ಬಿಹಾರ: ಬೇಗುಸರಾಯ್​​ನಲ್ಲಿ ಪಾದಚಾರಿಗಳ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು; ಒಬ್ಬ ಸಾವು, 11 ಮಂದಿಗೆ ಗಾಯ

| Updated By: ರಶ್ಮಿ ಕಲ್ಲಕಟ್ಟ

Updated on: Sep 13, 2022 | 9:52 PM

ಬಿಹಾರದ ರಾಷ್ಟ್ರೀಯ ಹೆದ್ದಾರಿ 31 ಮತ್ತು 28 ರ ಉದ್ದಕ್ಕೂ ಅಮಾಯಕ ಪಾದಚಾರಿಗಳ ಮೇಲೆ ಗುಂಡಿನ ಸುರಿಮಳೆಗೈದ ದುಷ್ಕರ್ಮಿಗಳು

ಬಿಹಾರ: ಬೇಗುಸರಾಯ್​​ನಲ್ಲಿ ಪಾದಚಾರಿಗಳ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು; ಒಬ್ಬ ಸಾವು, 11 ಮಂದಿಗೆ ಗಾಯ
ಪ್ರಾತಿನಿಧಿಕ ಚಿತ್ರ
Follow us on

ಬೇಗುಸರಾಯ್: ಇಂದು(ಮಂಗಳವಾರ) ಸಂಜೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಿಹಾರದ (Bihar) ರಾಷ್ಟ್ರೀಯ ಹೆದ್ದಾರಿ 31 ಮತ್ತು 28 ರ ಉದ್ದಕ್ಕೂ ಅಮಾಯಕ ಪಾದಚಾರಿಗಳ ಮೇಲೆ ಗುಂಡಿನ ಸುರಿಮಳೆಗೈದ  (Mass Shooting) ಘಟನೆ ವರದಿ ಆಗಿದೆ. ಈ ಗುಂಡು ಹಾರಾಟದಲ್ಲಿ ಒಬ್ಬರು ಸಾವಿಗೀಡಾಗಿದ್ದು ಹನ್ನೊಂದು ಮಂದಿ  ಗಾಯಗೊಂಡಿದ್ದಾರೆ. ಬರೌನಿ ಥರ್ಮಲ್ ಪವರ್ ಸ್ಟೇಷನ್ ಬಳಿ ಎನ್ಎಚ್ 31 ರಿಂದ ಹಿಡಿದು ಎನ್ಎಚ್ 28 ರ ಬಚ್ವಾರಾವರೆಗೆ ತಮ್ಮ ಬೈಕ್‌ನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಈ ದುಷ್ಕರ್ಮಿಗಳು ಗುಂಡುಗಳನ್ನು ಹಾರಿಸಿದ್ದಾರೆ. ನಾಲ್ಕು ವಿವಿಧ ಸ್ಥಳಗಳಲ್ಲಿ ಗುಂಡಿನ ಚಕಮಕಿ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಬೇಗುಸರಾಯ್ (Begusarai) ಪೊಲೀಸ್ ವರಿಷ್ಠಾಧಿಕಾರಿ ಯೋಗೇಂದ್ರ ಕುಮಾರ್ ತಿಳಿಸಿದ್ದಾರೆ.”ಜಿಲ್ಲೆಯಾದ್ಯಂತ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಬಚ್ವಾರಾ ಪ್ರದೇಶದ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸರು ಅವರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಕುಮಾರ್ ಹೇಳಿದರು. ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ಬೇಗುಸರಾಯ್ ಸದರ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಬಿಹಾರದಲ್ಲಿ ಯಾವುದೇ ಸರ್ಕಾರವಿಲ್ಲ. ಇಲ್ಲಿ ಅಪರಾಧಿಗಳಲ್ಲಿ ಕಾನೂನಿನ ಭಯವಿಲ್ಲ. ಅಪರಾಧಿಗಳು ನಿರ್ಭೀತಿಯಿಂದ ಹಲವಾರು ಜನರ ಮೇಲೆ ಗುಂಡು ಹಾರಿಸಿದರು. ಅವರು 4 ಪೊಲೀಸ್ ಠಾಣೆ ಪ್ರದೇಶಗಳಲ್ಲಿ 30 ಕಿಮೀ ಪ್ರಯಾಣಿಸಿದರು, ಆದರೆ ಅವರು ಪೊಲೀಸರಿಗೆ ಸಿಕ್ಕಿಬೀಳಲಿಲ್ಲ. ಈ ಬಗ್ಗೆ ಸಿಎಂ ಹೇಳಿಕೆ ನೀಡಬೇಕು ಎಂದು ಬೇಗುಸರಾಯ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯ ಕುರಿತು ಕೇಂದ್ರ ಸಚಿವ ಹಾಗೂ ಬೇಗುಸರಾಯ್ ಸಂಸದ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ರಾಜ್ಯ ಸರ್ಕಾರವು ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕನಿಷ್ಠ 1 ಕೋಟಿ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ ಸಿಂಗ್.

Published On - 9:23 pm, Tue, 13 September 22