ಸಮುದ್ರದಲ್ಲಿ ನೀರಿನ ಮಟ್ಟ ಏರುತ್ತಿರುವುದರಿಂದ ಪ್ರಮುಖ ಬಿಸಿನೆಸ್ ಕೇಂದ್ರ ನಾರಿಮನ್ ಪಾಯಿಂಟ್ ಮತ್ತು ರಾಜ್ಯ ಸಚಿವಾಲಯ ಸೇರಿದಂತೆ ದಕ್ಷಿಣ ಮುಂಬೈನ ಹೆಚ್ಚುವರಿ ಭಾಗ ನೀರಿನಲ್ಲಿ ಮುಳುಗಲಿದೆ ಎಂದು ಮುಂಬೈ ಮುನಿಸಿಪಲ್ ಕಮೀಷನರ್ ಇಕ್ಬಾಲ್ ಸಿಂಗ್ ಚಹಲ್ ಹೇಳಿದ್ದಾರೆ. ಆದಿತ್ಯ ಠಾಕ್ರೆ ಅವರು ಹೊಂದಿರುವ ಮಹಾರಾಷ್ಟ್ರ ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಬರವ ಮುಂಬೈ ಹವಾಮಾನ ಕಾರ್ಯಯೋಜನೆ ಮತ್ತು ಅದರ ವೆಬ್ಸೈಟ್ ಲಾಂಚ್ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತಾಡಿದ ಆಯುಕ್ತರು, ದಕ್ಷಿಣ ಮುಂಬೈ ನಗರದ ಎ, ಬಿ, ಸಿ ಮತ್ತು ಡಿ ವಾರ್ಡ್ಗಳ ಶೇಕಡಾ 70 ರಷ್ಟು ಭಾಗ ಹವಾಮಾನಮಾನದಲ್ಲಿ ಆಗಲಿರುವ ಬದಲಾವಣೆ ಕಾರಣ ನೀರಿನಲ್ಲಿ ಮುಳುಗಡೆಯಾಗಲಿವೆ ಎಂದು ಹೇಳಿದರು.
ಪ್ರಕೃತಿ ಎಚ್ಚರಿಕೆಗಳನ್ನು ನೀಡುತ್ತಿದೆ, ಆದರೆ ಜನ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಇಕ್ಬಾಲ್ ಸಿಂಗ್ ಹೇಳಿದರು.
‘ಕಫೆ ಪರೇಡ್, ನಾರಿಮನ್ ಪಾಯಿಂಟ್ ಮತ್ತು ಸಚಿವಾಲಯ ಮೊದಲಾದವು ಶೇಕಾಡಾ 80 ರಷ್ಟು ಮುಳುಗಲಿವೆ, ಅದರರ್ಥ ಈ ಪ್ರದೇಶಗಳು ಕಾಣೆಯಾಗಲಿವೆ,’ ಎಂದು ಹೇಳಿದ ಕಮೀಷನರ್ 2050 ಬಹಳ ದೂರವೇನೂ ಇಲ್ಲ, 25-30 ವರ್ಷಗಳಲ್ಲಿ ಬಂದು ಬಿಡಲಿದೆ ಎಂದರು.
‘ನಿಸರ್ಗ ನಮಗೆ ಎಚ್ಚರಿಕೆಗಳನ್ನು ರವಾನಿಸುತ್ತಿದೆ. ಒಂದು ವೇಳೆ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ 25 ವರ್ಷಗಳ ಕಾಲ ನಾವು ಅಪಾಯದೊಂದಿಗೆ ಸರಸವಾಡಿದಂತೆ. ಇದರ ಪರಿಣಾಮ ಕೇವಲ ಮುಂದಿನ ಪೀಳಿಗೆ ಮಾತ್ರ ಆಗದೆ ಈಗಿನ ತಲೆಮಾರು ಸಹ ತೊಂದರೆಗೆ ಸಿಲುಕಲಿದೆ,’ ಎಂದು ಇಕ್ಬಾಲ್ ಸಿಂಗ್ ಹೇಳಿದರು.
ಮುಂಬೈ, ಹವಾಮಾನ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿ ಅದನ್ನು ಅನಷ್ಠಾನಕ್ಕೆ ತರುತ್ತಿರುವ ದಕ್ಷಿಣ ಏಷ್ಯಾದ ಮೊದಲ ನಗರವಾಗಿದೆ ಎಂದು ಅವರು ಅವರು ಹೇಳಿದರು.
