ಪುಟ್ಟ ಮಗಳನ್ನು ಕಾಂಗರೂ ಬ್ಯಾಗ್ನಲ್ಲಿರಿಸಿ ಸ್ಕೂಟರ್ ಓಡಿಸುತ್ತಿರುವ ಸ್ವಿಗ್ಗಿ ಡೆಲಿವರಿ ಮಹಿಳೆ; ವೈರಲ್ ವಿಡಿಯೊ ಹಿಂದಿದೆ ಮನಮಿಡಿಯುವ ಕಥೆ
Kerala: ನನ್ನ ಎದೆಗೊರಗಿ ಅವಳು ಮಲಗಿದಾಗ ಅವಳು ಸುರಕ್ಷಿತವಾಗಿರುತ್ತಾಳೆ ಎಂಬ ನಂಬಿಕೆ. ಹೆಣ್ಣು ಮಗುವಲ್ಲವೆ? ಧೈರ್ಯದಿಂದ ಯಾರ ಮಡಿಲಿಗೆ ಒಪ್ಪಿಸಿ ಹೋಗಲಿ ಅಂತಾರೆ ಸ್ವಿಗ್ಗಿ ಡೆಲಿವರಿ ಮಹಿಳೆ ರೇಷ್ಮಾ.
ಕೊಚ್ಚಿ : ಅಮ್ಮನ ಎದೆಗೊರಗಿ ಕಾಂಗರೂ ಬ್ಯಾಗ್ನಲ್ಲಿ ಕುಳಿತುಕೊಂಡಿರುವ ಪುಟ್ಟ ಮಗು. ಹೆಗಲಲ್ಲಿ ಸ್ವಿಗ್ಗಿ ಡೆಲಿವರಿ ಬ್ಯಾಗ್. ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಬಿರು ಬಿಸಿಲಿಗೆ ಸ್ವಿಗ್ಗಿ ಆರ್ಡರ್ ಡೆಲಿವರಿ ಮಾಡಲು ಸ್ಕೂಟರ್ ನಲ್ಲಿ ಹೋಗುತ್ತಿರುವ ಮಹಿಳೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿರುವ ಯುವತಿಯ ಹೆಸರು ಎಸ್. ರೇಷ್ಮಾ. ಕೊಲ್ಲಂ ಚಿನ್ನಕ್ಕಡ ನಿವಾಸಿಯಾದ ರೇಷ್ಮಾ ಇಡಪ್ಪಳ್ಳಿಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್ ಆಗಿರುವ ಬಗ್ಗೆ ತಡವಾಗಿ ಅರಿತ ರೇಷ್ಮಾ, ಇದರಿಂದಾಗಿ ನನ್ನ ಕೆಲಸ ನಷ್ಟವಾಗುವುದೋ ಎಂಬ ಆತಂಕದಲ್ಲಿದ್ದೆ ಎಂದು ಪ್ರತಿಕ್ರಿಯಿಸಿದ್ದಾರೆ.
ವಿಡಿಯೊ ವೈರಲ್ ಆಗಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಗೆಳತಿಯೊಬ್ಬಳು ವಿಡಿಯೊ ನನಗೆ ವಾಟ್ಸ್ಆ್ಯಪ್ ಮಾಡಿದ್ದಳು. ಕೆಲಸ ಕಳೆದುಕೊಂಡರೆ ಏನು ಮಾಡುವುದು ಎಂಬ ಭಯ ನನ್ನಲ್ಲಿತ್ತು. ಬದುಕಲು ಬೇರೆ ಯಾವುದೇ ಮಾರ್ಗ ಇಲ್ಲದಿರುವ ಕಾರಣ ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ಮಲಯಾಳ ಮನೋರಮಾ ಪತ್ರಿಕೆ ಜತೆ ಮಾತನಾಡಿದ ರೇಷ್ಮಾ ಹೇಳಿದ್ದಾರೆ.
ನನ್ನ ಎದೆಗೊರಗಿ ಅವಳು ಮಲಗಿದಾಗ ಅವಳು ಸುರಕ್ಷಿತವಾಗಿರುತ್ತಾಳೆ ಎಂಬ ನಂಬಿಕೆ. ಹೆಣ್ಣು ಮಗುವಲ್ಲವೆ? ಧೈರ್ಯದಿಂದ ಯಾರ ಮಡಿಲಿಗೆ ಒಪ್ಪಿಸಿ ಹೋಗಲಿ? ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿರುವ ನನ್ನ ವಿಡಿಯೊ ಬಗ್ಗೆ ಹಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಅದರಿಂದ ನನಗೆ ನೋವಾಗಿದೆ. ಕಾಂಗರೂನಂತೆ ಮಗುವನ್ನು ತೆಗೆದುಕೊಂಡು ಹೋಗದೆ ಎಲ್ಲಿಯಾದರೂ ಸುರಕ್ಷಿತ ಜಾಗದಲ್ಲಿ ಬಿಟ್ಟು ಹೋಗಬಾರದೆ? ಪೊಲೀಸರಿಗೆ ದೂರು ನೀಡುತ್ತೇವೆ ಎಂಬೆಲ್ಲ ಬೆದರಿಕೆಗಳೂ ಕಾಮೆಂಟ್ನಲ್ಲಿದ್ದವು. ನಿಜವಾಗಿಯೂ ನನಗೆ ಭಯವಾಗುತ್ತಿದೆ.
