ದೆಹಲಿ: ಜಮ್ಮು ಕಾಶ್ಮೀರದ ಲಡಾಖ್ ಪ್ರಾಂತ್ಯದಲ್ಲಿ ಸರ್ವಋತು ಜೊಜಿಲಾ ಸುರಂಗ ಮಾರ್ಗ ನಿರ್ಮಿಸುತ್ತಿರುವ ಮೆಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಕಂಪನಿಯು ಸೋಮವಾರ ಮಹತ್ವದ ಹಂತವನ್ನು ಪೂರ್ಣಗೊಳಿಸಿದೆ. ಒಂದನೇ ಸುರಂಗದ 2ನೇ ಟ್ಯೂಬ್ನಲ್ಲಿ ಇಂದು (ನ.22) ಸೂರ್ಯನ ಬೆಳಕು ಪ್ರವೇಶಿಸಿತು. ಕಾಶ್ಮೀರ ಕಣಿವೆಯನ್ನು ಲಡಾಖ್ನೊಂದಿಗೆ ಸಂಪರ್ಕಿಸುವ ಸರ್ವಋತು ರಸ್ತೆ ನಿರ್ಮಾಣ ಯೋಜನೆಯನ್ನು (ಜೊಜಿಲಾ ಯೋಜನೆ) ಅನುಷ್ಠಾನಗೊಳಿಸುವ ಹೊಣೆಯನ್ನು ಎಂಇಐಎಲ್ಗೆ ಅಕ್ಟೋಬರ್ 1, 2020ರಂದು ವಹಿಸಿಕೊಡಲಾಯಿತು. ಇಪಿಸಿ ಮಾದರಿಯಲ್ಲಿ ಸಂಪೂರ್ಣ ಸರ್ಕಾರದ ಅನುದಾನದಿಂದಲೇ ಈ ಕಾಮಗಾರಿ ನಡೆಯುತ್ತಿದೆ. ಒಟ್ಟು 32 ಕಿಮೀ ಅಂತರದ ಈ ಯೋಜನೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.
18 ಕಿಮೀ ಅಂತರದ ಈ ಯೋಜನೆಯ ಮೊದಲ ಹಂತವು ಸೊನಾಮಾರ್ಗ್ ಮತ್ತು ತಾಲ್ತಲ್ಗಳನ್ನು ಬೆಸೆಯುತ್ತದೆ. ಹಲವು ಪ್ರಮುಖ ಸೇತುವೆಗಳು ಮತ್ತು ಜೋಡಿ ಸುರಂಗಗಳು ಈ ಹಂತದಲ್ಲಿವೆ. ಟಿ1 ಸುರಂಗದಲ್ಲಿ ಎರಡು ರಂಧ್ರಗಳಿವೆ. ಟ್ಯೂಬ್ 1 ಪಿ2 ಪಿ4ನ ಉದ್ದ 472 ಮೀಟರ್. ಟ್ಯೂಬ್ 1 ಪಿ1 ಪಿ3 ಉದ್ದ 448 ಮೀಟರ್. ಟ್ಯೂಬ್ 1 ಸುರಂಗದಲ್ಲಿ ಪವಿತ್ರ ದೀಪಾವಳಿ ದಿನದಂದು, ಅಂದರೆ ನವೆಂಬರ್ 4ರಂದು ಸೂರ್ಯನ ಬೆಳಕು ಪ್ರವೇಶಿಸಿತ್ತು. 2ನೇ ಟ್ಯೂಬ್ ನ.22ರಂದು ಸೂರ್ಯನ ಬೆಳಕಿಗೆ ಮುಕ್ತವಾಯಿತು. ಸಂಪರ್ಕ ರಸ್ತೆಗಳನ್ನು ನಿರ್ಮಿಸಿದ ನಂತರ, ಅಂದರೆ ಮೇ 2021ರಿಂದ ಎಂಇಐಎಲ್ ಈ ಯೋಜನೆಯ ಕೆಲಸ ಆರಂಭಿಸಿತ್ತು. ಹಿಮಾಲಯದಲ್ಲಿ ಸುರಂಗ ಕೊರೆಯುವುದು ಸದಾ ಸವಾಲಿನ ಸಂಗತಿಯೇ ಆಗಿರುತ್ತದೆ. ಆದರೆ ಎಂಇಐಎಲ್ ಉತ್ಕೃಷ್ಟ ಮಟ್ಟದ ಸುರಕ್ಷೆ, ಗುಣಮಟ್ಟ ಮತ್ತು ವೇಗದಲ್ಲಿ ಈ ಕಾರ್ಯವನ್ನು ಸಾಧಿಸಿತು.