‘ಹಿಂದೆ ನಾವು ಹವಾಮಾನ ಬದಲಾವಣೆ ಮತ್ತು ಹಿಮಚ್ಛಾದಿತ ಪ್ರದೇಶಗಳಲ್ಲಿ ಹಿಮ ಕರಗುವ ಬಗ್ಗೆ ಕೇಳಿಸಿಕೊಳ್ಳುತ್ತಿದ್ದೆವು. ಅವು ನಮ್ಮ ಮೇಲೆ ಯಾವತ್ತೂ ಪ್ರಭಾವ ಬೀರಿರಲಿಲ್ಲ. ಆದರೆ ಈಗ ಅಂಥ ಸ್ಥಿತಿ ನಮ್ಮ ಮನೆ ಹೊಸ್ತಿಲಿಗೆ ಬಂದಿದೆ,’ ಎಂದು ಇಕ್ಬಾಲ್ ಸಿಂಗ್ ಹೇಳಿದರು.
‘ಚಂಡಮಾರುತವೊಂದು (ನಿಸರ್ಗ) ಮುಂಬೈ ನಗರವನ್ನು ಅಪ್ಪಳಿಸಿದ್ದು 129 ವರ್ಷಗಳ ನಂತರ. ಆದರೆ ನಂತರದ 15 ತಿಂಗಳು ಅವಧಿಯಲ್ಲಿ ನಾವು 3 ಚಂಡಮಾರುತಗಳ ಆರ್ಭಟವನ್ನು ಕಂಡಿದ್ದೇವೆ. ಅದಾದ ಮೇಲೆ ಆಗಸ್ಟ್ 5, 2020ರಂದು 5 ರಿಂದ 5.5 ಅಡಿಗಳಷ್ಟು ನೀರು ನಾರಿಮನ್ ಪಾಯಿಂಟ್ನಲ್ಲಿ ಶೇಖರಗೊಂಡಿತ್ತು, ಎಂದು ಮುಂಬೈ ಮುನಿಸಿಪಲ್ ಕಮೀಷನರ್ ಹೇಳಿದರು.
ಭಾರತ ಹವಾಮಾನ ಇಲಾಖೆಯ (ಈಎಮ್ಡಿ) ಪ್ರಕಾರ 64.5 ಮಿಮೀ ನಿಂದ 115.5 ಮಿಮೀ ವರೆಗೆ ಮಳೆ ಬಿದ್ದರೆ ಅದನ್ನು ಭಾರಿ ಅಂತ ಪರಿಗಣಿಸಲಾಗುತ್ತದೆ. 115.5 ಮಿಮೀ ನಿಂದ 204.4 ಮಿಮೀ ಮಳೆಯಾದರೆ ಅದನ್ನು ಅತಿ ಭಾರಿ ಮತ್ತು 204.5 ಕ್ಕಿಂತ ಜಾಸ್ತಿ ಮಳಯಾದರೆ ಅದನ್ನು ಅತ್ಯಂತ ಗರಿಷ್ಠ ಎಂದು ಪರಿಗಣಿಸಲಾಗುತ್ತದೆ.
‘2017 ರಿಂದ 2020 ವರೆಗಿನ 4 ವರ್ಷಗಳ ಅವಧಿಯಲ್ಲಿ ಮುಂಬೈ ಮಹಾನಗರವು ಅತ್ಯಂತ ಗರಿಷ್ಠ ಪ್ರಮಾಣದ ಮಳೆಗಳನ್ನು ಕಂಡಿದೆ. ಇದರರ್ಥ ಅತ್ಯಂತ ಗರಿಷ್ಠ ಪ್ರಮಾಣದ ಮಳೆಯ ಫ್ರೀಕ್ವೆನ್ಸಿ ಮುಂಬೈ ಮಹಾನಗರದಲ್ಲಿ, ವಿಶೇಷವಾಗಿ ಕಳೆದ 4 ವರ್ಷಗಳಲ್ಲಿ ಹೆಚ್ಚುತ್ತಿದೆ,‘ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಬ್ಲ್ಯುಆರ್ಐ ಕ್ರಾಸ್ ಸೆಂಟರ್ ಫಾರ್ ಸಸ್ಟೇನೆಬಲ್ ಸಿಟೀಸ್ ಸಂಸ್ಥೆಯ ಸಹ ನಿರ್ದೇಶಕ ಲುಬೈನಾ ರಂಗ್ವಾಲಾ ಹೇಳಿದರು.
ಇದನ್ನೂ ಓದಿ: ಮಳೆಗಾಲದಲ್ಲಿ ಮರಗಳು ಬೀಳುವುದನ್ನು ನಿಯಂತ್ರಿಸಲು ಮುಂಬೈನಲ್ಲಿ ವಿನೂತನ ಕ್ರಮ; ಟ್ರೀ ಸರ್ಜನ್ಗಳನ್ನು ನೇಮಕ ಮಾಡಿದ ಬಿಎಂಸಿ