ಅಧಿವೇಶನ ಜಾರಿಯಿರುವಾಗಲೇ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಸೋನಿಯಾ ಮತ್ತು ಇತರ ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗಲಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 15, 2021 | 6:42 PM

ಚುನಾವಣಾ ರಣವ್ಯೂಹ ರಚಿಸುವುದರಲ್ಲಿ ಪರಿಣಿತ ಎನಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಮತ್ತು ಶರದ್ ಪವಾರ್ ಅವರ ನಡುವೆ ಎರಡು ಸಭೆ ನಡೆದ ನಂತರ ಕಳೆದೊಂದು ತಿಂಗಳ ಆವಧಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಅಧಿವೇಶನ ಜಾರಿಯಿರುವಾಗಲೇ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಸೋನಿಯಾ ಮತ್ತು ಇತರ ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗಲಿದ್ದಾರೆ
ಮಮತಾ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿ
Follow us on

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ತಿಂಗಳ ಆಂತ್ಯದಲ್ಲಿ ದೆಹಲಿಗೆ ಭೇಟಿ ನೀಡಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧ ಪಕ್ಷಗಳೆಲ್ಲ ಒಂದುಗೂಡಿ ಒಂದು ಸಂಯುಕ್ತ ರಂಗವನ್ನು ರಚಿಸಲು ನಡೆಸುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಮಮತಾ ಅವರ ದೆಹಲಿ ಭೇಟಿ ಬಹಳ ಮಹತ್ವದೆನಿಸಲಿದೆ. ಬಂಗಾಳದಲ್ಲಿ ಭರ್ಜರಿ ಜಯ ಸಾಧಿಸಿ ವಾಪಸ್ಸು ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಮಮತಾ ದೆಹಲಿಗೆ ಭೇಟಿ ನೀಡಲಿದ್ದಾರೆ. ಬಂಗಾಳದ ವಿಧಾನ ಸಭೆ ಚುನಾವಣೆ ಮೋದಿ ವರ್ಸಸ್ ದೀದಿ ಎಂದು ಬಿಂಬಿತವಾಗಿದ್ದರಿಂದ ಅವರು ಸಾಧಿಸಿದ ಜಯವು ಸಂಯುಕ್ತ ರಂಗ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವಂಥ ಸ್ಥಿತಿ ಉಂಟುಮಾಡಿದೆ.

ಮೂಲಗಳ ಪ್ರಕಾರ ಮಮತಾ ಅವರ ಪ್ರವಾಸ ನಾಲ್ಕು ದಿನಳ ಅವಧಿಯದಾಗಿದ್ದು, ಸೋನಿಯಾ ಅವರಲ್ಲದೆ, ವಿರೋಧ ಪಕ್ಷಗಳ ಹಲವಾರು ನಾಯಕರನ್ನು ಅವರು ಭೇಟಿಯಾಗಲಿದ್ದಾರೆ. ಅವರಲ್ಲಿ ಪ್ರಮುಖರೆಂದರೆ, ಎನ್​ಸಿಪಿ ಮುಖಂಡ ಶರದ್ ಪವಾರ್, ಸಮಾಜವಾದಿ ಪಕ್ಷದ ಚೀಫ್ ಅಖಿಲೇಶ್ ಯಾದವ್ ಮತ್ತು ಆಪ್ ಪಕ್ಷದ ಧುರೀಣ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದ್ದಾರೆ.

ಗುರುವಾರದಂದು ಕೊಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮಮತಾ, ‘ಚುನಾವಣೆಯ ನಂತರ ನಾನು ದೆಹಲಿಗೆ ಹೋಗಿಲ್ಲ. ಈಗ ಕೋವಿಡ್ ಸ್ಥಿತಿ ಸುಧಾರಿಸಿರಿವುದರಿಂದ, ಮಾನ್ಸೂನ್ ಅಧಿವೇಶನ ಜಾರಿಯಲ್ಲಿರುವಾಗಲೇ ದೆಹಲಿಗೆ ಹೋಗಿ ನನ್ನ ಸ್ನೇಹಿತರನ್ನು ಭೇಟಿಮಾಡುವೆ,’ ಎಂದು ಹೇಳಿದರು. ‘ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಸಮಯ ನೀಡಿದರೆ ಅವರನ್ನೂ ಭೇಟಿ ಮಾಡುವೆ,’ ಅಂತ ಹೇಳಿದ ಮಮತಾ, ಪ್ರವಾಸದ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ ಎಂದರು.

