
ಮರಾಠ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಮನೋಜ್ ಜಾರಂಗೆ ಪಾಟೀಲ್ ಮಹಾರಾಷ್ಟ್ರ ಚುನಾವಣೆಯಿಂದ ಹಿಂದೆ ಸರಿದಿದ್ದು , ತಮ್ಮ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ನವೆಂಬರ್ 20 ರ ಚುನಾವಣೆಯಲ್ಲಿ 10-15 ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಹೇಳಿದ ಒಂದು ದಿನದ ನಂತರ ಯೂ-ಟರ್ನ್ ತೆಗೆದುಕೊಂಡಿದ್ದಾರೆ. ಜಾಲ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ನಿರ್ಧಾರವನ್ನು ಒತ್ತಡದಿಂದ ತೆಗೆದುಕೊಂಡಿಲ್ಲ, ಮೀಸಲಾತಿ ಕುರಿತ ಅಭಿಯಾನ ಮುಂದುವರೆಯುವುದು ಎಂದು ಸ್ಪಷ್ಟಪಡಿಸಿದರು.
ಈ ಚುನಾವಣೆಯಲ್ಲಿ ದಲಿತ ಮತ್ತು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹೊರಟಿದ್ದೆವು.ಆದರೆ, ಒಂದು ಜಾತಿಯ ಬಲದ ಮೇಲೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲು ಸಾಧ್ಯವಿಲ್ಲ ಎಂದರು.
ಮತ್ತಷ್ಟು ಓದಿ:
Sharad Pawar: ಶರದ್ ಪವಾರ್ ಒಬಿಸಿ ವರ್ಗಕ್ಕೆ ಸೇರಿದವರೇ? ವೈರಲ್ ಆದ ಜಾತಿ ಪ್ರಮಾಣಪತ್ರದ ನಿಜಾಂಶವೇನು?
ಯಾರನ್ನು ಸೋಲಿಸಬೇಕು ಎಂಬುದನ್ನು ಜನರೇ ನಿರ್ಧರಿಸಬೇಕು, ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂದು ಜಾರಂಗೆ ಹೇಳಿದರು. ನಾವು ರಾಜಕೀಯಕ್ಕೆ ಹೊಸಬರು, ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಅವರು ಸೋತರೆ, ಅದು ಜಾತಿಗೆ ನಾಚಿಕೆಗೇಡಿನ ಸಂಗತಿಯಾಗಲಿದೆ. ಆದ್ದರಿಂದ ಎಲ್ಲಾ ಮರಾಠಾ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆಯಲು ನಾನು ವಿನಂತಿಸುತ್ತೇನೆ ಎಂದು ಅವರು ಹೇಳಿದರು. ನವೆಂಬರ್ 4 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಮರಾಠ ಸಮುದಾಯಕ್ಕೆ ರಾಜಕೀಯಕ್ಕೆ ಪ್ರವೇಶಿಸಿ ಮರಾಠ ಮೀಸಲಾತಿ ಪಡೆಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಆಗಸ್ಟ್ 6 ರಂದು ಜಾರಂಗೆ ಹೇಳಿದ್ದರು. ಆಗ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಫೆಬ್ರವರಿಯಲ್ಲಿ, ಮಹಾರಾಷ್ಟ್ರ ಶಾಸಕಾಂಗವು ರಾಜ್ಯದ ಜನಸಂಖ್ಯೆಯ ಶೇಕಡಾ 30 ಕ್ಕಿಂತ ಹೆಚ್ಚು ಜನರನ್ನು ಒಳಗೊಂಡಿರುವ ಮರಾಠರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಪ್ರತ್ಯೇಕ ವರ್ಗದ ಅಡಿಯಲ್ಲಿ ಶೇಕಡಾ 10 ರಷ್ಟು ಮೀಸಲಾತಿಯನ್ನು ಒದಗಿಸುವ ಮಸೂದೆಯನ್ನು ಅಂಗೀಕರಿಸಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