Manmohan Singh Funeral: ಗನ್ ಸಲ್ಯೂಟ್, ಸರ್ಕಾರಿ ಗೌರವದ ಮೂಲಕ ಅಂತಿಮ ವಿದಾಯ; ಮನಮೋಹನ್ ಸಿಂಗ್​ ಪಂಚಭೂತಗಳಲ್ಲಿ ಲೀನ

|

Updated on: Dec 28, 2024 | 2:02 PM

ಭಾರತದ 13ನೇ ಪ್ರಧಾನಮಂತ್ರಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ, ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ನಿಧನರಾಗಿದ್ದಾರೆ. ಇಂದು ದೆಹಲಿಯ ನಿಗಮಬೋಧ ಘಾಟ್‌ನಲ್ಲಿ ನಡೆದ ಅಂತಿಮ ವಿಧಿವಿಧಾನದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಕಲ ಸರ್ಕಾರಿ ಗೌರವಗಳನ್ನು ನೀಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಬಿಜೆಪಿ, ಕಾಂಗ್ರೆಸ್, ಮತ್ತಿತರ ರಾಜಕೀಯ ಪಕ್ಷಗಳ ನಾಯಕರು, ಮನಮೋಹನ್ ಸಿಂಗ್ ಅವರ ಕುಟುಂಬಸ್ಥರು, ಆಪ್ತರು ಅಂತಿಮ ನಮನ ಸಲ್ಲಿಸಿದರು.

Manmohan Singh Funeral: ಗನ್ ಸಲ್ಯೂಟ್, ಸರ್ಕಾರಿ ಗೌರವದ ಮೂಲಕ ಅಂತಿಮ ವಿದಾಯ; ಮನಮೋಹನ್ ಸಿಂಗ್​ ಪಂಚಭೂತಗಳಲ್ಲಿ ಲೀನ
Manmohan Singh Funeral
Follow us on

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಇಂದು ದೆಹಲಿಯ ನಿಗಮಬೋಧ ಘಾಟ್‌ನಲ್ಲಿ ನಡೆದ ಅಂತಿಮ ವಿಧಿವಿಧಾನದಲ್ಲಿ ಪೂರ್ಣ ಸರ್ಕಾರಿ ಗೌರವ, ಗನ್ ಸಲ್ಯೂಟ್ ನೀಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮನಮೋಹನ್ ಸಿಂಗ್ ಅವರ ಪುತ್ರಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸಿಖ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದೆ.

ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಇಂದು ದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದಿದೆ. ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಮತ್ತು ಮೂರು ಸೇನಾ ಮುಖ್ಯಸ್ಥರು ಕೂಡ ಸಿಂಗ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.


ಇದನ್ನೂ ಓದಿ: ಡಾ. ಮನಮೋಹನ್ ಸಿಂಗ್ ಅಂತ್ಯಕ್ರಿಯೆ, ಸ್ಮಾರಕ ವಿಚಾರದಲ್ಲೂ ವಿವಾದ: ಕಾರಣ ಇಲ್ಲಿದೆ ನೋಡಿ


ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಛೇರಿಯಿಂದ ಡಾ. ಮನಮೋಹನ್ ಸಿಂಗ್ ಅವರ ಅಂತಿಮ ಯಾತ್ರೆಯನ್ನು ಆರಂಭಿಸಲಾಯಿತು. ಅಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮುಂತಾದ ಕಾಂಗ್ರೆಸ್ ಪಕ್ಷದ ನಾಯಕರು ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಿದರು.


ಬಳಿಕ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಹೊತ್ತ ಮೆರವಣಿಗೆಯು ಬಳಿಕ ಹೂವಿನಿಂದ ಅಲಂಕೃತವಾದ ವಾಹನದಲ್ಲಿ ಚಿತಾಗಾರವನ್ನು ತಲುಪಿತು. ಈ ವೇಳೆ ಮನಮೋಹನ್ ಸಿಂಗ್ ಅಮರ್ ರಹೇ ಎಂಬ ಘೋಷಣೆಗಳನ್ನು ಅವರ ಅಭಿಮಾನಿಗಳು ಕೂಗುತ್ತಾ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತಿಮ ವಿಧಿವಿಧಾನಗಳು ಅವರಿಗೆ ನೀಡಲಾದ ಸಂಪೂರ್ಣ ರಾಜ್ಯ ಗೌರವದ ಭಾಗವಾಗಿ 21 ಗನ್ ಸಲ್ಯೂಟ್ ಮಾಡಲಾಯಿತು. 21 ಗನ್ ಸೆಲ್ಯೂಟ್‌ನಲ್ಲಿ ಯಾವುದೇ ಶೆಲ್‌ಗಳನ್ನು ಹಾರಿಸಲಾಗುವುದಿಲ್ಲ. ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಕಾರ್ಟ್ರಿಡ್ಜ್ ಅನ್ನು ಸಾಮಾನ್ಯವಾಗಿ ಖಾಲಿ ಸುತ್ತು ಎಂದು ಕರೆಯಲಾಗುತ್ತದೆ. ಇದನ್ನು ಗುಂಡು ಹಾರಿಸುವ ಶಬ್ದವನ್ನು ರಚಿಸಲು ಬಳಸಲಾಗುತ್ತದೆ.


92 ವರ್ಷದ ಮನಮೋಹನ್ ಸಿಂಗ್ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಗುರುವಾರ ರಾತ್ರಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್​) ನಿಧನರಾದರು. ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಎಂದು ಪರಿಗಣಿಸಲ್ಪಟ್ಟ ಮನಮೋಹನ್ ಸಿಂಗ್ ಅವರು 2004ರಿಂದ 2014ರ ಅವಧಿಯಲ್ಲಿ 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಗೌರವಾರ್ಥವಾಗಿ ದೇಶಾದ್ಯಂತ 7 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.


“ಭಾರತದ ಅತ್ಯಂತ ಪ್ರತಿಷ್ಠಿತ ನಾಯಕರಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ವಿನಮ್ರ ವ್ಯಕ್ತಿತ್ವದ ಅವರು ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದವರು. ಅವರು ಹಣಕಾಸು ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. . ಡಾ. ಮನಮೋಹನ್ ಸಿಂಗ್ ಅವರು ಒಬ್ಬ ಪ್ರತಿಷ್ಠಿತ ಸಂಸದೀಯ ಪಟುವಾಗಿದ್ದು, ಅವರ ಜೀವನವು ಅವರ ಪ್ರಾಮಾಣಿಕತೆ ಮತ್ತು ಸರಳತೆಯ ಪ್ರತಿಬಿಂಬವಾಗಿತ್ತು. ಮನಮೋಹನ್ ಸಿಂಗ್ ಅವರ ಜೀವನವು ಯಾವಾಗಲೂ ಹೋರಾಟದಿಂದ ಮೇಲೆ ಏರುವ ಮೂಲಕ ಒಬ್ಬ ವ್ಯಕ್ತಿಯು ಹೇಗೆ ಯಶಸ್ಸನ್ನು ಸಾಧಿಸಬಹುದು ಎಂಬುದಕ್ಕೆ ಪಾಠವಾಗಿದೆ” ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