ದೆಹಲಿ: ಮೊಬೈಲ್ ಫೋನ್ ಬದಲಿಸಿಕೊಡಲು ನಿರಾಕರಿಸಿದ ಅಂಗಡಿ ಮಾಲೀಕನ ನಡೆಗೆ ಬೇಸತ್ತು ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ನಗರದ ರೋಹಿಣಿಯಲ್ಲಿ ನಡೆದಿದೆ. 40 ವರ್ಷದ ಭೀಮ್ ಸಿಂಗ್ ಎಂಬಾತ ತನ್ನ ಅಕ್ಕನ ಮಗಳ ಆನ್ಲೈನ್ ಕ್ಲಾಸ್ಗಾಗಿ ಒಂದು ತಿಂಗಳ ಹಿಂದೆಯಷ್ಟೇ ದಕ್ಷಿಣ ರೋಹಿಣಿ ಮಾಲ್ನಲ್ಲಿರುವ ಮೊಬೈಲ್ ಫೋನ್ ಮಳಿಗೆಯಲ್ಲಿ ಮೊಬೈಲ್ ಒಂದನ್ನು ಖರೀದಿಸಿದ್ದನು.
ಆದರೆ, ಆ ಮೊಬೈಲ್ ಸರಿಯಾಗಿ ಕೆಲಸ ಮಾಡದ ಕಾರಣ ಅದನ್ನು ಬದಲಿಸಿಕೊಡುವಂತೆ ಅಂಗಡಿ ಮಾಲೀಕನಿಗೆ ಭೀಮ್ ಸಿಂಗ್ ಮನವಿ ಮಾಡಿಕೊಂಡನು. ಆದರೆ, ಕಂಪನಿಯ ನೀತಿಯನ್ನು ಉಲ್ಲೇಖಿಸಿ ಅಂಗಡಿ ಮಾಲೀಕ ಮೊಬೈಲ್ ಎಕ್ಸ್ಚೇಂಜ್ ಮಾಡಲು ನಿರಾಕರಿಸಿದ್ದಾನೆ. ಆತನ ವರ್ತನೆಯಿಂದ ಬೇಸತ್ತು ಸಿಂಗ್ ಕಳೆದ ಶುಕ್ರವಾರ ಮಧ್ನಾಹ್ನ ಅಂಗಡಿಯ ಮುಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಸದ್ಯ, ಘಟನೆಯಲ್ಲಿ ತೀವ್ರ ಸುಟ್ಟು ಗಾಯಗಳಾಗಿರುವ ಸಿಂಗ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭೀಮ್ ಸಿಂಗ್ ಸಹೋದರಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು ಎಂದು ಹೇಳಲಾಗಿದೆ. ಆಕೆಯ ಅಗಲಿಕೆಯ ನಂತರ 12ನೇ ತರಗತಿಯಲ್ಲಿ ಓದುತಿದ್ದ ಸಹೋದರಿಯ ಮಗಳ ಆನ್ಲೈನ್ ಕ್ಲಾಸ್ಗಾಗಿ 14 ಸಾವಿರ ರೂ. ಖರ್ಚು ಮಾಡಿ ಫೋನ್ ಖರೀದಿಸಿದ್ದರು ಎಂದು ಸಹ ತಿಳಿದುಬಂದಿದೆ.