
ಮುಂಬೈ, ಅಕ್ಟೋಬರ್ 24: ಮಹಾರಾಷ್ಟ್ರದ (Maharashtra) ಸತಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ವೈದ್ಯೆಯೊಬ್ಬರು ಗುರುವಾರ ರಾತ್ರಿ ಹೋಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 5 ತಿಂಗಳುಗಳಿಂದ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅವರು ತಮ್ಮ ಅಂಗೈಯಲ್ಲಿ ಬರೆದಿದ್ದಾರೆ. ಅಂಗೈನಲ್ಲಿ ಬರೆದಿರುವ ಸೂಸೈಡ್ ನೋಟ್ನಲ್ಲಿ ಪೊಲೀಸ್ ಅಧಿಕಾರಿ ಗೋಪಾಲ್ ಬದನೆ ಐದು ತಿಂಗಳುಗಳಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ಬರೆದಿದ್ದಾರೆ. ತನ್ನ ಮನೆಯ ಮಾಲೀಕರಾಗಿದ್ದ ಪ್ರಶಾಂತ್ ಬಂಕರ್ ಕೂಡ ತನಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.
28 ವರ್ಷದ ವೈದ್ಯೆ ಬೀಡ್ ಜಿಲ್ಲೆಯವರಾಗಿದ್ದು, ಫಾಲ್ಟನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದರು. ಈ ಘಟನೆ ಬೆಳಕಿಗೆ ಬಂದ ನಂತರ, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆ ವೈದ್ಯರ ಕೈಯಲ್ಲಿ ಬರೆದಿದ್ದ ಸೂಸೈಡ್ ನೋಟ್ನ ವಿಧಿವಿಜ್ಞಾನ ವಿಶ್ಲೇಷಣೆಯನ್ನು ಪ್ರಾರಂಭಿಸಿದ್ದಾರೆ. ಆರೋಪಿ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಇನ್‌ಸ್ಟಾನಲ್ಲಿ ಪರಿಚಯಿಸಿಕೊಂಡು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಅಪ್ರಾಪ್ತೆ ಈಗ ಗರ್ಭಿಣಿ
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸತಾರಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿ, ವೈದ್ಯೆ ತಮ್ಮ ಸೂಸೈಡ್ ನೋಟ್ನಲ್ಲಿ ಹೆಸರಿಸಿರುವ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸುವಂತೆ ಆದೇಶಿಸಿದರು. ಹಾಗೇ ಈ ಪ್ರಕರಣದ ಆರೋಪಿಗಳೆಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 pm, Fri, 24 October 25