ಮುಂಬೈ (ಮಾರ್ಚ್ 25): ದೇಶದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿರುವುದು ಮತ್ತೆ ಆತಂಕ ಸೃಷ್ಟಿಸಿದೆ. ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ ಮಿತಿ ಮೀರಿದೆ. ಒಂದೇ ದಿನ ಮಹಾರಾಷ್ಟ್ರದಲ್ಲಿ 35 ಸಾವಿರ ಕೊರೊನಾ ಕೇಸ್ಗಳು ದಾಖಲಾಗಿದ್ದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರ ಮೇಲೆ ಸರ್ಕಾರ ನಿಗಾ ಇರಿಸಿದೆ.
ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 35,952 ಹೊಸ ಕೊರೊನಾ ಪ್ರಕರಣಗಳು ದೃಢವಾಗಿವೆ. 12,764 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 111 ಸಾವು ಸಂಭವಿಸಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 26,00,833ಆಗಿದೆ. 22,83,037 ಜನರು ಈಗಾಗಲೇ ಕೊರೊನಾದಿಂದ ಗುಣಮುಖರಾಗಿದ್ದಾರೆ. 2,62,685 ಆ್ಯಕ್ಟಿವ್ ಪ್ರಕರಣಗಳಿವೆ. ಸಾವಿನ ಸಂಖ್ಯೆ 53,795 ಆಗಿದೆ.
ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಸಾಧ್ಯತೆ?
ಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಿದೆ. ಇದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಠಿಣ ಕ್ರಮ ಕೈಗೊಂಡ ಹೊರತಾಗಿಯೂ ಪ್ರಕರಣಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹೀಗೆಯೇ ಮುಂದುವರಿದರೆ ಲಾಕ್‌ಡೌನ್ ಘೋಷಣೆ ಮಾಡುವ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಆಗಲಿದೆ ಎಂದು ಉದ್ಧವ್ ಠಾಕ್ರೆ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದರು.
ಮಹಾರಾಷ್ಟ್ರದ ಕೊವಿಡ್ ಪರಿಸ್ಥಿತಿ ಗಂಭೀರವಾಗಿದೆ. ದೈನಂದಿನ ಅಂಕಿ ಅಂಶಗಳ ಪ್ರಸ್ತುತ ಏರಿಕೆ ಆತಂಕ ಮೂಡಿಸಿದೆ. ಇದು ಸೋಂಕಿನ ಹೊಸ ಅಲೆಯೇ ಎಂದು ಕಂಡುಹಿಡಿಯಲು ಮತ್ತೊಂದು ಲಾಕ್‌ಡೌನ್ ತಪ್ಪಿಸಲು ಜನರು ಕೊರೊನಾ ವೈರಸ್ ನಿಯಂತ್ರಣ ಶಿಷ್ಟಾಚಾರಗಳನ್ನು ಅನುಸರಿಸಬೇಕೆಂದು ಅವರು ಎಚ್ಚರಿಸಿದ್ದರು.
ಲಾಕ್‌ಡೌನ್ ಅಗತ್ಯವಿದೆಯೇ? ನೀವು ಜವಾಬ್ದಾರಿಯುತವಾಗಿ ವರ್ತಿಸಿ. ಲಾಕ್‌ಡೌನ್ ಬೇಡದವರು ಮಾಸ್ಕ್ ಧರಿಸುತ್ತಾರೆ. ಲಾಕ್‌ಡೌನ್ ಬಯಸುವವರು ಮಾಸ್ಕ್ ಧರಿಸುವುದಿಲ್ಲ. ಮಾಸ್ಕ್ ಧರಿಸಿ, ಲಾಕ್‌ಡೌನ್ ಬೇಡವೆನ್ನಿ ಎಂದು ಉದ್ಧವ್ ಕರೆ ನೀಡಿದ್ದರು. ಆದರೂ, ಜನರು ಗುಂಪು ಸೇರುತ್ತಿರುವುದು ನಿಲ್ಲುತ್ತಿಲ್ಲ. ಜನರು ಕೊರೊನಾ ನಿಯಮ ಪಾಲನೆ ಮಾಡುತ್ತಿಲ್ಲ.
ಇದನ್ನೂ ಓದಿ: ದೇಶದ ವಿವಿಧೆಡೆ ಮತ್ತೆ ಕೊರೊನಾ ಆತಂಕ: ಮಾಸ್ಕ್ ಕಡ್ಡಾಯಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