MEIL: ವಿಶ್ವದ ಅತಿದೊಡ್ಡ ತೈಲಬಾವಿ ರಿಗ್ ನಿರ್ಮಾಣ ಪ್ರಕ್ರಿಯೆಗೆ ಹೊಸ ವೇಗ, ಶೀಘ್ರ ONGCಗೆ ಹಸ್ತಾಂತರ
ರಾಜಮಂಡ್ರಿ ಜಿಲ್ಲೆಯ ಭೀಮವರಂನಲ್ಲಿರುವ ಈ ರಿಗ್ಗಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದೆ. ಈ ಅತ್ಯಾಧುನಿಕ 2000 ಹೆಚ್ಪಿ ಸಾಮರ್ಥ್ಯದ ರಿಗ್ನ ಸಾಮರ್ಥ್ಯ, ಸಾಂಪ್ರದಾಯಿಕ ವಿನ್ಯಾಸದ 3000 ಎಚ್ಪಿ ರಿಗ್ಗೆ ಸಮನಾಗಿದೆ
ವಿಶಾಖಪಟ್ಟಣ: ಆಂಧ್ರ ಪ್ರದೇಶದ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ಪೆಟ್ರೋಲಿಯಂ ಉತ್ಪನ್ನಗಳನ್ನು ತೆಗೆದು ಸಂಸ್ಕರಿಸಲು ಅನುವು ಮಾಡಿಕೊಡುವ ಬೃಹತ್ ರಿಗ್ಗಳನ್ನು ಮೆಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ಟಕ್ಚರ್ ಲಿಮಿಟೆಡ್ (Megha Engineering and Infrastructures Limited – MEIL) ನಿರ್ಮಿಸುತ್ತಿದೆ. 2000 ಹಾರ್ಸ್ಪವರ್ (HP) ಸಾಮರ್ಥ್ಯದ ಡ್ರಿಲಿಂಗ್ ರಿಗ್ ನಿರ್ಮಾಣ ಕಾಮಗಾರಿಗೆ ಎಂಇಐಎಲ್ ಹೊಸ ವೇಗ ನೀಡಿದೆ. ರಾಜಮಂಡ್ರಿ ಜಿಲ್ಲೆಯ ಭೀಮವರಂನಲ್ಲಿರುವ ಈ ರಿಗ್ಗಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದೆ. ಈ ಅತ್ಯಾಧುನಿಕ 2000 ಹೆಚ್ಪಿ ಸಾಮರ್ಥ್ಯದ ರಿಗ್ನ ಸಾಮರ್ಥ್ಯ, ಸಾಂಪ್ರದಾಯಿಕ ವಿನ್ಯಾಸದ 3000 ಎಚ್ಪಿ ರಿಗ್ಗೆ ಸಮನಾಗಿದೆ. ದೇಶೀಯ ನಿರ್ಮಾಣದ ಈ ರಿಗ್ನ ಕಾರ್ಯಾಚರಣೆಯೂ ಯಶಸ್ವಿಯಾಗಿದೆ. ಭೂಮಿಯ 6 ಕಿಮೀ (6000 ಮೀಟರ್) ಆಳದಲ್ಲಿಯೂ ಈ ರಿಗ್ ಕಾರ್ಯನಿರ್ವಹಿಸಬಲ್ಲದು.
