Biren Singh: ರಾಜ್ಯಪಾಲರ ಭೇಟಿ ನಂತರ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ಸಾಧ್ಯತೆ?

|

Updated on: Jun 30, 2023 | 1:27 PM

ಸಿಂಗ್ ಇಂದು(ಶುಕ್ರವಾರ) ಮಧ್ಯಾಹ್ನ 1 ಗಂಟೆಗೆ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರನ್ನು ಭೇಟಿ ಮಾಡಿ ರಾಜೀನಾಮೆಯನ್ನು ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ

Biren Singh: ರಾಜ್ಯಪಾಲರ ಭೇಟಿ ನಂತರ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ಸಾಧ್ಯತೆ?
ಬಿರೇನ್ ಸಿಂಗ್
Follow us on

ಮಣಿಪುರದಲ್ಲಿ (Manipur) ಜನಾಂಗೀಯ ಘರ್ಷಣೆಗಳ ನಡುವೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (N Biren Singh) ಶುಕ್ರವಾರ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ. ಸಿಂಗ್ ಇಂದು(ಶುಕ್ರವಾರ) ಮಧ್ಯಾಹ್ನ 1 ಗಂಟೆಗೆ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ (Anusuiya Uikey) ಅವರನ್ನು ಭೇಟಿ ಮಾಡಿ ರಾಜೀನಾಮೆಯನ್ನು ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರಿಗೆ ರಾಜೀನಾಮೆ ನೀಡುವ ಅಥವಾ ಕೇಂದ್ರವು ಮಧ್ಯಪ್ರವೇಶಿಸಲು ಅವಕಾಶ ನೀಡುವ ಆಯ್ಕೆಗಳನ್ನು ನೀಡಲಾಗಿದೆ. ಪಿಟಿಐ ಸುದ್ದಿಸಂಸ್ಥೆ ಪ್ರಕಾರ “ತೊಂದರೆ ಉಂಟುಮಾಡುವವರ ವಿರುದ್ಧ ದೃಢವಾದ ನಿಲುವು” ತೆಗೆದುಕೊಳ್ಳುವಂತೆಯೂ ಮುಖ್ಯಮಂತ್ರಿಗೆ ಹೇಳಲಾಗಿದೆ.

ಮಣಿಪುರದಲ್ಲಿ ಹೊಸ ಹಿಂಸಾಚಾರ

ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಘಟನೆಯಲ್ಲಿ, ಗುರುವಾರ ಭದ್ರತಾ ಪಡೆಗಳು ಮತ್ತು ಶಂಕಿತ ಗಲಭೆಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮಣಿಪುರದಲ್ಲಿ ಕೇಂದ್ರದ ಮಧ್ಯಪ್ರವೇಶಿಸಬೇಕು ಎಂದು ಪ್ರತಿಭಟನಾಕಾರರು ಮತ್ತು ರಾಜಕೀಯ ಪಕ್ಷಗಳು ಬೇಡಿಕೆಯೊಡ್ಡಿದ್ದಾರ. ಒಂದು ತಿಂಗಳ ಹಿಂದೆ, ಮಣಿಪುರದ ಕುಕಿ ಸಮುದಾಯದ ಸದಸ್ಯರು ತಾವು ಮುಖ್ಯಮಂತ್ರಿಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದು, ಮಣಿಪುರ ಸಹಜ ಸ್ಥಿತಿಗೆ ತರಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದರು.

ಜೂನ್‌ನಲ್ಲಿ ಮಣಿಪುರದ ಒಂಬತ್ತು ಬಿಜೆಪಿ ಶಾಸಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಎನ್ ಬಿರೇನ್ ಸಿಂಗ್ ನೇತೃತ್ವದ ಸರ್ಕಾರದ ಮೇಲೆ ರಾಜ್ಯದ ಜನರು ಸಂಪೂರ್ಣ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾಂತಿ ಸಂದೇಶವಾಹಕರೋ ಅಥವಾ ರಾಜಕೀಯ ಅವಕಾಶವಾದಿಯೋ?: ರಾಹುಲ್ ಗಾಂಧಿ ಮಣಿಪುರ ಭೇಟಿ ಬಗ್ಗೆ ಕಾಂಗ್ರೆಸ್, ಬಿಜೆಪಿ ನಡುವೆ ವಾಕ್ಸಮರ

ಜನಾಂಗೀಯ ಘರ್ಷಣೆಗಳು

ಮಣಿಪುರದಲ್ಲಿ ಮೈತಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳು ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿವೆ. ಮೇ 3 ರಂದು ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಿದ್ದು, ಈ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿತ್ತು. ಅಂದಿನಿಂದ ಎರಡು ಗುಂಪುಗಳ ನಡುವಿನ ಘರ್ಷಣೆ ತೀವ್ರಗೊಂಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:59 pm, Fri, 30 June 23