ಶ್ರೀನಗರ: ಕೇಂದ್ರದ ಮಹತ್ವಾಕಾಂಕ್ಷಿ ಜೋಜಿಲ್ಲಾ ಸುರಂಗ (Zojila Tunnel) ಮಾರ್ಗ ಕಾಮಗಾರಿಯಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ತ್ವರಿತ ಅತ್ಯಾಧುನಿಕ ಕಾಮಗಾರಿಯಿಂದ ಕಡಿಮೆ ಅವಧಿಯಲ್ಲಿ ಏಳು ಕಿ.ಮೀ. ಸುರಂಗ ಕಾಮಗಾರಿ ಪೂರ್ಣ ಮಾಡಲಾಗಿದೆ. ಎಂಇಐಎಲ್ (MEIL- Megha Engineering and Infrastructure Limited) ಅತಿ ಕಡಿಮೆ ಅವಧಿಯಲ್ಲಿ ಅರ್ಧ ಸುರಂಗ ಕಾಮಗಾರಿ ಪೂರೈಸಿದೆ. ವೇಗ ಪಡೆದುಕೊಂಡ ಬೃಹತ್ ಮತ್ತು ಐತಿಹಾಸಿಕ ಜೋಜಿಲ್ಲಾ ಸುರಂಗ ಮಾರ್ಗ ಕಾಮಗಾರಿಯ ಏಳು ಕಿ.ಮೀ. ಸುರಂಗ ನಿರ್ಮಾಣ ಪೂರ್ಣವಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಕಾರಣದಿಂದ ಕಾಮಗಾರಿ ವೇಗ ಹೆಚ್ಚಿದೆ. ಈ ಮೂಲಕ, ಸುರಂಗ ಮಾರ್ಗದಿಂದ ಸೋನಾಮಾರ್ಗ್‌ನಿಂದ ಮೀನಾ ಮಾರ್ಗ್ ನಡುವಿನ 4 ಗಂಟೆ ಪ್ರಯಾಣ 40 ನಿಮಿಷಗಳಿಗೆ ಇಳಿಕೆ ಆಗಲಿದೆ.
ಕಾಶ್ಮೀರ ಕಣಿವೆಯ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ ಮಹತ್ಷಾಕಾಂಕ್ಷಿ ಸುರಂಗ ಮಾರ್ಗ ಜೋಜಿಲ್ಲಾ ಕಾಮಗಾರಿ ಕೈಗೊಂಡಿರುವ ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಕಡಿಮೆ ಅವಧಿಯಲ್ಲಿ ಏಳು ಕಿ.ಮೀ. ಸುರಂಗ ಮಾರ್ಗ ನಿರ್ಮಿಸುವ ಮೂಲಕ ಹೊಸ ದಾಖಲೆ ಬರೆದಿದೆ. ವಿಪರೀತ ಹವಾಮಾನ ಪರಿಸ್ಥಿತಿ ಪರಿಣಾಮ ಶ್ರೀನಗರ ಮತ್ತು ಲಡಾಕ್ ನಡುವಿನ ಸಂಪರ್ಕ ವರ್ಷದಲ್ಲಿ ಆರು ತಿಂಗಳು ಮಾತ್ರ ಸಾಧ್ಯ ಆಗಿತ್ತು. ಇದರಿಂದ ಲಡಾಕ್‌ಗೆ ಅಗತ್ಯ ಪದಾರ್ಥಗಳ ಪೂರೈಕೆ ಮತ್ತು ಸೇನಾ ವಾಹನಗಳ ಸಂಚಾರ ದುರ್ಬರವಾಗಿತ್ತು. ಈ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ ಜೋಜಿಲ್ಲಾ ಪಾಸ್ ಸುರಂಗ ಮಾರ್ಗದ ಕಾಮಗಾರಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಮೂಲಕ ವೇಗದಿಂದ ಸಾಗಿದೆ.