ಈವರೆಗೆ ಎಂಇಐಎಲ್ ಭೂಮಿಯನ್ನು ಆಳದಲ್ಲಿ ಅಗೆಯುವ 10 ರಿಗ್ಗಳನ್ನು ಪೂರೈಸಿದೆ. ಈ ಪೈಕಿ ಮೂರು ಈಗಾಗಲೇ ಕಾರ್ಯಾರಂಭ ಮಾಡಿವೆ. ಏಳು ರಿಗ್ಗಳ ಅಳವಡಿಕೆ ಆಂತಿಮ ಹಂತದಲ್ಲಿದ್ದು, ಶೀಘ್ರ ಕಾರ್ಯಾರಂಭ ಮಾಡಲಿವೆ. ಮುಂದಿನ 4ರಿಂದ 5 ವಾರಗಳಲ್ಲಿ ಇವೂ ಒಎನ್ಜಿಸಿಯ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಾರಂಭ ಮಾಡಲಿವೆ. ಇದೇ ಹೊತ್ತಿಗೆ ಎಂಇಐಎಲ್ ಐದು ವರ್ಕ್ಓವರ್ ರಿಗ್ಗಳನ್ನು (ತೈಲಬಾವಿ ಅಥವಾ ನೈಸರ್ಗಿಕ ಅನಿಲ ಹೊರತೆಗೆಯುವ ಸ್ಥಳಗಳಲ್ಲಿ ವಿಶೇಷ ಕಾರ್ಯಾಚರಣೆಗೆ ಬಳಸುವ ಉಪಕರಣ) ಹಸ್ತಾಂತರಿಸಿದೆ. ಮೊದಲ ಕಂತಿನಲ್ಲಿ ಹಸ್ತಾಂತರಿಸಿದ ಈ ರಿಗ್ಗಳನ್ನು ಮೆಶ್ಸಾನಾ, ಅಹಮದಾಬಾದ್, ಅಂಕಲೇಶ್ವರ, ಅಗರ್ತಲ ಮತ್ತು ಶಿವ್ಸಾಗರ್ ಒನ್ಜಿಸಿ ಘಟಕಗಳಲ್ಲಿ ಅಳವಡಿಸಲಾಗಿದೆ. 2ನೇ ಕಂತಿನಲ್ಲಿ ಹಸ್ತಾಂತರಿಸಬೇಕಾದ 5 ರಿಗ್ಗಳು ನಿರ್ಮಾಣದ ಅಂತಿಮ ಹಂತದಲ್ಲಿವೆ.
ಓಎನ್ಜಿಸಿಗಾಗಿ 47 ರಿಗ್ಗಳನ್ನು ನಿರ್ಮಿಸಿಕೊಡುವ ಆರ್ಡರ್ ಅನ್ನು ಎಂಇಐಎಲ್ ಸ್ಪರ್ಧಾತ್ಮಕ ಬಿಡಿಂಗ್ನಲ್ಲಿ ಪಡೆದುಕೊಂಡಿತ್ತು. ಈ ಪೈಕಿ 20 ವರ್ಕ್ಓವರ್ ರಿಗ್ಗಳಾಗಿದ್ದರೆ, 27 ಲ್ಯಾಂಡ್ ಡ್ರಿಲಿಂಗ್ ರಿಗ್ಗಳು. 20 ವರ್ಕ್ಓವರ್ ರಿಗ್ಗಳಲ್ಲಿ 12 ರಿಗ್ಗಳು 50 ಟನ್ ಸಾಮರ್ಥ್ಯದ್ದು, 4 ರಿಗ್ಗಳು 100 ಟನ್ ಸಾಮರ್ಥ್ಯದ್ದಾಗಿವೆ. ಉಳಿದ 4 ರಿಗ್ಗಳಿಗೆ 150 ಟನ್ ಸಾಮರ್ಥ್ಯ ಇರುತ್ತದೆ. 27 ಲ್ಯಾಂಡ್ ಡ್ರಿಲಿಂಗ್ ರಿಗ್ಗಳ ಪೈಕಿ 2 ಮೊಬೈಲ್ ಹೈಡ್ರಾಲಿಕ್ ರಿಗ್ಗಳಿಗೆ 1500 ಎಚ್ಪಿ ಶಕ್ತಿ ಇರುತ್ತದೆ. 17 ರಿಗ್ಗಳು 1500 ಎಚ್ಪಿ ಸಾಮರ್ಥ್ಯದೊಂದಿಗೆ ಎಸಿ ವಿಎಫ್ಡಿ ಸೌಲಭ್ಯವನ್ನೂ ಹೊಂದಿರುತ್ತವೆ. 6 ರಿಗ್ಗಳಿಗೆ ಎಸಿ ವಿಎಫ್ಡಿ ಜೊತೆಗೆ 2000 ಎಚ್ಪಿ ಸಾಮರ್ಥ್ಯ ಇದ್ದರೆ, ಉಳಿದೆರೆಡು ರಿಗ್ಗಳಿಗೆ ಎಚ್ಟಿ ವಿಎಫ್ಡಿ ಜೊತೆಗೆ 2000 ಎಚ್ಪಿ ಸಾಮರ್ಥ್ಯ ಇರಲಿದೆ.