ಭಾನುವಾರ ಡೇ ಕೇರ್ ಇಲ್ಲದಿರುವ ಕಾರಣ ಒಂದು ದಿನ ಅವಳನ್ನು ನಾನು ನನ್ನ ಜತೆ ಕರೆದೊಯ್ಯುತ್ತೇನೆ. ಬಾಡಿಗೆ ಮನೆಯಲ್ಲಿ ನಮ್ಮ ವಾಸ. ಮನೆ ಪಕ್ಕದಲ್ಲಿರುವ ಡೇ ಕೇರ್ನಲ್ಲಿ ವಾರದ ಆರು ದಿನಗಳನ್ನು ಮಗಳು ಕಳೆಯುತ್ತಾಳೆ. ಭಾನುವಾರವೂ ಡೇ ಕೇರ್ನವರಿಗೆ ಯಾಕೆ ತೊಂದರೆ ಕೊಡಲಿ? ಹಾಗಾಗಿ ಮಗಳನ್ನು ಜತೆಗೆ ಕರೆದೊಯ್ಯುತ್ತೇನೆ. ಶನಿವಾರ ಮತ್ತು ಭಾನುವಾರ ಕೆಲಸ ಮಾಡಿದರೆ ಇನ್ಸೆಂಟಿವ್ ಹೆಚ್ಚು ಸಿಗುತ್ತದೆ.
ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ರವರೆಗೆ ಸುಂದಿಯಮ್ಮ ಎಂಬ ಮಹಿಳೆ ನನ್ನ ಮಗುವನ್ನು ನೋಡಿಕೊಳ್ಳುತ್ತಾರೆ. ನನ್ನ ಜತೆ ಪ್ರಯಾಣ ಮಾಡುವುದು ಅವಳಿಗೂ ಇಷ್ಟ. ಪೊಲೀಸರನ್ನು ಕಂಡರೆ ಭಯವಾಗುತ್ತದೆ. ಸಿಗ್ನಲ್ ಬಂದರೆ ಬೇಗ ಸಿಗ್ನಲ್ ದಾಟಿದರೆ ಸಾಕು ಎಂದು ಪ್ರಾರ್ಥಿಸುತ್ತೇನೆ ಎಂದು ತನ್ನ ಬದುಕಿನ ಕತೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ರೇಷ್ಮಾ.
ಮದುವೆಯಾಗಿ ಕೊಚ್ಚಿ ನಗರಕ್ಕೆ ಬಂದು ನಾಲ್ಕು ವರ್ಷಗಳಾಗಿವೆ. ನಮ್ಮ ವಿವಾಹಕ್ಕೆ ಮನೆಯವರ ವಿರೋಧ ಇತ್ತು. ಹಾಗಾಗಿ ಅವರು ಯಾರೂ ನಮ್ಮನೆಗೆ ಬರಲ್ಲ. ಪ್ಲಸ್ ಟು (ಸಯನ್ಸ್) ತೇರ್ಗಡೆ ಆದ ನಂತರ ಡಿಪ್ಲೊಮಾ ಕೋರ್ಸ್ ಮಾಡಿದೆ. ಅದರ ನಂತರ ಮದುವೆ ಆಯಿತು. ಗಂಡ ರಾಜು ಗಲ್ಫ್ನಲ್ಲಿ ಕೆಲಸ ಮಾಡುತ್ತಿದ್ದಾರೆ, ಒಂದು ವರ್ಷವಾಯಿತು. ಪ್ರತಿ ತಿಂಗಳು ಸ್ವಲ್ಪ ಮೊತ್ತವನ್ನು ಅವರು ಕಳುಹಿಸಿಕೊಡುತ್ತಿದ್ದಾರೆ. ಗೆಳತಿಯೊಬ್ಬಳ ಸಲಹೆ ಮೇರೆಗೆ ಕಾಲೂರಿನಲ್ಲಿ ಕಾರ್ಪರೇಟಿವ್ ಅಕೌಂಟಿಂಗ್ ಕೋರ್ಸ್ಗೆ ಸೇರಿದ್ದು. ಅದರ ಶುಲ್ಕ ಪಾವತಿ ಮಾಡಲು ಹಣ ಬೇಕು. ಹಾಗಾಗಿ ಕೆಲಸ ಮಾಡಲು ತೀರ್ಮಾನಿಸಿದ್ದು. ಮನೆ ಬಾಡಿಗೆಗೂ ದುಡ್ಡು ಬೇಕು. ಪ್ರತಿ ತಿಂಗಳು ಎಲ್ಲದಕ್ಕೂ ಹಣ ಹೊಂದಿಸುವುದು ಕಷ್ಟವಾಗುತ್ತದೆ. ಕೋರ್ಸ್ ಶುಲ್ಕ ಪಾವತಿ ಮಾಡಲು ಹಣವಿಲ್ಲ, ಹಾಗಾಗಿ ಎರಡು ವಾರ ಕ್ಲಾಸಿಗೆ ಹೋಗಲು ಸಾಧ್ಯವಾಗಿಲ್ಲ.
