಾಕ್ಡೌನ್ ಹಾಕಲಿದ್ದೇವೆ ಎಂದು ಅಲ್ಲಿನ ಮುಖ್ಯಮಂತ್ರಿ ಉದ್ಧವ ಠಾಕ್ರೆ ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿರುವಂತೆ, ಬುಧವಾರ ಒಂದೇ ದಿನ 13,659 ಕೊವಿಡ್ ಕೇಸುಗಳು ಮಹಾರಾಷ್ಟ್ರದಲ್ಲಿ ವರದಿಯಾಗಿವೆ. ಮುಂಬಯಿ ಬೆಳವಣಿಗೆ ಮಂತ್ರಿ ಅಸ್ಲಮ್ ಶೇಖ್ ರಾತ್ರಿ ಕರ್ಫ್ಯು ಹಾಕುವ ವಿಚಾರ ಇದೆ ಎಂದು ಹೇಳಿದ್ದಾರೆ.

ಮುಂಬಯಿ
ಬೃಹನ್ಮುಂಬಯಿ ಗಡಿಯೊಳಗೆ ವರದಿಯಾಗಿರುವ ಕೊವಿಡ್ ಕೇಸಿನ್ನು 90 ಪ್ರತಿಶತ ಹೌಸಿಂಗ್ ಸೊಸೈಟಿಯಿಂದ ಮತ್ತು ಉಳಿದ 10 ಪ್ರತಿಶತ ಕೊಳಗೇರಿಯಿಂದ ಬಂದಿದೆ ಎಂದು ಇಂಗ್ಲಿಷ್ ಪತ್ರಿಕೆ ಮಿಂಟ್ ವರದಿ ಮಾಡಿದೆ. ಇದು ಅಲ್ಲಿನ ಪಾಲಿಕೆ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಇದನ್ನು ನೋಡಿದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ಆ ಪತ್ರಿಕೆ ವರದಿ ಮಾಡಿದೆ. ಇದರ ಜೊತೆಗೆ ಯಾವ ಕಟ್ಟಡದಲ್ಲಿ ಐದಕ್ಕಿಂತ ಹೆಚ್ಚಿನ ಕೇಸುಗಳು ವರದಿಯಾಗುತ್ತವೋ, ಅವನ್ನು ಸೀಲ್ ಮಾಡಲು ಆದೇಶ ನೀಡಲಾಗಿದೆ ಎಂದು ವರದಿಯಾಗಿದೆ.

ನಾಗ್ಪುರ್
ಈ ಪಟ್ಟಣದಲ್ಲಿ ಮಾರ್ಚ್ 15 ರಿಂದ 21 ರ ವರೆಗೆ ಲಾಕ್ಡೌನ್ ಹೇರಲಾಗಿದೆ. ಈ ವೇಳೆಯಲ್ಲಿ ಖಾಸಗೀ ಅಂಗಡಿ ಮುಗ್ಗಟ್ಟುಗಳು ಮುಚ್ಚಲು ಆದೇಶ ನೀಡಲಾಗಿದೆ. ಇದೇ ಸಂದರ್ಭದಲ್ಲಿ, ಸರಕಾರಿ ಕಚೇರಿಗಳಲ್ಲಿ, 25 ಪ್ರತಿಶತ ಹಾಜರಿಗೆ ಅವಕಾಶ ನೀಡಿ ಆದೇಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ನಿತಿನ್ ರಾವುತ್ ತಿಳಿಸಿದ್ದಾರೆ.

ಕಲ್ಯಾಣ್-ಡೊಂಬಿವಿಲಿ, ಥಾಣೆ ಮತ್ತು ಜಲಗಾಂವ್
392 ಕೊವಿಡ್ ಕೇಸುಗಳು ವರದಿಯಾಗುತ್ತಿದ್ದಂತೆಯೇ, ನಗರ ಪ್ರಾಧಿಕಾರ ಎಚ್ಚೆತ್ತುಕೊಂಡಿದೆ. ಇಂದು ಶಿವರಾತ್ರಿ ಇದ್ದರೂ ಇಲ್ಲಿ ಮಾತ್ರ ಭಕ್ತರಿಗೆ ಶಿವನ ದೇವಸ್ಥಾನಕ್ಕೆ ಹೋಗಲು ಅವಕಾಶ ಇಲ್ಲ ಎಂದು ಔಟ್ಲುಕ್ ವರದಿ ಮಾಡಿದೆ. ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಇಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ ಎಂದು ಆ ಪತ್ರಿಕೆ ವರದಿ ಮಾಡಿದೆ. ಜಲಗಾಂವ್ನಲ್ಲಿ ಮಾರ್ಚ್ 11 ರ ರಾತ್ರಿ 8 ಗಂಟೆಯಿಂದ ಮಾರ್ಚ್ 15 ರ ಬೆಳಿಗ್ಗೆ 8 ಗಂಟೆವರೆಗೆ ಜನತಾ ಕರ್ಫ್ಯೂ ವಿಧಿಸಲಾಗಿದೆ. ಈ ಭಾಗದಲ್ಲಿ ನಡೆಯಬೇಕಿದ್ದ ಮಹಾರಾಷ್ಟ್ರ ಲೋಕ ಸೇವಾ ಆಯೋಗದ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಸ್ಕ್ರಾಲ್ ವರದಿ ಮಾಡಿದೆ. ಥಾಣೆಯಲ್ಲಿ ಕೊರೊನಾಕ್ಕೆ ಸಂಬಂಧಿಸಿದಂತೆ 11 ಹಾಟ್ಸ್ಪಾಟ್ ಗುರುತಿಸುರುವ ಹಿನ್ನೆಲೆಯಲ್ಲಿ, ಮಾರ್ಚ್ 13 ರಿಂದ ಮಾರ್ಚ್ 31 ರವರೆಗೆ ಲಾಕ್ಡೌನ್ ಹೇರಲು ನಿರ್ಧರಿಸಲಾಗಿದೆ.

ನಾವೇನು ಮಾಡಬೇಕು?
ಇದನ್ನು ಓದಿ ನಾವು ಕರ್ನಾಟಕದಲ್ಲಿ ಮತ್ತೆ ಎಚ್ಚರಿಕೆ ಗಂಟೆ ಹೊಡೆಯಲೇಬೇಕು. ಇಲ್ಲ ಎಂದರೆ ಮತ್ತೆ ಹೆಮ್ಮಾರಿ ಮನೆ ಮನೆಯ ಹೆಬ್ಬಾಗಿಲ ಒಳಗೆ ಬರೋದು ಗ್ಯಾರೆಂಟಿ.

ಇದನ್ನೂ ಓದಿ:

ತಾನೇ ಸಿದ್ಧಪಡಿಸಿ ಕೊವಿಡ್​ ಪ್ರಾಥಮಿಕ ವರದಿ ತಿರಸ್ಕರಿಸಿದ ವಿಶ್ವಸಂಸ್ಥೆ; ಅಮೆರಿಕ ಒತ್ತಡವೋ, ಚೀನಾದ್ದೋ?

ಕೊವಿಡ್​ ಲಸಿಕೆ ಸರ್ಟಿಫಿಕೇಟ್​ನಿಂದ ಪ್ರಧಾನಿ ಮೋದಿ ಫೋಟೋ ತೆಗೆಯಲು ಚುನಾವಣಾ ಆಯೋಗ ಸೂಚನೆ

Published On - 7:22 pm, Thu, 11 March 21