ಅಸ್ಸಾಂ (ಸಿಬ್ಸಾಗರ್, ಜೊರಾಹತ್), ಆಂಧ್ರ ಪ್ರದೇಶ (ರಾಜಮಂಡ್ರಿ), ಗುಜರಾತ್ (ಅಹಮದಾಬಾದ್, ಅಂಕಲೇಶ್ವರ, ಮೆಹಸನ ಮತ್ತು ಕಾಂಬೇ), ತ್ರಿಪುರ (ಅಗರ್ತಲ) ಮತ್ತು ತಮಿಳುನಾಡಿನಲ್ಲಿ (ಕಾರೈಕಲ್) ಇರುವ ಒಎನ್ಜಿಸಿ ಘಟಕಗಳಲ್ಲಿ ಈ ರಿಗ್ಗಳನ್ನು ಅಳವಡಿಸಲಾಗುತ್ತದೆ. ಸುರಕ್ಷೆ ಮತ್ತು ನಿರ್ವಹಣೆಗಾಗಿ ಕೆಲಸ ನಿಲ್ಲಿಸಬೇಕಾದ ಅವಧಿಯನ್ನು ಕಡಿತಗೊಳಿಸುವ ಉದ್ದೇಶದಿಂದ ಈ ರಿಗ್ಗಳನ್ನು ಸಂಪೂರ್ಣ ಸ್ವಯಂಚಾಲಿತ (ಆಟೊಮೇಷನ್) ವ್ಯವಸ್ಥೆ ಇರುವ ರೀತಿಯಲ್ಲಿ ನಿರ್ಮಿಸಲಾಗಿದೆ. ಒಎನ್ಡಿಜಿಯಲ್ಲಿ ಭೂಮಿ ಕೊರೆಯುವ ಯಂತ್ರೋಪಕರಣಗಳಿಗೆ ಇಂಥ ರಿಗ್ಗಳು ಸೇರ್ಪಡೆಯಾಗುತ್ತಿರುವುದು ಇದೇ ಮೊದಲು. ಮುಂದಿನ ದಿನಗಳಲ್ಲಿ ಬಾವಿ ತೋಡುವ ತಂತ್ರಜ್ಞಾನದಲ್ಲಿ ಈ ರಿಗ್ಗಳು ಅತ್ಯಗತ್ಯವಾಗಿರುವ ಮಹತ್ವದ ಪರಿವರ್ತನೆಗೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕೊವಿಡ್-19ರ ಸಂಕಷ್ಟದ ನಡುವೆಯೂ ಎಂಇಐಎಲ್ ಈ ಯೋಜನೆಯನ್ನು ಪೂರ್ಣಗೊಳಿಸಲು ಬದ್ಧತೆ ಹೊಂದಿದೆ. ವಿಷಯಜ್ಞಾನ, ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಎಂಇಐಎಲ್ ಈ ಯೋಜನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಎಂಇಐಎಲ್ ಪ್ರಯತ್ನಿಸುತ್ತಿದೆ. ವಿಶ್ವದ ಇತರ ದೇಶಗಳಿಂದ ಬರಬೇಕಿರುವ ಯಂತ್ರೋಪಕರಣಗಳನ್ನು ತರಿಸಿಕೊಳ್ಳುವುದು ಇಂದಿಗೂ ಕಠಿಣ ಸವಾಲೇ ಆಗಿದೆ. ಪೂರೈಕೆ ಜಾಲವು ಇದೀಗ ಮತ್ತೆ ಕಾರ್ಯಾರಂಭ ಮಾಡುತ್ತಿದೆ. ಹೀಗಾಗಿ ರಿಗ್ಗಳ ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಿ, ಒಎನ್ಜಿಸಿಗೆ ಹಸ್ತಾಂತರ ಮಾಡಲು ಸಾಧ್ಯವಾಗುತ್ತಿದೆ.
