ಮುಂಬೈ: ಸ್ವಂತ ವಾಹನದಲ್ಲಿ ಸಂಚಾರ ಮಾಡುವಾಗ ಮಾಸ್ಕ್ ಹಾಕುವ ಅವಶ್ಯಕತೆ ಏನು? ಸಾಮಾನ್ಯವಾಗಿ ಸ್ವಂತ ವಾಹನದಲ್ಲಿ ಕುಟುಂಬದವರು ಹಾಗೂ ಆಪ್ತರೇ ಸಂಚಾರ ಮಾಡುತ್ತಾರೆ. ಹೀಗಾಗಿ, ಸ್ವಂತ ವಾಹನದಲ್ಲಿ ತೆರಳುವಾಗ ಮಾಸ್ಕ್ ಅವಶ್ಯತೆ ಇಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಈ ವಿಚಾರವನ್ನು ಮನಗಂಡ ಬೃಹತ್ ಮುಂಬೈ ಮಹಾನಗರ ಪಾಲಿಕೆ, ಖಾಸಗಿ ವಾಹನದಲ್ಲಿ ತೆರಳುವವರಿಗೆ ಮುಖ ಧಿರಿಸು ಕಡ್ಡಾಯವಲ್ಲ ಎಂದು ಹೇಳಿದೆ.
ಮುಂಬೈನಲ್ಲಿ ಭಾನುವಾರದಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದೆ. ಸ್ವಂತ ವಾಹನದಲ್ಲಿ ಸಂಚಾರ ಮಾಡುವವರು ಮುಖಕ್ಕೆ ಮಾಸ್ಕ್ ಹಾಕುವುದು ಕಡ್ಡಾಯವಲ್ಲ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಹೇಳಿದೆ. ಉಳಿದಂತೆ ಟ್ಯಾಕ್ಸಿ, ಬಸ್, ರಿಕ್ಷಾ ಸೇರಿ ಇತರ ಸಾರ್ವಜನಿಕ ಸಾರಿಗೆಯಲ್ಲಿ ಮಾಸ್ಕ್ ಹಾಕುವುದು ಕಡ್ಡಾಯವಾಗಿದೆ.
ಬೆಂಗಳೂರಲ್ಲೂ ಇದೇ ವಾದ:
ಕಾರು ಮತ್ತಿತ್ಯಾದಿ ಸ್ವಂತ ವಾಹನದಲ್ಲಿ ಸಾಗುತ್ತಿರುವ ವೇಳೆ ಮಾಸ್ಕ್ ಹಾಕಿಲ್ಲ ಎನ್ನುವ ಕಾರಣಕ್ಕೆ ಪೊಲೀಸರು ದಂಡ ಹಾಕಿದ ಸಾಕಷ್ಟು ಉದಾಹರಣೆಗಳು ಬೆಂಗಳೂರಿನಲ್ಲಿ ನಡೆದಿವೆ. ಇದು ಸರಿಯಲ್ಲ ಎನ್ನುವುದು ಸಾರ್ವಜನಿಕರ ವಾದ. ಏಕೆಂದರೆ, ಮನೆ ಮಂದಿಯೇ ಕಾರಿನಲ್ಲಿ ಕೂತಿರುತ್ತಾರೆ. ಅಷ್ಟೇ ಅಲ್ಲ, ಹೊರ ಜಗತ್ತಿನೊಂದಿಗೆ ಇವರು ಸಂಪರ್ಕ ಹೊಂದಿರುವುದಿಲ್ಲ. ಹೀಗಾಗಿ, ಮಾಸ್ಕ್ ಅವಶ್ಯಕತೆ ಇಲ್ಲ ಎನ್ನುವುದು ಅನೇಕರ ಹೇಳುತ್ತಾ ಬಂದಿದ್ದಾರೆ. ಕೊರೊನಾ ಹಾಟ್ ಸ್ಪಾಟ್ ಎನಿಸಿಕೊಂಡ ಮುಂಬೈನಲ್ಲೇ ಈ ನಿಯಮ ಜಾರಿಗೆ ಬಂದಿದೆ. ಹೀಗಿರುವಾಗ ಕರ್ನಾಟಕದಲ್ಲಿ ಈ ನಿಯಮ ಜಾರಿಗೆ ತರಲು ಸಮಸ್ಯೆ ಏನು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ತಗ್ಗಿಲ್ಲ ಕೊರೊನಾ ಪ್ರಕರಣ
ಕರ್ನಾಟಕದಲ್ಲಿ ಈ ಮೊದಲು ನಿತ್ಯ 5 ಸಾವಿರ ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ರಾಜ್ಯದಲ್ಲಿ ಕೊರೊನಾ ಸದ್ಯ ನಿಯಂತ್ರಣಕ್ಕೆ ಬಂದಿದ್ದು, ನಿತ್ಯ ಬರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಮೂರಂಕಿಗೆ ಇಳಿಕೆ ಆಗಿದೆ. ಆದರೆ, ಮಹಾರಾಷ್ಟ್ರದಲ್ಲಿ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಭಾನುವಾರ ಹೊಸದಾಗಿ 2,910 ಕೊರೊನಾ ಕೇಸ್ ಪತ್ತೆ ಆಗಿದ್ದು, ಈ ಮೂಲಕ ಪ್ರಕರಣಗಳ ಸಂಖ್ಯೆ 19,87,678ಕ್ಕೆ ಏರಿಕೆ ಆಗಿದೆ. ಕೊರೊನಾದಿಂದ 50,388 ಜನರು ಮೃತಪಟ್ಟಿದ್ದಾರೆ.
ಕೊರೊನಾ ಬಂದಮೇಲೆ ಪತ್ನಿಯನ್ನು ತಬ್ಬಿಕೊಳ್ಳಲು, ಚುಂಬಿಸಲು ಸಾಧ್ಯವಾಗಿಲ್ಲ: ಫಾರುಕ್ ಅಬ್ದುಲ್ಲಾ ಬೇಸರ
Published On - 6:08 pm, Mon, 18 January 21