ಪಕ್ಷಕ್ಕಿಂತ ಸಂಬಂಧಕ್ಕೇ ಹೆಚ್ಚು ಆದ್ಯತೆ ಕೊಡ್ತಾರೆ, ಬಿಎಸ್‌ಪಿಯಿಂದ ಸೋದರಳಿಯ ಆಕಾಶ್ ಆನಂದ್​ಗೆ ಗೇಟ್‌ಪಾಸ್ ಕೊಟ್ಟ ಮಾಯಾವತಿ

ಮಾಯಾವತಿ ಸೋದರಳಿಯ ಆಕಾಶ್ ಆನಂದ್ ಅವರನ್ನು ಬಿಎಸ್‌ಪಿಯಿಂದ ಹೊರಹಾಕಿದ್ದಾರೆ. ಆಕಾಶ್ ಪಕ್ಷದ ಚಳವಳಿಗಿಂತ ಕುಟುಂಬ ಸಂಬಂಧಗಳಿಗೆ ಆದ್ಯತೆ ನೀಡಿದ್ದೇ ಇದಕ್ಕೆ ಕಾರಣ. ಇದು ಬಿಎಸ್‌ಪಿಯಲ್ಲಿನ ಕುಟುಂಬ ರಾಜಕಾರಣ ಮತ್ತು ಉತ್ತರಾಧಿಕಾರಿ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತದೆ. ಈ ನಿರ್ಧಾರ ದಲಿತ ಮತಬ್ಯಾಂಕ್ ಮತ್ತು 2027ರ ಯುಪಿ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು.

ಪಕ್ಷಕ್ಕಿಂತ ಸಂಬಂಧಕ್ಕೇ ಹೆಚ್ಚು ಆದ್ಯತೆ ಕೊಡ್ತಾರೆ, ಬಿಎಸ್‌ಪಿಯಿಂದ ಸೋದರಳಿಯ ಆಕಾಶ್ ಆನಂದ್​ಗೆ ಗೇಟ್‌ಪಾಸ್ ಕೊಟ್ಟ ಮಾಯಾವತಿ
ಮಾಯಾವತಿ
Image Credit source: Indian Express

Updated on: Sep 10, 2026 | 11:29 AM

ಲಕ್ನೋ, ಸೆಪ್ಟೆಂಬರ್ 10: ಸೋದರಳಿಯ ಆಕಾಶ್ ಆನಂದ್ ಅವರನ್ನು ಬಹುಜನ ಸಮಾಜ ಪಕ್ಷದಿಂದ  ಕಿತ್ತೆಸೆಯುವ ಮೂಲಕ ಮಾಯಾವತಿ ಬಿಗ್ ಶಾಕ್ ನೀಡಿದ್ದಾರೆ. “ಆಕಾಶ್ ಪಕ್ಷದ ಚಳವಳಿಗಿಂತ ಕುಟುಂಬದ ಸಂಬಂಧಗಳಿಗೇ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಈ ಹಿಂದೆ ನೀಡಿದ್ದ ಎಲ್ಲಾ ಜವಾಬ್ದಾರಿಗಳಿಂದ ಅವರನ್ನು ಬಿಡುಗಡೆ ಮಾಡಿ ಆದೇಶಿಸಿದ್ದಾರೆ.

ಬಹುಜನ ಸಮಾಜ ಪಕ್ಷದಲ್ಲಿ ಕುಟುಂಬ ಮತ್ತು ಅಧಿಕಾರ ರಾಜಕಾರಣದ ಬಿಕ್ಕಟ್ಟು ಮತ್ತೊಮ್ಮೆ ತಾರಕಕ್ಕೇರಿದೆ. ಸೋದರಳಿಯ ಆಕಾಶ್ ಆನಂದ್ ಅವರ ಮಾವ ಅಶೋಕ್ ಸಿದ್ಧಾರ್ಥ್ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಮಾಯಾವತಿ ಮತ್ತೊಂದು ಅನಿರೀಕ್ಷಿತ ನಿರ್ಧಾರ ಕೈಗೊಂಡಿದ್ದಾರೆ.
ಆಕಾಶ್ ಆನಂದ್ ಪಕ್ಷ ಮತ್ತು ಚಳವಳಿಗಿಂತ ಹೆಚ್ಚಾಗಿ ತಮ್ಮ ಕುಟುಂಬ ಮತ್ತು ಸಂಬಂಧಗಳ ಬಾಂಧವ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ” ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಮಾಯಾವತಿ, ಅವರನ್ನು ಪಕ್ಷದ ಎಲ್ಲಾ ಹೊಣೆಗಾರಿಕೆಗಳಿಂದ ಮಾತ್ರವಲ್ಲದೆ ಬಿಎಸ್‌ಪಿಯಿಂದಲೂ ಸಂಪೂರ್ಣವಾಗಿ ಮುಕ್ತಗೊಳಿಸಿ ಆದೇಶಿಸಿದ್ದಾರೆ.

