
ಭೋಪಾಲ್: ತನಗೆ ಕೊವಿಡ್ 19 ಸೋಂಕು ತಗುಲಿದೆ ಎಂದು ಭಾವಿಸಿ, ಪರಿಚಿತನೊಬ್ಬ ಹೇಳಿದನೆಂದು ಸೀಮೆಎಣ್ಣೆ ಕುಡಿದ ವ್ಯಕ್ತಿ ಮೃತಪಟ್ಟಿದ್ದಾರೆ. ಈ ದುರ್ಘಟನೆ ನಡೆದಿದ್ದು ಮಧ್ಯಪ್ರದೇಶದ ಭೋಪಾಲ್ನಲ್ಲಿ. ಆದರೆ ನಂತರ ಇವರ ಕೊವಿಡ್ 19 ವರದಿ ನೆಗೆಟಿವ್ ಎಂದು ಬಂದಿದೆ. ಹೀಗೊಂದು ಮಾಡಬಾರದ ಪ್ರಯೋಗ ಮಾಡಿದ ವ್ಯಕ್ತಿಯ ಹೆಸರು ಮಹೇಂದ್ರ.
ಮಹೇಂದ್ರ ಟೇಲರ್ ವೃತ್ತಿ ನಡೆಸುತ್ತಿದ್ದರು. ಭೋಪಾಲ್ನ ಶಿವ ನಗರ ಎಂಬಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಕಳೆದ 5-6 ದಿನಗಳಿಂದಲೂ ಜ್ವರ ಇತ್ತು. ಏನೇ ಔಷಧಿ ತೆಗೆದುಕೊಂಡರೂ ಜ್ವರ ಬರುತ್ತಲೇ ಇತ್ತು. ಹೀಗಾಗಿ ತಮಗೆ ಕೊವಿಡ್ 19 ಬಂದಿದೆ ಎಂದು ಭಾವಿಸಿದ ಮಹೇಂದ್ರ ತೀರ ಹೆದರಿದ್ದರು. ಇದೇ ವೇಳೆ ಇವರ ಪರಿಚಯದವರೊಬ್ಬರು, ಕೆರೋಸಿನ್ ಕುಡಿದರೆ ಕೊವಿಡ್ ಸೋಂಕು ಕಡಿಮೆ ಆಗುತ್ತದೆ ಎಂಬ ಸಲಹೆ ಕೊಟ್ಟಿದ್ದರು. ಮಹೇಂದ್ರ ಅದರಂತೆ ಮಾಡಲು ಹೋಗಿ ಜೀವವನ್ನೇ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಸೀಮೆಎಣ್ಣೆ ಕುಡಿದ ಬಳಿಕ ಮಹೇಂದ್ರ ಆರೋಗ್ಯಸ್ಥಿತಿ ತೀರ ಹದಗೆಟ್ಟಿತ್ತು. ಹೀಗಾಗಿ ಅವರ ಕುಟುಂಬದವರು ಹತ್ತಿರ ಆಸ್ಪತ್ರೆಗೆ ಸೇರಿಸಲು ಎಲ್ಲ ರೀತಿಯ ಪ್ರಯತ್ನ ಪಟ್ಟಿದ್ದರು. ಆದರೆ ಕೊವಿಡ್ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಎಲ್ಲಿಯೂ ಬೆಡ್ ಸಿಕ್ಕಿರಲಿಲ್ಲ. ಹಾಗಾಗಿ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಅಶೋಕ ಗಾರ್ಡನ್ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿತಾದರೂ, ಅಲ್ಲಿ ಕರೆದುಕೊಂಡು ಹೋಗುವಷ್ಟರಲ್ಲೇ ಮೃತಪಟ್ಟಿದ್ದರು. ಮಹೇಂದ್ರ ಅವರ ಮೃತದೇಹದ ಪರೀಕ್ಷೆ ಮಾಡಿದಾಗ ಕೊವಿಡ್ 19 ವರದಿ ನೆಗೆಟಿವ್ ಬಂದಿದೆ ಎಂದೂ ಪೊಲೀಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಆಕ್ಸಿಜನ್ ಕೊರತೆ ಹಿನ್ನೆಲೆ: ಯೆಶ್ ಟೆಲ್ ಸಮೂಹ ಸಂಸ್ಥೆಯಿಂದ ಉಚಿತ ಆಕ್ಸಿಜನ್ ಪೂರೈಕೆ
Published On - 9:32 pm, Mon, 17 May 21