ಹಿಮಪಾತ ಮತ್ತು ಮೈನಸ್ ಡಿಗ್ರಿ ಸೆಲ್ಷಿಯಲ್ಸ್‌ನಂತಹ ಸಂದರ್ಭಗಳಲ್ಲೂ ಕಾಮಗಾರಿ ಸಾಗಿದ್ದು, ಇದರ ಪರಿಣಾಮ ಅತಿ ಕಡಿಮೆ ಅವಧಿಯಲ್ಲಿ ಏಳು ಕಿ.ಮೀ. ಸುರಂಗ ಮಾರ್ಗ ನಿರ್ಮಿಸುವ ಮೂಲಕ ಕಾಮಗಾರಿ ಗುತ್ತಿಗೆ ಸಂಸ್ಥೆ ಎಂ.ಇ.ಐ.ಎಲ್ ಹೊಸ ದಾಖಲೆ ನಿರ್ಮಿಸಿದೆ. ಏಷ್ಯಾದ ಅತಿ ದೊಡ್ಡ ದ್ವಿಮಾರ್ಗ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೋಜಿಲ್ಲಾ ಸುರಂಗ ಮಾರ್ಗ ನಿರ್ಮಾಣದಿಂದಾಗಿ ವರ್ಷದ ಎಲ್ಲಾ ದಿನಗಳೂ ಶ್ರೀನಗರ ಮತ್ತು ಲಡಾಕ್‌ನ ಲೇಹ್ ನಡುವೆ ಸಂಚಾರ ಸಾಧ್ಯವಾಗಲಿದೆ ಮತ್ತು ಪ್ರಸ್ತುತ ಸೋನ್‌ಮಾರ್ಗ್‌ನಿಂದ ಮೀನಾಮಾರ್ಗ್‌ವರೆಗಿನ ನಾಲ್ಕು ಗಂಟೆಗಳ ಸಂಚಾರ 40 ನಿಮಿಷಗಳಿಗೆ ಇಳಿಕೆ ಆಗಲಿದೆ.
ಜೋಜಿಲ್ಲಾ ಕಾಮಗಾರಿ ಕೈಗೊಂಡಿರುವ ಎಂಇಐಎಲ್ ಸುರಂಗ ನಿರ್ಮಾಣಕ್ಕೆ ಆಸ್ಟ್ರೀಯ ದೇಶದ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಭೂಮಿಯ ಮೇಲಿನ ಅತಿ ಎತ್ತರದ ಪ್ರದೇಶದಲ್ಲಿ ಮೈನಸ್ 40 ಡಿಗ್ರಿ ಸೆಲ್ಷಿಯಲ್ಸ್‌ನ ಶೀತ ವಾತಾವರಣದಲ್ಲೂ ಕಾಮಗಾರಿ ನಡೆಸಲಾಗಿದೆ. ಸುರಂಗ ಮಾರ್ಗದ ಒಟ್ಟಾರೆ ವ್ಯಾಪ್ತಿಯ ಪೈಕಿ ಏಳು ಕಿ.ಮೀ. ಅಂದರೆ ಅರ್ಧದಷ್ಟು ಪೂರ್ಣಗೊಂಡಿದ್ದು, ಕಾಮಗಾರಿ ಅಡಿ ನಾಲ್ಕು ಸೇತುವೆಗಳ ನಿರ್ಮಾಣವಾಗಬೇಕಿದ್ದು, ಒಟ್ಟಾರೆ 815 ಕಿ.ಮೀ. ಸೇತುವೆ ನಿರ್ಮಾಣಕ್ಕಾಗಿ ಸಿಮೆಂಟ್ ರಚನೆಗಳ ಕಾರ್ಯ ಭರದಿಂದ ಸಾಗಿದೆ.