ತಲಾ ಎರಡು ಕಿಮೀ ಅಂತರದ ಅವಳಿ ಟ್ಯೂಬ್ಗಳ ಕೆಲಸವನ್ನು ವೇಗವಾಗಿ ನಿರ್ವಹಿಸಲಾಗುತ್ತಿದೆ. ಈ ಟ್ಯೂಬ್ಗಳಿಗೆ ಏಪ್ರಿಲ್ 2022ರಲ್ಲಿ ಸೂರ್ಯನ ಬೆಳಕು ಪ್ರವೇಶಿಸಬಹುದು ಎಂದು ನಿರೀಕ್ಷಿಸಲಾಗಿದೆ. 13.3 ಕಿಮೀ ಉದ್ದದ ಜೊಜಿಲಾ ಮುಖ್ಯ ಸುರಂಗದ ಕಾಮಗಾರಿ ಭರದಿಂದ ಸಾಗಿದೆ. ಲಡಾಖ್ ಕಡೆಯಿಂದ 600 ಮೀಟರ್ಗಳನ್ನು ಮತ್ತು ಕಾಶ್ಮೀರ ಕಡೆಯಿಂದ 300 ಮೀಟರ್ಗಳಷ್ಟು ಪ್ರಗತಿ ಸಾಧಿಸಲಾಗಿದೆ.
14.15 ಕಿಮೀ ಅಂತರದ ಈ ಸುರಂಗವು ಶ್ರೀನಗರ-ಕಾರ್ಗಿಲ್-ಲೇಹ್ ಸಂಪರ್ಕ ಬೆಸೆಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಕಳೆದ ವರ್ಷ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಯೋಜನೆಗೆ ಚಾಲನೆ ನೀಡಿದ್ದರು. ಏಷ್ಯಾದ ಅತ್ಯಂತ ಉದ್ದದ ಈ ಸುರಂಗವು ಶ್ರೀನಗರ ಕಣಿವೆ ಮತ್ತು ಲೇಹ್ ನಡುವೆ ಸರ್ವಋತು ಸಂಪರ್ಕ ಕಾಪಾಡಲು ನೆರವಾಗುತ್ತದೆ. ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಒಂದು ಎನಿಸಿಕೊಂಡಿರುವ ಈ ರಸ್ತೆಯಲ್ಲಿ ಸಂಚರಿಸುವುದು ಸವಾಲಿನ ವಿಷಯವಾಗಿತ್ತು. ಚೀನಾ ಮತ್ತು ಪಾಕಿಸ್ತಾನದ ಗಡಿಯ ಸನಿಹದಲ್ಲಿರುವ ಈ ಸುರಂಗ ಮಾರ್ಗವು ದೇಶದ ಭದ್ರತೆ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ.
