
ಇಂಫಾಲ, ಜನವರಿ 18: ಎರಡು ವರ್ಷಗಳ ಹಿಂದೆ ಮಣಿಪುರ(Manipur)ದಲ್ಲಿ ಮೈಥಿ ಹಾಗೂ ಕುಕಿ ಸಮುದಾಯಗಳ ನಡುವೆ ನಡೆದ ಘರ್ಷಣೆ ಸಂದರ್ಭದಲ್ಲಿ ಅಪಹರಣಗೊಂಡು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಕುಕಿ ಯುವತಿ ಇಂಫಾಲದಲ್ಲಿ ಸಾವನ್ನಪ್ಪಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಕುಕಿ ಬುಡಕಟ್ಟು ಜನಾಂಗದ ಯುವತಿ ಆಘಾತಕ್ಕೆ ಒಳಗಾಗಿದ್ದರು. ಅದರಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ. ತಮ್ಮ ಮಗಳು ಜೀವಂತವಾಗಿದ್ದಾಗ ನ್ಯಾಯ ಸಿಗದ ಕಾರಣ ಅವರ ಕುಟುಂಬವು ದುಃಖಿತವಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಆಕೆ ಅನುಭವಿಸಿದ ಆಳವಾದ ಆಘಾತ ಮತ್ತು ದೈಹಿಕ ಗಾಯಗಳಿಂದ ಆಕೆ ಎಂದೂ ಚೇತರಿಸಿಕೊಳ್ಳಲಿಲ್ಲ, ಇದು ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು ಎಂದು ಆಕೆಯ ಕುಟುಂಬ ತಿಳಿಸಿದೆ. ಅವರು ಪವಾಡಸದೃಶವಾಗಿ ಬದುಕುಳಿದಿದ್ದರೂ, ತೀವ್ರವಾದ ದೈಹಿಕ ಗಾಯಗಳು, ಆಳವಾದ ಮಾನಸಿಕ ಆಘಾತ ಮತ್ತು ಗಂಭೀರ ಗರ್ಭಾಶಯದ ತೊಂದರೆಗಳನ್ನು ಅನುಭವಿಸಿದರು. ಅವರಿಗೆ ಗುವಾಹಟಿಯಲ್ಲಿ ಚಿಕಿತ್ಸೆ ನೀಡಲಾಯಿತು ಆದರೆ ಜನವರಿ 10, 2026 ರಂದು ಸಾವನ್ನಪ್ಪಿದ್ದಾರೆ ಎಂದು ಐಟಿಎಲ್ಎಫ್ ತಿಳಿಸಿದೆ.
ತೀವ್ರವಾದ ಗಾಯಗಳಿಂದಾಗಿ ತನ್ನ ಮಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ಭಯಾನಕ ದೌರ್ಜನ್ಯಕ್ಕೆ ಒಳಗಾಗುವ ಮೊದಲು ನನ್ನ ಮಗಳು ತುಂಬಾ ಉತ್ಸಾಹಭರಿತ ಮತ್ತು ಮುಕ್ತ ಮನಸ್ಸಿನ ಹುಡುಗಿಯಾಗಿದ್ದಳು. ಅವಳಿಗೆ ನಿಜವಾಗಿಯೂ ಶೈಕ್ಷಣಿಕ ವಿಷಯದಲ್ಲಿ ಆಸಕ್ತಿ ಇರಲಿಲ್ಲ, ಆದರೆ ಅವಳು ನಮ್ಮ ಸಂಬಂಧಿಕರೊಬ್ಬರೊಂದಿಗೆ ಇಂಫಾಲ್‌ನ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಅನೇಕ ಸ್ನೇಹಿತರಿದ್ದರು ಮತ್ತು ಆಗಾಗ ಅವರೊಂದಿಗೆ ಸಮಯ ಕಳೆಯುತ್ತಿದ್ದಳು ಎಂದು ತಾಯಿ ಹೇಳಿದ್ದಾರೆ.
ಮತ್ತಷ್ಟು ಓದಿ:ಪುರಿಯಲ್ಲಿ ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
20 ವರ್ಷದ ಯುವತಿ ತನ್ನನ್ನು ಕಪ್ಪು ವಸ್ತ್ರದಲ್ಲಿದ್ದ ನಾಲ್ವರು ಪುರುಷರು ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದರು, ಅಲ್ಲಿ ಸರದಿಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಆರೋಪಿಸಿದ್ದರು. ನಾಲ್ವರು ಪುರುಷರು ನನ್ನನ್ನು ಬಿಳಿ ಬೊಲೆರೊದಲ್ಲಿ ಕರೆದುಕೊಂಡು ಹೋದರು. ಅವರು ನನ್ನನ್ನು ಕರೆದುಕೊಂಡು ಹೋಗುತ್ತಿದ್ದಾಗ, ಚಾಲಕನನ್ನು ಹೊರತುಪಡಿಸಿ ಮೂವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನಂತರ ನನ್ನನ್ನು ಬೆಟ್ಟಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿದ್ದಾಗಿ ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಳು.
ತರಕಾರಿಗಳ ರಾಶಿಯ ಕೆಳಗೆ ಅಡಗಿಕೊಂಡಿದ್ದ ಆಕೆಯನ್ನು ಆಟೋರಿಕ್ಷಾ ಚಾಲಕನೊಬ್ಬ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಆಕೆ ತನ್ನ ಮನೆಗೆ ತಲುಪುವಲ್ಲಿ ಯಶಸ್ವಿಯಾದಳು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