ಸುರಂಗ ಮಾರ್ಗ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಯೋಜನಾ ಮುಖ್ಯಸ್ಥ ಹರ್‌ಪಾಲ್‌ಸಿಂಗ್, “ಎಂಇಐಎಲ್ ದೇಶ ಅಸಾಧ್ಯ ಎಂದುಕೊಂಡಿದ್ದನ್ನು ಮಾಡಿ ತೋರಿಸಿದೆ. ಶೀತ ವಾತಾವರಣದ ಪರಿಣಾಮ ಸೇನೆ, ಪೋಲಿಸರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಸ್ಥಳೀಯರು ಪ್ರದೇಶ ಬಿಟ್ಟು ಬೇರೆಡೆಗೆ ತೆರಳಿದ ಸಂದರ್ಭದಲ್ಲೂ ಇಲ್ಲಿ ಕಾಮಗಾರಿಗಳನ್ನು ನಿಲ್ಲಿಸದೆ ನಡೆಸಲಾಗಿದೆ” ಎಂದು ತಿಳಿಸಿದ್ದಾರೆ. “ಎಂಇಐಎಲ್ ಕಾಮಗಾರಿ ವಹಿಸಿಕೊಳ್ಳುವ ಮುನ್ನ ಎರಡು ವರ್ಷಗಳಲ್ಲಿ ವರ್ಷಕ್ಕೆ 15 ಮೀಟರ್ ಸುರಂಗ ಮಾರ್ಗ ಪೂರ್ಣಗೊಂಡಿತ್ತು. ಎಂಇಐಎಲ್ ಕಾಮಗಾರಿ ವಹಿಸಿಕೊಂಡನಂತರ ಒಂದೂವರೆ ವರ್ಷದಲ್ಲಿ ವಿಪರೀತ ವಾತಾವರಣದ ಸಂದರ್ಭದಲ್ಲೂ 7 ಕಿಮೀ ಸುರಂಗ ಮಾರ್ಗ ಪೂರ್ಣಗೊಂಡಿದೆ. ಕಾಮಗಾರಿ ಪ್ರದೇಶಕ್ಕೆ ದೆಹಲಿ ಮತ್ತು ಶ್ರೀನಗರ ಐಐಟಿ ತಜ್ಞರು ಭೇಟಿ ನೀಡಿ ಅಂತರಾಷ್ಟ್ರೀಯ ಗುಣಮಟ್ಟದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ” ಎಂದು ಹರ್‌ಪಾಲ್ ತಿಳಿಸಿದ್ದಾರೆ.
ಒಟ್ಟಾರೆ ಕಾಶ್ಮೀರ ಕಣಿವೆ ಸೇರಿದಂತೆ ಸೇನಾ ಬಳಕೆಗೆಂದು ಸಿದ್ಧಗೊಳ್ಳುತ್ತಿರುವ ಜೋಜಿಲ್ಲಾ ದ್ವಿಮಾರ್ಗ ಸುರಂಗ ಮಾರ್ಗ ಈ ವ್ಯಾಪ್ತಿಯ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಲಿದ್ದು, ಕೇಂದ್ರ ಸರ್ಕಾರದ ನಿರೀಕ್ಷೆಯಂತೆ 2027ಕ್ಕೆ ಪೂರ್ಣಗೊಳ್ಳಬೇಕಿರುವ ಕಾಮಗಾರಿ 2024 ರ ಒಳಗೆ ಪೂರ್ಣಗೊಳ್ಳುವ ಭರವಸೆ ಮೂಡಿಸಿದೆ.
ಇದನ್ನೂ ಓದಿ: MEILನಿಂದ ಭಾರತಕ್ಕೆ 5 ಸಾವಿರ ಕೋಟಿ ರೂ. ಉಳಿತಾಯ; ಮೇಘಾ ಇಂಜಿನಿಯರಿಂಗ್ ಸಂಸ್ಥೆಯನ್ನು ಶ್ಲಾಘಿಸಿದ ನಿತಿನ್ ಗಡ್ಕರಿ
ಇದನ್ನೂ ಓದಿ: MEIL: ವಿಶ್ವದ ಅತಿದೊಡ್ಡ ತೈಲಬಾವಿ ರಿಗ್ ನಿರ್ಮಾಣ ಪ್ರಕ್ರಿಯೆಗೆ ಹೊಸ ವೇಗ, ಶೀಘ್ರ ONGCಗೆ ಹಸ್ತಾಂತರ
Published On - 11:23 am, Tue, 29 March 22