Women Reservation: ಮಹಿಳಾ ಮೀಸಲಾತಿಗೆ ಉತ್ತರ ಭಾರತೀಯರ ಮನಸ್ಥಿತಿಯೇ ದೊಡ್ಡ ತಡೆ: ಶರದ್ ಪವಾರ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 18, 2022 | 7:54 AM

ಉತ್ತರ ಭಾರತೀಯರ ಮನಸ್ಥಿತಿ ಇನ್ನೂ ಹದಗೊಂಡಿಲ್ಲ. ಹೀಗಾಗಿಯೇ ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಒದಗಿಸುವ ಮಸೂದೆಗೆ ಅಂಗೀಕಾರ ದೊರೆಯುವುದು ತಡವಾಗುತ್ತಿದೆ ಎಂದು ಶರದ್ ಪವಾರ್ ಹೇಳಿದರು.

Women Reservation: ಮಹಿಳಾ ಮೀಸಲಾತಿಗೆ ಉತ್ತರ ಭಾರತೀಯರ ಮನಸ್ಥಿತಿಯೇ ದೊಡ್ಡ ತಡೆ: ಶರದ್ ಪವಾರ್
ಶರದ್ ಪವಾರ್
Follow us on

ಪುಣೆ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಸಂಸತ್ತಿನಲ್ಲಿರುವ ಉತ್ತರ ಭಾರತೀಯರ ಮನಸ್ಥಿತಿ ಇನ್ನೂ ಹದಗೊಂಡಿಲ್ಲ. ಹೀಗಾಗಿಯೇ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಒದಗಿಸುವ ಮಸೂದೆಗೆ ಅಂಗೀಕಾರ ದೊರೆಯುವುದು ತಡವಾಗುತ್ತಿದೆ ಎಂದು ‘ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ’ದ (Nationalist Congress Party – NCP) ಅಧ್ಯಕ್ಷ ಶರದ್ ಪವಾರ್ ಹೇಳಿದರು. ಶರದ್ ಪವಾರ್ ಅವರು ಮೊದಲಿನಿಂದಲೇ ಮಹಿಳಾ ಮೀಸಲಾತಿ ಮತ್ತು ಮಹಿಳೆಯರಿಗೆ ರಾಜಕಾರಣದಲ್ಲಿ ಹೆಚ್ಚು ಅವಕಾಶಗಳು ಸಿಗಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಅವರು ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲಿಯೇ ಭಾರತದ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಪ್ರವೇಶ ಸಿಕ್ಕಿದ್ದು ಎನ್ನುವ ಸಂಗತಿಯನ್ನು ಇಲ್ಲಿ ಸ್ಮರಿಸಬಹುದು.

ಪುಣೆ ನಗರದಲ್ಲಿ ವೈದ್ಯರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮತ್ತು ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಅವರೊಂದಿಗೆ ಮಾತನಾಡುವಾಗ ತಮ್ಮ ಅಭಿಪ್ರಾಯ ಹಂಚಿಕೊಂಡರು. ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿಡಬೇಕು ಎನ್ನುವ ಗುರಿಯನ್ನು ಮಹಿಳಾ ಮೀಸಲಾತಿ ಮಸೂದೆ ಹೊಂದಿದೆ. ಈ ಕುರಿತು ಕೇಳಿದ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಅವರು, ಮಹಿಳೆಯರ ನಾಯಕತ್ವ ಒಪ್ಪಿಕೊಳ್ಳಲು ದೇಶವು ಇನ್ನೂ ಮಾನಸಿಕವಾಗಿ ಸಿದ್ಧವಾಗಿಲ್ಲ ಎಂದು ಹೇಳಿದರು.

‘ಸಂಸತ್ತಿನ, ವಿಶೇಷವಾಗಿ ಉತ್ತರ ಭಾರತದ ಮಾನಸಿಕತೆ ಈ ವಿಷಯದಲ್ಲಿ ಅನುಕೂಲಕರವಾಗಿಲ್ಲ. ನಾನು ಕಾಂಗ್ರೆಸ್ಸಿನಲ್ಲಿ ಲೋಕಸಭೆ ಸಂಸದನಾಗಿದ್ದಾಗ, ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ವಿಷಯದ ಬಗ್ಗೆ ಮಾತನಾಡುತ್ತಿದ್ದೆ. ಒಮ್ಮೆ ನನ್ನ ಭಾಷಣವನ್ನು ಮುಗಿಸಿದ ನಂತರ, ನಾನು ಹಿಂದಿರುಗಿ ನೋಡಿದರೆ ನನ್ನ ಪಕ್ಷದ ಹೆಚ್ಚಿನ ಸಂಸದರು ಎದ್ದು ಹೊರಟುಹೋಗಿದ್ದರು. ಇದರರ್ಥ ಏನು? ನನ್ನ ಅಂದಿನ ಪಕ್ಷದ ಜನರಿಗೂ ಸಹ, ಮಹಿಳಾ ಮೀಸಲಾತಿಯ ಅನಿವಾರ್ಯತೆ ಅರ್ಥವಾಗುತ್ತಿರಲಿಲ್ಲ’ ಎಂದು ವಿವರಿಸಿದರು.

‘ಮಹಿಳಾ ಮೀಸಲು ಮಸೂದೆಗೆ ಅಂಗೀಕಾರ ಪಡೆದುಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳು ಸತತ ಪ್ರಯತ್ನ ನಡೆಸುತ್ತಲೇ ಇರಬೇಕು. ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ, ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿಯಂತಹ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಪರಿಚಯಿಸಲಾಯಿತು. ಆರಂಭದಲ್ಲಿ ಇದನ್ನು ವಿರೋಧಿಸಲಾಯಿತು ಆದರೆ ನಂತರ ಜನರು ಅದನ್ನು ಒಪ್ಪಿಕೊಂಡರು’ ಎಂದು ನೆನಪಿಸಿಕೊಂಡರು.

Published On - 7:53 am, Sun, 18 September 22