ರಾಷ್ಟ್ರೀಯ ಹೆದ್ದಾರಿ 1ರ ಮೂಲಕ ಶ್ರೀನಗರ ಕಣಿವೆ ಮತ್ತು ಲೇಹ್ (ಲಡಾಖ್ ಪ್ರಸ್ತಭೂಮಿ) ನಡುವೆ ಸರ್ವಋತು ಸಂಪರ್ಕ ಒದಗಿಸುವ ಈ ರಸ್ತೆಯು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಏಕತೆ ಕಾಪಾಡುವ ದೃಷ್ಟಿಯಿಂದಲೂ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಜೋಜಿಲಾ ಸುರಂಗವು ಸೇವೆಗೆ ಸಮರ್ಪಣೆಗೊಂಡ ನಂತರ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ 1ರ ಸಂಚಾರವು ಭೂ ಕುಸಿತದ ಆತಂಕದಿಂದ ಮುಕ್ತವಾಗುತ್ತದೆ. ಸಂಚಾರ ಸುರಕ್ಷೆ ಸುಧಾರಿಸುವ ಜೊತೆಗೆ ಸಂಚಾರದ ಅವಧಿಯನ್ನು 3.15 ತಾಸು ಕಡಿಮೆ ಮಾಡುತ್ತದೆ. ₹6800 ಕೋಟಿ ವೆಚ್ಚದ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮೇ 2018ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸುವ ಆತ್ಮನಿರ್ಭರ್ ಭಾರತ ಪರಿಕಲ್ಪನೆಗೂ ಈ ಸುರಂಗ ಪೂರಕವಾಗಿದೆ. ಸುರಂಗ ನಿರ್ಮಾಣದ ನಂತರ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಹೊಸ ಬಲ ಸಿಗಲಿದೆ. ಗಡಿ ಪ್ರದೇಶದಲ್ಲಿರುವ ಈ ಸುರಂಗ ಮಾರ್ಗವು ತುರ್ತು ಪರಿಸ್ಥಿತಿಯಲ್ಲಿ ಸೇನಾಪಡೆ, ಯುದ್ಧೋಪಕರಣಗಳು ಮತ್ತು ಯುದ್ಧ ಟ್ಯಾಂಕ್ಗಳನ್ನು ಗಡಿಯಲ್ಲಿ ನಿಯೋಜಿಸಲು ಅನುಕೂಲ ಕಲ್ಪಿಸಲಿದೆ.
ಜೋಜಿಲಾ ಯೋಜನೆಯ ಪ್ರಾಮುಖ್ಯತೆ
– ಶ್ರೀನಗರ, ದ್ರಾಸ್, ಕಾರ್ಗಿಲ್ ಮತ್ತು ಲೇಹ್ ಪ್ರದೇಶದಳಿಗೆ ಝೊಜಿಲಾ ಸುರಂಗವು ಸರ್ವಋತು ಸಂಪರ್ಕ ಕಲ್ಪಿಸುತ್ತದೆ.
– ಚಳಿಗಾಲದಲ್ಲಿ ಭಾರೀ ಹಿಮಪಾತದ ಕಾರಣದಿಂದ ದೇಶದ ಇತರ ಪ್ರದೇಶಗಳ ಸಂಪರ್ಕ ಕಡಿದುಕೊಳ್ಳುವ ಈ ಪ್ರದೇಶಗಳಲ್ಲಿ ನಿರಂತರ ರಸ್ತೆ ಸಂಪರ್ಕದ ಸಾಧ್ಯತೆಯನ್ನು ಮುಕ್ತವಾಗಿರಿಸುತ್ತದೆ.
– ಆರಂಭಿಕ ಕಾರ್ಯಗಳು ಮುಗಿದ ನಂತರ ಈ ರಸ್ತೆಯ ಮಹತ್ವದ ಹಂತಕ್ಕೆ ಅಕ್ಟೋಬರ್ 2020ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದರು.
– ಸಮುದ್ರಮಟ್ಟದಿಂದ 11,578 ಅಡಿ ಎತ್ತರದಲ್ಲಿ ಈ ರಸ್ತೆಯನ್ನು ನಿರ್ಮಿಸುವುದು ದೊಡ್ಡ ಸವಾಲಾಗಿತ್ತು. ಮೇಘಾ ಎಂಜಿನಿಯರಿಂಗ್ ಸಂಸ್ಥೆಯು ಈ ರಸ್ತೆ ನಿರ್ಮಾಣದ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
– ಕಾರ್ಗಿಲ್ ಮತ್ತು ಲಡಾಖ್ ಪ್ರದೇಶದ ಜನರು ಕಳೆದ 30 ವರ್ಷಗಳಿಂದಲೂ ಈ ರಸ್ತೆ ನಿರ್ಮಾಣವಾಗಬೇಕು ಎಂದು ಬೇಡಿಕೆಯಿಟ್ಟಿದ್ದರು.