ಪಕ್ಷ ಮತ್ತು ಚಳವಳಿಯ ಹಿತಾಸಕ್ತಿ ಕಡೆಗಣನೆ ಆರೋಪ: ಆಕಾಶ್ ಆನಂದ್ ತಮ್ಮ ರಾಜಕೀಯ ಭವಿಷ್ಯ ಮತ್ತು ಬಿಎಸ್‌ಪಿ ಚಳವಳಿಯ ಹಿತಾಸಕ್ತಿಗಿಂತ ಹೆಚ್ಚಾಗಿ ಸಂಬಂಧಿಕರ ಬಾಂಧವ್ಯಕ್ಕೆ ಕಟ್ಟುಬಿದ್ದಿದ್ದಾರೆ ಎಂದು ಮಾಯಾವತಿ ‘ಎಕ್ಸ್’ ಖಾತೆಯಲ್ಲಿ ಬರೆದಿದ್ದಾರೆ. ಬಿಎಸ್‌ಪಿ ಮುಖ್ಯಸ್ಥೆಯ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಮರುಪೋಸ್ಟ್ ಮಾಡದೆ ನಿರಾಸಕ್ತಿ ತೋರಿರುವ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಸಹಾರನ್‌ಪುರ ಮಸೀದಿ ಧ್ವಂಸ ವಿವಾದ; ಯೋಗಿ ಸರ್ಕಾರದ ವಿರುದ್ಧ ಅಸಾದುದ್ದೀನ್ ಒವೈಸಿ ವಾಗ್ದಾಳಿ

ಅಶೋಕ್ ಸಿದ್ಧಾರ್ಥ್ ನಿವೃತ್ತಿ ಲೆಕ್ಕಕ್ಕಿಲ್ಲ: ಆಕಾಶ್ ಅವರ ಮಾವ, ಮಾಜಿ ರಾಜ್ಯಸಭಾ ಸಂಸದ ಅಶೋಕ್ ಸಿದ್ಧಾರ್ಥ್ ರಾಜಕೀಯ ಮತ್ತು ಸಾಮಾಜಿಕ ಜೀವನದಿಂದ ನಿವೃತ್ತಿ ಘೋಷಿಸಿದರೂ ಮಾಯಾವತಿಯವರ ಕಠಿಣ ನಿಲುವು ಬದಲಾಗಿಲ್ಲ. ತಾವು ಮಾಯಾವತಿಗಾಗಿ ಪ್ರಾಣ ನೀಡಲೂ ಸಿದ್ಧವೆಂದು ಸಿದ್ಧಾರ್ಥ್ ಭಾವುಕರಾಗಿ ಹೇಳಿಕೆ ನೀಡಿದ್ದರೂ ಪಕ್ಷದ ಶಿಸ್ತಿಗೆ ಮಾಯಾವತಿ ಮೊದಲ ಆದ್ಯತೆ ನೀಡಿದ್ದಾರೆ.

ಪೋಸ್ಟ್​

ಉತ್ತರಾಧಿಕಾರಿ ಪಟ್ಟಕ್ಕಾಗಿ ಮತ್ತೆ ಬಿಕ್ಕಟ್ಟು: 2023ರ ಡಿಸೆಂಬರ್‌ನಲ್ಲಿ ಆಕಾಶ್ ಆನಂದ್ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಮಾಯಾವತಿ ಘೋಷಿಸಿದ್ದರು. ಆದರೆ 2024ರ ಲೋಕಸಭಾ ಚುನಾವಣೆ ಹಾಗೂ ನಂತರದ ದಿನಗಳಲ್ಲಿ ಹಲವು ಬಾರಿ ಅವರನ್ನು ಹುದ್ದೆಯಿಂದ ಕೆಳಗಿಳಿಸಿ, ಮರಳಿ ಸೇರಿಸಿಕೊಳ್ಳಲಾಗಿತ್ತು. ಇತ್ತೀಚೆಗಷ್ಟೇ ಅವರ ಕಿರಿಯ ಸಹೋದರ ಇಶಾನ್ ಆನಂದ್ ಅವರನ್ನು ಮುಂಚೂಣಿಗೆ ತಂದಿರುವುದು ಪಕ್ಷದಲ್ಲಿನ ಹೊಸ ಪವರ್ ಪಾಲಿಟಿಕ್ಸ್ ಅನ್ನು ಸ್ಪಷ್ಟಪಡಿಸುತ್ತದೆ.

2027ರ ಯುಪಿ ಚುನಾವಣಾ ಸಿದ್ಧತೆ: ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಪಂಜಾಬ್ ವಿಧಾನಸಭಾ ಚುನಾವಣೆಗಳನ್ನು ಬಿಎಸ್‌ಪಿ ಏಕಾಂಗಿಯಾಗಿ ಎದುರಿಸಲಿದೆ ಎಂದು ಘೋಷಿಸಿರುವ ಮಾಯಾವತಿ, ಸರ್ವಜನ್ ಹಿತಾಯ, ಸರ್ವಜನ್ ಸುಖಾಯ ತತ್ವದಡಿ ಪೂರ್ಣ ಬಹುಮತದ ಸರ್ಕಾರ ರಚಿಸುವುದೇ ನಮ್ಮ ಏಕೈಕ ಗುರಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ದಲಿತ ಮತಬ್ಯಾಂಕ್ ಮೇಲೆ ಪರಿಣಾಮ: ಚಂದ್ರಶೇಖರ್ ಆಜಾದ್ ಅವರಂತಹ ಯುವ ನಾಯಕರು ದಲಿತ ಮತದಾರರನ್ನು ಆಕರ್ಷಿಸುತ್ತಿರುವಾಗ, ಯುವ ಮುಖವಾಗಿದ್ದ ಆಕಾಶ್ ಆನಂದ್ ಅವರನ್ನು ಪದೇಪದೇ ಹೊರಗಿಡುತ್ತಿರುವುದು ಬಿಎಸ್‌ಪಿಯ ಸಾಂಪ್ರದಾಯಿಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:06 am, Thu, 10 September 26

Loading...
Unable to load recommendations.
Follow Us