ಪತ್ನಿಯನ್ನು ಇಂಪ್ರೆಸ್ ಮಾಡಲು ಪಾಸ್ಪೋರ್ಟ್ ಸಿಸ್ಟಂ ಹ್ಯಾಕ್ ಮಾಡಿ ಪತಿಯೊಬ್ಬ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈ ಪೊಲೀಸರ ಪಾಸ್ಪೋರ್ಟ್ ಪರಿಶೀಲನಾ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ಆತ ಪಾಸ್ಪೋರ್ಟ್ ಪರಿಶೀಲನೆ ವೇಳೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ತನ್ನ ಪತ್ನಿ ಸೇರಿದಂತೆ ಮೂವರು ಅರ್ಜಿದಾರರ ಪಾಸ್ಪೋರ್ಟ್ ವಿಚಾರಣೆಯನ್ನು ತೆರವುಗೊಳಿಸಿದ್ದಾರೆ.
ಆತನನ್ನು ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಬಂಧಿಸಲಾಗಿದ್ದು, ಆರೋಪಿ ರಾಜಾ ಬಾಬು ಷಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವರದಿ ಪ್ರಕಾರ, ಉದ್ಯೋಗಕ್ಕಾಗಿ ವಿದೇಶಕ್ಕೆ ಪ್ರಯಾಣಿಸಲು ಬಯಸಿದ್ದ ಪತ್ನಿಯನ್ನು ಮೆಚ್ಚಿಸಲು ಆರೋಪಿ ಪಾಸ್ಪೋರ್ಟ್ ಪರಿಶೀಲನಾ ವ್ಯವಸ್ಥೆಯನ್ನು ಹ್ಯಾಕ್ ಮಾಡಲು ಯತ್ನಿಸಿದ್ದ.
ಆರೋಪಿಯ ಪತ್ನಿಯ ದಾಖಲೆಗಳು ಸರಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ, ಆಕೆಯ ಪಾಸ್ಪೋರ್ಟ್ ಅನ್ನು ಸದ್ಯ ತಡೆಹಿಡಿಯಲಾಗಿದೆ. ರಾಜಾ ಬಾಬು ಷಾ ಉತ್ತರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪತ್ನಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.
ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಯೋಜಿಸಿದ್ದ,ಇದಕ್ಕಾಗಿ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರ ನಡುವೆ ತನ್ನ ಪತ್ನಿಯನ್ನು ಮೆಚ್ಚಿಸುವ ನಿಟ್ಟಿನಲ್ಲಿ ಪಾಸ್ಪೋರ್ಟ್ ವ್ಯವಸ್ಥೆಯನ್ನೇ ಆತ ಹ್ಯಾಕ್ ಮಾಡಿದ್ದ.
ಮೂರು ಪಾಸ್ಪೋರ್ಟ್ ಅರ್ಜಿಗಳು ಕ್ಲಿಯರೆನ್ಸ್ಗಾಗಿ ಬಾಕಿ ಉಳಿದಿದ್ದವು. ಪಾಸ್ಪೋರ್ಟ್ ಫೈಲ್ಗಳನ್ನು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯಿಂದ ನಗರ ಪೊಲೀಸ್ ಇಲಾಖೆಯ ವಿಶೇಷ ಶಾಖೆಗೆ ಕಳುಹಿಸಬೇಕಿತ್ತು. ವಿಶೇಷ ಶಾಖೆ ನಂತರ ಸ್ಥಳೀಯ ಪೊಲೀಸರಿಗೆ ಅರ್ಜಿದಾರರ ಕುರಿತು ವರದಿಯನ್ನು ಸಲ್ಲಿಸುವಂತೆ ಕೇಳಬೇಕಾಗಿತ್ತು.
ಬಳಿಕ ಅದರ ಆಧಾರದ ಮೇಲೆ ಪಾಸ್ಪೋರ್ಟ್ ಮಂಜೂರು ಮಾಡುವ ನಿರ್ಧಾರ ತೆಗೆದುಕೊಳ್ಲಬೇಕಿತ್ತು, ಜತೆಗೆ ಮುಂದಿನ ಕ್ರಮಕ್ಕಾಗಿ ಪಾಸ್ಪೋರ್ಟ್ ಕಚೇರಿಗೆ ರವಾನಿಸಬೇಕಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