ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ 2009ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಅವರು ವೈದ್ಯರ ಬಳಿ ತಮ್ಮ ಆರೋಗ್ಯದ ಬಗ್ಗೆ ವಿಚಾರಿಸಿರಲಿಲ್ಲ ಬದಲಾಗಿ ಬೇರೇನೋ ಕೇಳಿದ್ದರು ಎನ್ನುವ ವಿಚಾರವನ್ನು ಡಾ. ರಮಾಕಾಂತ್ ಎನ್ಡಿಟಿವಿಗೆ ತಿಳಿಸಿದ್ದಾರೆ. ಆ ಸಮಯದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು, ದೆಹಲಿಯ ಏಮ್ಸ್ನಲ್ಲಿ 10-11ಗಂಟೆಗಳ ಕಾಲ ಬೈಪಾಸ್ ಶಸ್ತ್ರಚಿಕಿತ್ಸೆ ನಡೆದಿತ್ತು.
ಶಸ್ತ್ರಚಿಕಿತ್ಸೆ ಮುಗಿಸಿದ ನಂತರ ರಾತ್ರಿ ಆಕ್ಸಿಜನ್ ಮಾಸ್ಕ್ ಹೊರತೆಗೆದಾಗ ಅವರು ಮಾತನಾಡಲು ಸಾಧ್ಯವಾಗಿತ್ತು. ಅವರು ಮೊದಲು ತಮ್ಮ ಆರೋಗ್ಯ ಹೇಗಿದೆ ಎಂದು ಕೇಳುವುದು ಬಿಟ್ಟು ‘‘ನನ್ನ ದೇಶ ಹೇಗಿದೆ? ಜಮ್ಮು ಕಾಶ್ಮೀರ ಹೇಗಿದೆ? ಎಂದು ಕೇಳಿದ್ದರಂತೆ.
ಆಗ ವೈದ್ಯರು ನಿಮ್ಮ ಶಸ್ತ್ರಚಿಕಿತ್ಸೆ ಬಗ್ಗೆ ಏನನ್ನೂ ಕೇಳಿಲ್ಲ ಎಂದು ಪ್ರಶ್ನಿಸಿದಾಗ ನೀವು ಶಸ್ತ್ರಚಿಕಿತ್ಸೆಯನ್ನು ಸರಿಯಾಗೇ ಮಾಡಿರುತ್ತೀರಿ ಎನ್ನುವ ನಂಬಿಕೆ ಇದೆ ಎಂದಿದ್ದರಂತೆ. ನನಗೆ ಶಸ್ತ್ರಚಿಕಿತ್ಸೆಯ ಬಗ್ಗೆ ಚಿಂತೆ ಇಲ್ಲ. ನನ್ನ ದೇಶದ ಬಗ್ಗೆ ನನಗೆ ಹೆಚ್ಚು ಚಿಂತೆ ಇದೆ ಎಂದು ಹೇಳಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಮತ್ತಷ್ಟು ಓದಿ: Manmohan Singh: ಮನಮೋಹನ್ ಸಿಂಗ್ಗೆ ತಮ್ಮ ಮಾರುತಿ 800 ಕಾರೆಂದರೆ ಬಲು ಪ್ರೀತಿ: ಯುಪಿ ಸಚಿವ ಅಸೀಮ್ ಅರುಣ್
ರೋಗಿಗಳು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಬಳಿಕ ಎದೆ ಭಾಗದಲ್ಲಿ ನೋವಾಗುತ್ತಿದೆ ಎಂದು ಹೇಳಿಕೊಳ್ಳುತ್ತಾರೆ, ಒಂದು ಬಾರಿಯೂ ಸಿಂಗ್ ಯಾವುದೇ ದೂರು ನೀಡಿರಲಿಲ್ಲ, ತಪಾಸಣೆಗೆಂದು ಅವರು ಆಸ್ಪತ್ರೆಗೆ ಬರುವಾಗ ನಾವು ಗೇಟ್ ಬಳಿ ಹೋಗಿ ನಿಲ್ಲುತ್ತಿದ್ದೆವು ಆದರೆ ಅವರು ಅದನ್ನೂ ಕೂಡ ಇಷ್ಟಪಡುತ್ತಿರಲಿಲ್ಲ ಎಂದರು. ಕಳೆದ ಕೆಲವು ತಿಂಗಳುಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿದ್ದವು.
ಮನಮೋಹನ್ ಸಿಂಗ್ ನಿಧನದ ನಂತರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ. ಕೇಂದ್ರ ಸರ್ಕಾರ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ ಮತ್ತು 7 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.
ಮನಮೋಹನ್ ಅವರ ಮಗಳು ವಿದೇಶದಿಂದ ಬರಬೇಕಿದ್ದು, ಇಂದು ಮಧ್ಯಾಹ್ನ ಅಥವಾ ಸಂಜೆ ದೆಹಲಿ ತಲುಪಬಹುದು. ಆ ನಂತರವೇ ಎಲ್ಲದರ ಬಗ್ಗೆಯೂ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ‘ಎಎನ್ಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