– ಗಿರಿ ಶಿಖರಗಳ ಮಾರ್ಗದಲ್ಲಿ ಸರಕು ಸಾಗಣೆಗೆ ಕೆಟ್ಟ ಹವಾಮಾನವು ದೊಡ್ಡ ಸವಾಲಾಗಿತ್ತು. ಹೀಗಾಗಿ ಸುರಂಗ ಮಾರ್ಗ ನಿರ್ಮಾಣವಾಗಬೇಕು ಎಂದು ಜನರು ಕೋರುತ್ತಿದ್ದರು.
– 2013ರ ಯುಪಿಎ ಆಡಳಿತದಲ್ಲಿಯೇ ಈ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ನಾಲ್ಕು ಬಾರಿ ಟೆಂಡರ್ ಕರೆಯಲಾಗಿತ್ತು. ಕೊನೆಗೆ ಮೋದಿ ಅಧಿಕಾರ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಂಡಿತು.
– ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮೇಘಾ ಎಂಜಿನಿಯರಿಂಗ್ ಸಂಸ್ಥೆಯು ಸಕಾಲದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಖ್ಯಾತಿ ಪಡೆದಿದೆ. ಕೇವಲ ನಾಲ್ಕು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿದ ಹೊಸ ದಾಖಲೆ ಬರೆಯಲಿದೆ ಎಂದು ಹೇಳಿದ್ದರು.
– ಸುರಂಗಕ್ಕಾಗಿ ಆರಂಭದಲ್ಲಿ ₹ 10,643 ಕೋಟಿ ವೆಚ್ಚವನ್ನು ಅಂದಾಜು ಮಾಡಲಾಗಿತ್ತು. ರಸ್ತೆ ಮತ್ತು ಸುರಂಗವನ್ನು ಪ್ರತ್ಯೇಕವಾಗಿ ನಿರ್ಮಿಸುವ ಮೂಲಕ ₹ 3,835 ಕೋಟಿ ಉಳಿತಾಯವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.
– ಈ ಅತ್ಯಾಧುನಿಕ ಸುರಂಗದಲ್ಲಿ ಸಿಸಿಟಿವಿ ಕ್ಯಾಮೆರಾ, ಅತಿಭಾರದ ವಾಹನಗಳನ್ನು ಗುರುತಿಸುವ ವ್ಯವಸ್ಥೆ, ಸ್ವಯಂಚಾಲಿತ ಬೆಂಕಿ ಗುರುತಿಸುವ ವ್ಯವಸ್ಥೆ, ಬೆಂಕಿಯ ಕರೆಗಂಟೆ ಸೇರಿದಂತೆ ಹಲವು ಸೌಕರ್ಯಗಳು ಈ ಸುರಂಗದಲ್ಲಿದೆ. ಈ ಸುರಂಗದಲ್ಲಿ ಸಂಚಾರಕ್ಕೆ ಗಂಟೆಗೆ 80 ಕಿಮೀ ವೇಗಮಿತಿ ವಿಧಿಸಲಾಗಿದೆ.
ಇದನ್ನೂ ಓದಿ: ಮೇಘಾ ಕಂಪನಿಯ ಮೆಗಾ ಸಾಧನೆ! ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೆ ಸಾಕ್ಷಿ ಲಡಾಖ್ನ ಜೋಜಿಲಾ ಸುರಂಗ ಮಾರ್ಗ
ಇದನ್ನೂ ಓದಿ: Zojila Tunnel: ಏಷ್ಯಾದ ಅತಿ ಉದ್ದದ ಜೋಜಿಲಾ ಸುರಂಗ ಮಾರ್ಗದ ಕಾಮಗಾರಿ ವೀಕ್ಷಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