
ಮುಂಬೈ: ಐಎನ್ಎಸ್ ವಿಶಾಖಪಟ್ಟಣಂ (INS Visakhapatnam) ಎಂಬ ಹೆಸರಿನ, ಮೊದಲ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ಹಡಗನ್ನು ಇಂದು ಮುಂಬೈನ ನೌಕಾನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೌಕಾಪಡೆಗೆ ಅಧಿಕೃತನವಾಗಿ ನಿಯೋಜಿಸುವ ಮೂಲಕ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಐಎನ್ಎಸ್ ವಿಶಾಖಪಟ್ಟಣಂ ಹಡಗು ಪ್ರಾಜೆಕ್ಟ್ 15ಬಿಯ ಕ್ಷಿಪಣಿ ವಿಧ್ವಂಸಕ ಶಿಪ್ ಆಗಿದೆ. ಇಂದು ಯುದ್ಧ ಹಡಗನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಮುಖ್ಯಅತಿಥಿಯಾಗಿದ್ದು, ರಾಜನಾಥ್ ಸಿಂಗ್ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ದೇಶೀಯವಾದ ಡಿಎಂಆರ್ 249ಎ ಉಕ್ಕು ಬಳಸಿ ಈ ಐಎನ್ಎಸ್ ವಿಶಾಖಪಟ್ಟಣಂ ಹಡಗನ್ನು ನಿರ್ಮಿಸಲಾಗಿದ್ದು, ಇದು ಭಾರತದಲ್ಲಿ ತಯಾರಿಸಲಾದ ಅತಿದೊಡ್ಡ ವಿಧ್ವಂಸಕ ನೌಕೆಗಳಲ್ಲಿ ಒಂದಾಗಿದೆ. ಇದರ ಒಟ್ಟಾರೆ ಉದ್ದ 163 ಮೀಟರ್ಗಳಿದ್ದು, 704 ಟನ್ಗಳಷ್ಟು ಭಾರವನ್ನು ಸ್ಥಳಾಂತರ ಮಾಡಬಹುದಾಗಿದೆ. ಈ ನೌಕೆಯಲ್ಲಿ ಶಸ್ತ್ರಾಸ್ತ್ರಗಳ ಅಳವಡಿಗೆ ಮುಂದುವರಿದ ವಿಧಾನದಲ್ಲಿ ಇದ್ದು, ಬಹುವಿಧದ ಕಾರ್ಯ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ. ಈ ಕ್ಷಿಪಣಿ ಧ್ವಂಸಕ ಹಡಗು ಶಕ್ತಿಯುತ ಅನಿಲ ಮತ್ತು ಅನಿಲ ಸಂಚಲನೆಯಿಂದ ಚಾಲಿತವಾಗಲ್ಪಡುತ್ತದೆ. ಅಲ್ಲದೆ, ಎರಡು ಹೆಲಿಕಾಪ್ಟರ್ಗಳನ್ನು ಹೊರುವಷ್ಟು ಬಲಿಷ್ಠವಾಗಿದೆ. ಅಷ್ಟೇ ಅಲ್ಲ, ಅತ್ಯಾಧುನಿಕ ಡಿಜಿಟಲ್ ನೆಟ್ವರ್ಕ್ಗಳು, ಕಾಂಬ್ಯಾಟ್ ಮ್ಯಾನೇಜ್ಮೆಂಟ್ ವ್ಯವಸ್ಥೆ, ಇಂಟಿಗ್ರೇಟೆಡ್ ಪ್ಲಾಟ್ಫಾರ್ಮ್ ನಿರ್ವಹಣಾ ವ್ಯವಸ್ಥೆಯೊಂದಿಗೆ ಹೆಚ್ಚಿನ ಮಟ್ಟದಲ್ಲಿ ಯಾಂತ್ರೀಕೃತಗೊಂಡಿದೆ.
ಐಎನ್ಎಸ್ ವಿಶಾಖಪಟ್ಟಣಂ ನೌಕೆ ಉದ್ಘಾಟನೆ ಬಗ್ಗೆ ಬಗ್ಗೆ ನಿನ್ನೆ ರಾತ್ರಿ ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾಳೆ (ನ.21) ಮುಂಬೈಗೆ ತೆರಳುತ್ತಿದ್ದೇನೆ. ಐಎನ್ಎಸ್ ವಿಶಾಖಪಟ್ಟಣಂ ಕ್ಷಿಪಣಿ ವಿಧ್ವಂಸಕ ಹಡಗನ್ನು ಲೋಕಾರ್ಪಣೆ ಮಾಡುತ್ತಿದ್ದೇನೆ. ಈ ವರ್ಗದ ಒಟ್ಟು ನಾಲ್ಕು ನೌಕೆಗಳಲ್ಲಿ ಮೊದಲನೆಯದು ನಾಳೆ ನೌಕಾಪಡೆ ಸೇರುವ ಮೂಲಕ ರಾಷ್ಟ್ರಕ್ಕೆ ಸಮರ್ಪಿತವಾಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉಡುಪಿ: ಮೌಢ್ಯದ ಹೆಸರಿನಲ್ಲಿ ಶ್ರೀತಾಳೆ ಮರ ಕಡಿಯಲು ಮುಂದಾದ ಗ್ರಾಮಸ್ಥರು; ಪರಿಸರ ಪ್ರೀಯರಿಂದ ಆಕ್ರೋಶ