ಕ್ಲಾಸ್ ಇರುವ ದಿನ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಆಹಾರ ವಿತರಣೆ ಮಾಡಲು ಹೋಗುತ್ತೇನೆ. ಅಂಗಡಿಗಳಲ್ಲಿ ಸೇಲ್ಸ್ ಗರ್ಲ್ ಕೆಲಸಕ್ಕೆ ಹಲವರು ಕರೆದರು. ಆದರೆ ಕಲಿಕೆ ಮತ್ತು ದುಡಿಮೆ ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಸ್ವಿಗ್ಗಿ ಡೆಲಿವರಿ ಗರ್ಲ್ ಆಗಿದ್ದು. ಇಲ್ಲಿ ಒಂದು ದಿನ ಕೆಲಸಕ್ಕೆ ಹೋಗದೇ ಇದ್ದರೂ ದೊಡ್ಡ ಸಮಸ್ಯೆ ಆಗಲ್ಲ. ಬೇರೆ ಯಾವುದಾದರೂ ಸಂಸ್ಥೆಯಲ್ಲಿ ಕೆಲಸ ಮಾಡುವುದಾದರೆ ಹೀಗೆ ರಜೆ ತೆಗೆದುಕೊಳ್ಳಲು ಸಾಧ್ಯವಿಲ್ಲವಲ್ಲಾ. ಹಸಿವಾದವರಿಗೆ ಆಹಾರ ತೆಗೆದುಕೊಂಡು ಹೋಗಿ ಕೊಡುವುದು ಕೆಲಸ ಅಲ್ವೇ. ನನಗೆ ಈ ಕೆಲಸ ಇಷ್ಟ ಅಂತಾರೆ ರೇಷ್ಮಾ.
‘ಈ ವಿಡಿಯೊ ನೋಡಿದಾಗ ಮನಸ್ಸಿಗೆ ನೋವಾಯ್ತು. ಮತ್ತೊಮ್ಮೆ ಕಂಡಾಗ ಅಭಿಮಾನವುಂಟಾಯಿತು. ಜೀವ ಮತ್ತು ಜೀವನವನ್ನು ಹಿಡಿದುಕೊಂಡು ಆ ಅಮ್ಮ ಹೋಗುತ್ತಿದ್ದಾರೆ. ಅವಳು ಅಮ್ಮ , ಓರ್ವ ಮಹಿಳೆ ಅದನ್ನು ನೋಡಿ ಅಭಿಮಾನದಿಂದ ಕಣ್ಣು ತುಂಬಿ ಬಂತು. ಭಗವಂತ ನಿನ್ನನ್ನು ಕಾಪಾಡುತ್ತಾನೆ. ಸಹೋದರಿ, ನೀನು ಯಾರು, ಎಲ್ಲಿಯವಳು ಎಂಬುದು ಗೊತ್ತಿಲ್ಲ. ನನ್ನ ಪ್ರಾರ್ಥನೆ ಸದಾ ನಿನ್ನ ಜತೆಗಿರುತ್ತದೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಶೇರ್ ಮಾಡಿದ ವ್ಯಕ್ತಿಯೊಬ್ಬರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Mandya Youth Wins Kerala Lottery ಮಂಡ್ಯದ ಯುವಕನನ್ನು ಕೋಟ್ಯಾಧಿಪತಿ ಮಾಡಿದ ಕೇರಳದ ಲಾಟರಿ
ಬೇಳೆ ಕಾಳು ಮಾರಿ ಸ್ವಾವಲಂಬನೆ ಜೀವನ ನಡೆಸುತ್ತಿರುವ 98ರ ಶ್ರಮ ಜೀವಿ; ಮಾದರಿ ಬದುಕಿಗೆ ನೆಟ್ಟಿಗರ ಶ್ಲಾಘನೆ
Published On - 7:46 pm, Thu, 11 March 21