ಚುನಾವಣಾ ರಣವ್ಯೂಹ ರಚಿಸುವುದರಲ್ಲಿ ಪರಿಣಿತ ಎನಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಮತ್ತು ಶರದ್ ಪವಾರ್ ಅವರ ನಡುವೆ ಎರಡು ಸಭೆ ನಡೆದ ನಂತರ ಕಳೆದೊಂದು ತಿಂಗಳ ಆವಧಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ತಾವು ರಾಜಕೀಯವನ್ನು ಚರ್ಚಿಸಲಿಲ್ಲ ಎಂದು ಪವಾರ್ ಆವರು ಹೇಳಿದ್ದರೂ ಈ ವಾರದ ಆರಂಭದಲ್ಲಿ ಕಿಶೋರ್ ಅವರು; ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಿ ಸುಮಾರು ನಾಲ್ಕು ತಾಸು ಮಾತುಕತೆ ನಡೆಸಿದ್ದು ತೃತೀಯ ರಂಗದ ರಚನೆ ಬಗ್ಗೆ ಗುಮಾನಿಗಳು ದಟ್ಟವಾಗಿವೆ. ಕಿಶೋರ್ ಯಾವುದಾದರೂ ರಾಜಕೀಯ ಪಕ್ಷ ಸೇರುವುದು ಸಹ ಚರ್ಚೆಯಲ್ಲಿರುವ ವಿಷಯವಾಗಿದೆ.

ಮೂಲಗಳ ಪ್ರಕಾರ ಕಿಶೋರ್ ಮತ್ತು ಗಾಂಧಿಗಳ ನಡುವೆ ನಡೆದ ಸಭೆಯಲ್ಲಿ; ಮುಂದಿನ ವರ್ಷ ಸಾಲು ಸಾಲು ವಿಧಾನ ಸಭೆ ಚುನಾವಣೆ ಮತ್ತು ಮೂರು ವರ್ಷಗಳ ನಂತರ ಲೋಕ ಸಭಾ ಚುನಾವಣೆ ನಡೆಯಲಿರುವುದರಿಂದ ಕಿಶೋರ್ ಅವರಿಗೆ ಒಂದು ನಿರ್ಣಾಯಕ ಭೂಮಿಕೆಯನ್ನು ನೀಡುವ ಕುರಿತು ಚರ್ಚೆಯಾಗಿದೆ

ಏತನ್ಮಧ್ಯೆ, ಮಮತಾ ಅವರಿ ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗಲೇ, ದೆಹಲಿಗೆ ಹೋಗುವ ನಿರ್ಧಾರ ಮಾಡಿದ್ದಾರೆ. ಅವರ ಪ್ರವಾಸಕ್ಕೆ ಯಾಕೆ ಹೆಚ್ಚು ಮಹತ್ವ ಪಡೆದುಕೊಂಡಿದೆಯೆಂದರೆ, ಅಧಿವೇಶನದಲ್ಲಿ ವಿರೋಧ ಪಕ್ಷಗಳು ಕೋವಿಡ್​ ನಿರ್ವಹಣೆ ಮತ್ತು ಬೆಲೆಯೇರಿಕೆ ಸೇರಿದಂತೆ ಹಲವಾರು ವಿಷಯಗಳ ಮೇಲೆ ಸರ್ಕಾರವನ್ನು ಟಾರ್ಗೆಟ್ ಮಾಡಲು ನಿರ್ಧರಿಸಿವೆ.

ಕೋವಿಡ್​ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ಮೊದಲು ನಡೆಯಬೇಕಿದ್ದ ವಿರೋಧ ಪಕ್ಷಗಳ ಸಾಂಪ್ರದಾಯಿಕ ಸಭೆ ಈ ಬಾರಿ ನಡೆದಿಲ್ಲ.

ಇದನ್ನೂ ಓದಿ: ಶರದ್ ಪವಾರ್ ಭೇಟಿ ಮಾಡಿದ ಚುನಾವಣಾ ತಂತ್ರ ಪರಿಣತ ಪ್ರಶಾಂತ್ ಕಿಶೋರ್; 15 ದಿನಗಳಲ್ಲಿ ಇದು ಮೂರನೇ ಬಾರಿ