ಈ ಕೊರೊನಾ ಕ್ರಿಮಿ, ನಿಷ್ಪಾಪಿ ವಲಸೆ ಕಾರ್ಮಿಕರನ್ನು ಕಾಡಿರುವಷ್ಟು ಬೇರೆ ಯಾರನ್ನೂ ಕಾಡಿಲ್ಲ ಅನ್ನಿಸುತ್ತದೆ. ಛೇ! ಅದೂ ಯಾವ ರೂಪದಲ್ಲೆಲ್ಲ ನೇರವಾಗಿ ಅವರ ಜೀವದ ಮೇಲೆಯೇ ವಕ್ಕರಿಸಿದೆ ಈ ದರಿದ್ರ ಕ್ರಿಮಿ. ಇಲ್ಲೊಬ್ಬ ಯುವ ಕಾರ್ಮಿಕ ನಮ್ಮದೇ ಬೆಂಗಳೂರಿಂದ ಹೊರಟವನು 2,000 ಕಿಮೀ ದೂರದ ಉತ್ತರ ಪ್ರದೇಶದಲ್ಲಿರುವ ತನ್ನ ಮನೆಯನ್ನು ಹಾದಿಯುದ್ದಕ್ಕೂ ಕಾಲ್ನಡಿಗೆಯಲ್ಲಿಯೇ ಸವೆಸಿ, ಸಾಗಿದ್ದನಂತೆ. ಮನೆ ತಲುಪಿದವ ಅವ್ವನ ಮುಖ ನೋಡಿ ಅವ್ವಾ ನಾ ಬಂದೆ! ಅಂದಿದ್ದಾನೆ. ಅದಾದ ಕೆಲವೇ ಕ್ಷಣಗಳಲ್ಲಿ ಹಾವಿನ ರೂಪದಲ್ಲಿದ್ದ ಯಮರಾಯ ಆತನನ್ನು ತನ್ನ ಲೋಕಕ್ಕೆ ಸೆಳೆದೊಯ್ದಿದೆ.
‘ನಡೆ’ದಿದ್ದಿಷ್ಟು: ಯುಪಿ ರಾಜ್ಯದ ಗೋಂಡಾ ಜಿಲ್ಲೆಯ ಧಾನೇಪುರ ಎಂಬ ಪುಟ್ಟ ಗ್ರಾಮದ ಸಲ್ಮಾನ್ ಖಾನ್ ಎಂಬ ಯುವಕ ಕಳೆದ ಡಿಸೆಂಬರ್ನಲ್ಲಿ ಜೀವನವನ್ನರಸಿ ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದಿದ್ದಾನೆ. 23 ವರ್ಷದ ಸಲ್ಮಾನ್ ನೋಡೋಕ್ಕೆ ಥೇಟ್ ಬಾಲಿವುಡ್ ನಟ ಸಲ್ಮಾನ್ ನಂತೆಯೇ ಇದ್ದ.
ಬೆಂಗಳೂರಿಗೆ ಬಂದವನೇ ಆರು ತಿಂಗಳ ಕಾಲ ಹಾಗೂ-ಹೀಗೂ ಜೀವನ ನಡೆಸಿದ್ದಾನೆ.ಈ ಮಧ್ಯೆ ಧುತ್ತನೇ ಎದುರಾಗಿದೆ ಕೊರೊನಾ ಸಂಕಷ್ಟ. ಎಲ್ಲಾ ಲಾಕ್ಡೌನ್ ಆಗುತ್ತಿದ್ದಂತೆ ತನ್ನ ದುರ್ವಿಧಿಯನ್ನು ಬೈದುಕೊಳ್ಳುತ್ತಾ ಮೇ 12ರಂದು ಉತ್ತರಪ್ರದೇಶದ ತನ್ನ ಗ್ರಾಮದತ್ತ ಕದಮ್ ತಾಲ್ ಶುರು ಮಾಡಿದ್ದಾನೆ.
ಸಲ್ಮಾನ್ ಖಾನ್ ಜರ್ನಿ ಹೇಗಿತ್ತು? ಅವನ ಸಹಚರ ಕುಶಾಲ್ ಕುಮಾರ್ ಹೇಳುವಂತೆ.. 2 ತಿಂಗಳು ಬೆಂಗಳೂರಿನಲ್ಲಿ ನಮ್ಮ ಕಾಂಟ್ರಾಕ್ಟರ್ ಸಂಬಳ ಕೊಡಲಿಲ್ಲ. ಜೀವನ ದುರ್ಭರವಾಯ್ತು. ಟ್ರೈನ್ ಹತ್ತಕ್ಕೆ ಹೋದ್ವಿ.. ರೈಲ್ವೆ ಸಿಬ್ಬಂದಿ, ಪೊಲೀಸರು ನಮ್ಮನ್ನು ಹತ್ತಿಸಲಿಲ್ಲ.
ಅದಾದ ಮೇಲೆ.. ನಾವು 10 ಮಂದಿ ಇದ್ದಿವಿ. ಸೇಫ್ ಆಗಿರುತ್ತೆ ಅಂತಾ ರೈಲ್ವೆ ಟ್ರಾಕ್ ಮೇಲೆಯೇ ಉದ್ದಕ್ಕೂ ನಡೆಯತೊಡಗಿದೆವು. (ಇಂತಹುದೇ 13 ಕಾರ್ಮಿಕರು ನಡುರಾತ್ರಿ ಹಳಿಗಳ ಮೇಲೆ ಮಲಗಿದ್ದಾಗಲೇ ಅಲ್ಲವೇ ಟ್ರೈನಿಗೆ ಆಹುತಿಯಾಗಿದ್ದು) ಮಧ್ಯೆ ತೆಲಂಗಾಣ ಗಡಿಯಲ್ಲಿ ತುಂಗಭದ್ರಾ ನದಿ ತೀರದಲ್ಲಿಯೂ ನಡೆದೆವು. ಅಲ್ಲಿಂದ ಮಹಾರಾಷ್ಟ್ರಕ್ಕೆ ತಲುಪಿ, ಪೊಲೀಸರ ಭಯದಿಂದ ರಾತ್ರಿ ವೇಳೆಯಲ್ಲಿಯೇ ಮನೆಯತ್ತ ಹೆಜ್ಜೆ ಹಾಕತೊಡಗಿದೆವು.
ಮಧ್ಯೆ ಸ್ವಲ್ಪ ದೂರ ಲಾರಿಗಳಲ್ಲಿಯೂ ಸಂಚರಿಸಿದೆವು. ಜಿಲ್ಲಾ ಕೇಂದ್ರ ತಲುಪಿದಾಗ ಕ್ವಾರೆಂಟೈನ್ಗೆ ಒಳಪಡಿಸಿದರು. ಅದನ್ನೂ ಮುಗಿಸಿಕೊಂಡು ಮನೆಗಳತ್ತ ಹೆಜ್ಜೆ ಹಾಕಿದೆವು. ಆದ್ರೆ ದೋಸ್ತ ಸಲ್ಮಾನ್ ಖಾನ್ ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಹಾವಿಗೆ ಹಾರವಾಗಿದ್ದಾನೆ ಎಂಬ ಸುದ್ದಿ ಬರಸಿಡಿಲಿನಂತೆ ಬಡಿಯಿತು ಎಂದು ಕುಶಾಲ್ ಕಣ್ಣೀರು ಹಾಕಿದ.
Published On - 6:31 pm, Thu, 4 June 20