ದೆಹಲಿ: ಪಶ್ಚಿಮ ಬಂಗಾಳದಲ್ಲಿ(West Bengal) ಸಚಿವರಾಗಿದ್ದ ಪಾರ್ಥ ಚಟರ್ಜಿ (Partha Chatterjee) ಮತ್ತು ಅವರ ಆಪ್ತ ಸಹಾಯಕಿ ನಿವಾಸದ ಮೇಲೆ ದಾಳಿ ನಡೆಸಿ ಕೋಟಿಗಟ್ಟಲೆ ಹಣವನ್ನು ಇಡಿ ವಶಪಡಿಸಿಕೊಂಡ ನಂತರ ಮಮತಾ ಬ್ಯಾನರ್ಜಿ (Mamata Banerjee) , ಸಚಿವ ಚಟರ್ಜಿಯನ್ನು ಜುಲೈ 28ರಂದು ವಜಾ ಮಾಡಿದ್ದರು. ಸಚಿವರ ವಜಾ ಬೆನ್ನಲ್ಲೇ ಬುಧವಾರ (ಆಗಸ್ಟ್ 3)ರಂದು ಮಮತಾ ಸಚಿವ ಸಂಪುಟ ಪುನರ್ ರಚನೆ ಮಾಡಲಿದ್ದು ನಾಲ್ಕರಿಂದ ಐದು ಹೊಸ ಮುಖಗಳನ್ನು ಸಚಿವ ಸಂಪುಟಕ್ಕೆ ಸೇರಿಸಲಿದ್ದಾರೆ. ನಾವು ಸಪಬ್ರತಾ ಮುಖರ್ಜಿ, ಸಾಧನ್ ಪಾಂಡೆ ಅವರನ್ನು ಕಳೆದುಕೊಂಡಿದ್ದೇವೆ. ಪಾರ್ಥ ಜೈಲಿನಲ್ಲಿದ್ದಾರೆ. ಅವರ ಕೆಲಸಗಳನ್ನು ಮಾಡಬೇಕಿದೆ. ಇವೆಲ್ಲವನ್ನೂ ನನಗೊಬ್ಬಳಿಗೇ ಸಂಭಾಳಿಸಲು ಸಾಧ್ಯವಿಲ್ಲ ಎಂದು ಮಮತಾ ಹೇಳಿದ್ದಾರೆ.
ನಾವು ಸಚಿವ ಸಂಪುಟವನ್ನು ವಿಲೀನಗೊಳಿಸಿ ಹೊಸತೊಂದನ್ನು ರಚಿಸಲು ತೀರ್ಮಾನಿಸಿಲ್ಲ. ರಾಜ್ಯದಲ್ಲಿ ಜಿಲ್ಲೆಗಳ ಸಂಖ್ಯೆ 23ರಿಂದ30ಕ್ಕೇರಿದೆ. ಹಲವಾರು ಮಂದಿ ನನಗೆ ಪತ್ರ ಬರೆಯುತ್ತಿದ್ದಾರೆ. ಈ ಹಿಂದೆ ಬಂಗಾಳದಲ್ಲಿ 23 ಜಿಲ್ಲೆಗಳಿದ್ದು ಈಗ 30ಕ್ಕೇರಿದೆ. ಹೊಸತಾಗಿ ಸುಂದರ್ ಬನ್, ಇಚ್ಚೆಮಟಿ, ರಾಣಾಘಾಟ್, ಬಿಷ್ಣುಪುರ್, ಜಂಗೀಪುರ್, ಬೆಹ್ರಾಂಪುರ್ ಮತ್ತ ಬಸೀರ್ ಹಟ್ ಎಂಬ ಹೊಸ 7 ಜಿಲ್ಲೆಗಳನ್ನು ರಚಿಸಲಾಗಿದೆ ಎಂದು ಮಮತಾ ಹೇಳಿದ್ದಾರೆ.
ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಇಡಿ ಪಾರ್ಥ ಚಟರ್ಜಿ ಅವನ್ನು ಬಂಧಿಸಿತ್ತು. ಇಡಿ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಿಂದ ರಾಶಿ ಹಣ ಮತ್ತು ಚಿನ್ನ ವಶಪಡಿಸಿಕೊಂಡಿದ್ದು, ಅದು ನನ್ನ ಹಣ ಅಲ್ಲ ಎಂದು ಚಟರ್ಜಿ ಹೇಳಿದ್ದಾರೆ.
Published On - 4:59 pm, Mon, 1 August 22