ದೆಹಲಿ, ಡಿಸೆಂಬರ್ 27: ನರೇಂದ್ರ ಮೋದಿಗೂ ಮುನ್ನ ಎರಡು ಅವಧಿಗಳ ಕಾಲಕ್ಕೆ ದೇಶದ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದ ಮನಮೋಹನ್ ಸಿಂಗ್ (Manmohan Singh) ಅವರು ನಿನ್ನೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 92 ವರ್ಷದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಈ ಮಧ್ಯೆ ದೆಹಲಿಯಲ್ಲಿ ಡಾ. ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯಸಭೆ ವಿಪಕ್ಷ ನಾಯಕ & ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.
ಪ್ರಧಾನಿಯಾಗಿ, ವಿತ್ತ ಸಚಿವರಾಗಿ, ಆರ್ಥಿಕ ತಜ್ಞರಾಗಿ ದೇಶದ ಎಕಾನಾಮಿ ವ್ಯವಸ್ಥೆಗೆ ಮನಮೋಹನ್ ಸಿಂಗ್ ಕೊಟ್ಟ ಕೊಡುಗೆ ಅಪಾರ. ಹಾಗಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ, ದೆಹಲಿಯಲ್ಲಿ ಸ್ಮಾರಕಕ್ಕೆ ಜಾಗ ನೀಡಬೇಕು. ಸ್ಮಾರಕ ನಿರ್ಮಿಸುವ ಜಾಗದಲ್ಲೇ ಅಂತ್ಯಕ್ರಿಯೆ ಮಾಡಬೇಕು. ಅಂತ್ಯಕ್ರಿಯೆ ಮಾಡುವ ಸ್ಥಳ ಸ್ಮಾರಕ ನಿರ್ಮಾಣ ಮಾಡುವಂತಿರಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಈ ಪತ್ರಕ್ಕೆ ಪ್ರಧಾನಿ ಮೋದಿ ಸ್ಪಂದಿಸುತ್ತಾರಾ ಕಾದುನೋಡಬೇಕಿದೆ.
ಇನ್ನು ನಾಳೆ ಬೆಳಗ್ಗೆ 11.45ಕ್ಕೆ ದೆಹಲಿಯ ನಿಗಮ್ ಬೋಧ್ ಘಾಟ್ನಲ್ಲಿ ಡಾ.ಮನಮೋಹನ್ ಸಿಂಗ್ ಅಂತ್ಯಕ್ರಿಯೆ ನಡೆಯಲಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಜರುಗಲಿದ್ದು, ಅಗತ್ಯ ತಯಾರಿ ಮಾಡಿಕೊಳ್ಳಲು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ.
ಇದನ್ನೂ ಓದಿ: ಹಾರ್ಟ್ ಸರ್ಜರಿ ಬಳಿಕ ಮನಮೋಹನ್ ಸಿಂಗ್ ವೈದ್ಯರ ಬಳಿ ತಮ್ಮ ಆರೋಗ್ಯದ ವಿಚಾರ ಬಿಟ್ಟು ಬೇರೇನೋ ಕೇಳಿದ್ದರಂತೆ
ದೀರ್ಘಕಾಲದಿಂದ ಅನಾರೋಗ್ಯಕ್ಕೀಡಾಗಿದ್ದ ಮನಮೋಹನ್ ಸಿಂಗ್ ನಿನ್ನೆ ರಾತ್ರಿ ಮನೆಯಲ್ಲಿ ದಿಢೀರ್ ಪ್ರಜ್ಞೆ ತಪ್ಪಿದ್ದಾರೆ. ಕೂಡಲೆ ಅವರನ್ನು ರಾತ್ರಿ 8:06 ರ ವೇಳೆಗೆ ಏಮ್ಸ್ ಆಸ್ಪತ್ರೆಗೆ ದಾಖಲಿಸಿ, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ರಾತ್ರಿ 9:51ಕ್ಕೆ ಅವರು ಕೊನೆಯುಸಿರೆಳೆದರು ಎಂದು ಏಮ್ಸ್ ತಿಳಿಸಿದೆ. ಮನಮೋಹನ್ ಸಿಂಗ್ ಅವರು ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ದೆಹಲಿ ನಿವಾಸದಲ್ಲಿ ಗಣ್ಯಾತೀ ಗಣ್ಯರು ಸಿಂಗ್ರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.