ಇದೇ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂಇಐಎಲ್ ಕಂಪನಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಕೆ.ಸತ್ಯನಾರಾಯಣ, ‘ಕೊವಿಡ್ ಪಿಡುಗು ಇದೀಗ ಅಂತ್ಯಗೊಳ್ಳುತ್ತಿದೆ. ರಿಗ್ಗಳ ಉತ್ಪಾದನೆ ಮತ್ತು ಹಸ್ತಾಂತರ ಪ್ರಕ್ರಿಯೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಕಂಪನಿಯು ಅಗತ್ಯ ಕ್ರಮ ವಹಿಸಿದೆ. ಇಂಧನ ಕ್ಷೇತ್ರದಲ್ಲಿ ಕಂಪನಿಯು ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ವಿಶ್ವದಲ್ಲಿ ಲಭ್ಯವಿರುವ ಅತ್ಯುತ್ತಮ ಹೈಡ್ರಾಲಿಕ್ ತಂತ್ರಜ್ಞಾನವನ್ನು ಈ ರಿಗ್ಗಳು ಹೊಂದಿವೆ. ಇಂಧನದ ಬೆಲೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಈ ಅತ್ಯಾಧುನಿಕ ರಿಗ್ಗಳು ಭಾರತೀಯ ಇಂಧನ ವಲಯಕ್ಕೆ ಶಕ್ತಿ ತುಂಬಲಿದೆ. ಭಾರತದಲ್ಲಿ ಲಭ್ಯವಿರುವ ನೈಸರ್ಗಿಕ ತೈಲ ಮತ್ತು ಅನಿಲವನ್ನು ಹೊರತೆಗೆದು ಸಂಸ್ಕರಿಸಲು ಇದರಿಂದ ಅನುಕೂಲವಾಗುತ್ತದೆ. ಭಾರತದಲ್ಲಿ ಡ್ರಿಲಿಂಗ್ ರಿಗ್ಗಳನ್ನು ಉತ್ಪಾದಿಸುತ್ತಿರುವ ಮೊದಲ ಖಾಸಗಿ ಕಂಪನಿ ಎಂಇಐಎಲ್. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ಉಪಕ್ರಮಗಳ ಆಶಯಕ್ಕೆ ಅನುಗುಣವಾಗಿ ಈ ರಿಗ್ಗಳನ್ನು ಉತ್ಪಾದಿಸಲಾಗುತ್ತಿದೆ. ವಿಶ್ವದಲ್ಲಿ ಅತಿಹೆಚ್ಚು ಸಾಮರ್ಥ್ಯದ ರಿಗ್ಗಳನ್ನು ಎಂಇಐಎಲ್ ಉತ್ಪಾದಿಸಿದೆ.
ಇದನ್ನೂ ಓದಿ: ಪುಣೆ: ಒಲೆಕ್ಟ್ರಾ ಗ್ರೀನ್‌ಟೆಕ್‌ನ 150 ಇ-ಬಸ್‌ಗಳಿಗೆ ಪ್ರಧಾನಿ ಮೋದಿ ಚಾಲನೆ; ಮಾಹಿತಿ ಹಂಚಿಕೊಂಡ MEIL
ಇದನ್ನೂ ಓದಿ: MEIL: ಜೊಜಿಲಾ ಸುರಂಗ: ಎರಡು ಮುಖ್ಯ ಹಂತ ಪೂರ್ಣಗೊಳಿಸಿದ ಎಂಇಐಎಲ್