ಹಿಂಸಾಚಾರ(Violence) ಪೀಡಿತ ಮಣಿಪುರ(Manipur)ದ ಚುರಾಚಂದ್‌ಪುರದಲ್ಲಿ ಇಂದು ಕೆಲವು ಗಂಟೆಗಳ ಕಾಲ ಕರ್ಫ್ಯೂವನ್ನು ಭಾಗಶಃ ಸಡಿಲಿಸಲಾಗಿದೆ. ಭಾನುವಾರ ಬೆಳಗ್ಗೆ 7 ರಿಂದ 10 ರವರೆಗೆ ಕರ್ಫ್ಯೂ ಭಾಗಶಃ ಸಡಿಲಿಸಲಾಗಿದ್ದು, ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಚುರಾಚಂದ್‌ಪುರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮೇ 3 ರಂದು ಮಣಿಪುರದ ಹಿಂಸಾಚಾರ ಪೀಡಿತ ಚುರಾಚಂದ್‌ಪುರದಲ್ಲಿ ಜಿಲ್ಲಾಡಳಿತ ಸಂಪೂರ್ಣ ಕರ್ಫ್ಯೂ ವಿಧಿಸಿದೆ.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಮಧ್ಯೆ, ರಾಜ್ಯ ಗವರ್ನರ್ ಅನುಸೂಯಾ ಉಯ್ಕೆ ಅವರು ಶನಿವಾರದಂದು ರಾಜ್ಯದ ಜನತೆಗೆ ಸಹೋದರತ್ವವನ್ನು ಕಾಪಾಡಿಕೊಳ್ಳಲು ಮತ್ತು ಭಯ ಮತ್ತು ಅಭದ್ರತೆಯ ಭಾವನೆಯನ್ನು ಹೋಗಲಾಡಿಸಲು ಮನವಿ ಮಾಡಿದ್ದಾರೆ.
ಮತ್ತಷ್ಟು ಓದಿ: ಮಣಿಪುರ ಹಿಂಸಾಚಾರ; ಕಲಬುರಗಿ ಚುನಾವಣಾ ಪ್ರಚಾರ ರದ್ದು, ದೆಹಲಿಗೆ ತೆರಳಿದ ಅಮಿತ್ ಶಾ
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹಿಂಸಾಚಾರ ಮತ್ತು ಬೆಂಕಿ ಹಚ್ಚುವ ಘಟನೆಗಳು ಪರಸ್ಪರ ಸಹೋದರತ್ವ ಮತ್ತು ಶಾಂತಿಯನ್ನು ಕದಡಿದೆ. ಈ ಅಹಿತಕರ ಘಟನೆಗಳಲ್ಲಿ ರಾಜ್ಯದ ಜನರು ಸಾವನ್ನಪ್ಪಿದ್ದಾರೆ.
ಸಹೋದರತ್ವವನ್ನು ಕಾಪಾಡಿಕೊಳ್ಳಲು, ಭಯ ಮತ್ತು ಅಭದ್ರತೆಯ ಭಾವನೆಯನ್ನು ಹೋಗಲಾಡಿಸಲು ಮತ್ತು ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ಸಹಕರಿಸಲು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದಿದ್ದಾರೆ.
ಈ ಘಟನೆಗಳು ರಾಜ್ಯದ ನಾಗರಿಕರಲ್ಲಿ ಅಭದ್ರತೆ, ಅಪನಂಬಿಕೆ ಮತ್ತು ಭಯದ ವಾತಾವರಣವನ್ನು ಸೃಷ್ಟಿಸಿವೆ ಎಂದು ಹೇಳಲಾಗಿದೆ.
ನಿಮ್ಮ ಸುತ್ತಮುತ್ತಲಿನ ಯಾವುದೇ ಘಟನೆಯು ಅಶಾಂತಿ ಅಥವಾ ಭಯವನ್ನು ಹರಡಿದರೆ, ಆಸ್ತಿಪಾಸ್ತಿಗೆ ಹಾನಿ ಅಥವಾ ಜೀವಹಾನಿಯನ್ನು ಉಂಟುಮಾಡಿದರೆ, ತಕ್ಷಣವೇ ಸೇನೆಯ 24 ಗಂಟೆಗಳ ನಿಯಂತ್ರಣ ಕೊಠಡಿ ಸಂಖ್ಯೆ 9233637014 ಗೆ ಕರೆ ಮಾಡಿ ಅಥವಾ ದಯವಿಟ್ಟು ಪೊಲೀಸರಿಗೆ ಮಾಹಿತಿ ನೀಡಿ ಎಂದು ರಾಜ್ಯಪಾಲರು ಹೇಳಿದರು.
ಇದಕ್ಕೂ ಮೊದಲು, ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ರಾಜ್ಯದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಮಣಿಪುರ ಏಕೀಕರಣದ ಸಮನ್ವಯ ಸಮಿತಿ (COCOMI)’ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಕಾಂಗ್ರೆಸ್, ಎನ್‌ಪಿಎಫ್, ಎನ್‌ಪಿಪಿ, ಸಿಪಿಐ (ಎಂ), ಆಮ್ ಆದ್ಮಿ ಪಕ್ಷ ಮತ್ತು ಶಿವಸೇನೆ ಸೇರಿದಂತೆ ರಾಜಕೀಯ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು.
ಮತ್ತೊಂದೆಡೆ, ಭದ್ರತಾ ಪಡೆಗಳ ಮಧ್ಯಪ್ರವೇಶದ ನಂತರ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪಿ ಡೊಂಗಲ್ ಹೇಳಿದ್ದಾರೆ. ಮಣಿಪುರದಲ್ಲಿ ಆರ್‌ಎಎಫ್, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಸೇರಿದಂತೆ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮುಖ್ಯಸ್ಥ ಕುಲದೀಪ್ ಸಿಂಗ್ ಅವರನ್ನು ಭದ್ರತಾ ಸಲಹೆಗಾರರನ್ನಾಗಿ ನೇಮಿಸಲಾಗಿದೆ ಎಂದು ಅವರು ಹೇಳಿದರು.
ಮಣಿಪುರದ ಪರಿಸ್ಥಿತಿಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಗುಪ್ತಚರ) ಅಶುತೋಷ್ ಸಿನ್ಹಾ ಅವರನ್ನು ಒಟ್ಟಾರೆ ಕಾರ್ಯಾಚರಣಾ ಕಮಾಂಡರ್ ಆಗಿ ನೇಮಿಸಿದೆ ಎಂದು ರಾಜ್ಯ ಡಿಜಿಪಿ ತಿಳಿಸಿದ್ದಾರೆ.
ಮಣಿಪುರ ಹಿಂಸಾಚಾರಕ್ಕೆ ಕಾರಣವೇನು?
ಮೈತಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ಪ್ರತಿಭಟಿಸಲು ವಿದ್ಯಾರ್ಥಿಗಳ ಸಂಘಟನೆಯು ಕರೆ ನೀಡಿದ್ದ ‘ಬುಡಕಟ್ಟು ಏಕತಾ ಮೆರವಣಿಗೆ’ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