ಉಡುಪಿ: ಮೌಢ್ಯದ ಹೆಸರಿನಲ್ಲಿ ಶ್ರೀತಾಳೆ ಮರ ಕಡಿಯಲು ಮುಂದಾದ ಗ್ರಾಮಸ್ಥರು; ಪರಿಸರ ಪ್ರಿಯರಿಂದ ಆಕ್ರೋಶ

ಈ‌ ಮರದ ಸಸ್ಯನಾಮ ಕೊರಿಫಾ ಅಂಬ್ರಕುಲಿಫೆರಾ (Corypha Umbraculifera) ಎಂಬುವುದಾಗಿದ್ದು, ಇಂಡೋನೇಷ್ಯಾ ಭಾಗದಲ್ಲಿ ಲೊಂಟಾರ (Lontara) ಎಂಬುದಾಗಿ ಕರೆಯುತ್ತಾರೆ. ಈ‌ ಮರಕ್ಕೆ ಕನ್ನಡದಲ್ಲಿ ಶ್ರೀತಾಳೆ/ ಸೀತಾಳೆ, ಸಂಸ್ಕೃತದಲ್ಲಿ ಅವಿನಾಶಿ, ಕೇರಳದಲ್ಲಿ ಕೊಡಪಣ ಮರ ಹಾಗೂ ತುಳುವಿನಲ್ಲಿ ಪಣೋಲಿದ ಮರ ಎಂದೂ ಕರೆಯುತ್ತಾರೆ.

ಉಡುಪಿ: ಮೌಢ್ಯದ ಹೆಸರಿನಲ್ಲಿ ಶ್ರೀತಾಳೆ ಮರ ಕಡಿಯಲು ಮುಂದಾದ ಗ್ರಾಮಸ್ಥರು; ಪರಿಸರ ಪ್ರಿಯರಿಂದ ಆಕ್ರೋಶ
ಶ್ರೀತಾಳೆ ಮರ

ಉಡುಪಿ: ಪ್ರಪಂಚದ ಅಪರೂಪದ ಅಳಿವಿನಂಚಿನಲ್ಲಿರುವ ಮರ ಎಂದರೆ ಅದು ಶ್ರೀತಾಳೆ ಮರ. ಆದರೆ ಈಗ ಇದೇ ಮರ ಮೌಢ್ಯಕ್ಕೆ ಬಲಿಯಾಗುವ ಹಂತಕ್ಕೆ ತಲುಪಿದೆ. ಈ ಶ್ರೀತಾಳೆ ಮರದಲ್ಲಿ(shreetale tree) ಹೂ ಬಿಟ್ಟರೆ ಊರಿಗೆ ಅನಿಷ್ಠ ಎಂಬ ಮೂಢನಂಬಿಕೆ ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಹೂ ಬಿಟ್ಟ ಶ್ರೀತಾಳೆ ಮರವನ್ನು ಕಡಿಯಲು ಗ್ರಾಮಸ್ಥರು ಮುಂದಾಗಿದ್ದಾರೆ. ಆದರೆ ಉಡುಪಿ ಪರಿಸರ ಪ್ರಿಯರು ಮರ ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸುಮಾರು 80 ವರ್ಷದಷ್ಟು ಹಳೆಯದಾದ ಶ್ರೀತಾಳೆ ಅಥವಾ ಪಣೋಲಿ ಮರ ಕರಿಮಣೇಲು ಗ್ರಾಮದ ವ್ಯಕ್ತಿಯೋರ್ವರ ಜಮೀನಿನಲ್ಲಿದ್ದು, ಈ ಮರ ಸದ್ಯ ಹೂ ಬಿಟ್ಟಿದೆ. ಹೀಗೆ ಹೂ ಬಿಟ್ಟ ಮರ ಮುಂದಿನ ಎರಡು ವರ್ಷದಲ್ಲಿ ಅವಸಾನ ಹೊಂವುದು ಮರದ ನಿಯಮ. ಆದರೆ ತಾಳೆ ಮರ ಹೂ ಬಿಟ್ಟರೆ ಊರಿಗೆ ಅನಿಷ್ಠ ಎಂಬ ನಂಬಿಕೆ ಗ್ರಾಮದವರದ್ದಾಗಿದ್ದು, ಈಗ ಗ್ರಾಮಸ್ಥರು ಸೇರಿ ಮರ ಕಡಿಯಲು ಮುಂದಾಗಿದ್ದಾರೆ.ಇಂದು (ನವೆಂಬರ್ 21) ಬೆಳಗ್ಗೆ 9 ಗಂಟೆಗೆ ವಿವಿಧ ಪೂಜಾ ವಿಧಿ-ವಿಧಾನದ ಮೂಲಕ ಮರ ಕಡಿಯುವ ಕಾರ್ಯಕ್ರಮವನ್ನು ಗ್ರಾಮಸ್ಥರು ಹಮ್ಮಿಕೊಂಡಿದ್ದಾರೆ.

ಪ್ರಪಂಚದಲ್ಲೇ ಅತೀ ಅಪರೂಪವಾದ ಈ ಮರವನ್ನು ಮೌಢ್ಯದ ಕಾರಣದಿಂದ ಕಡಿಯುತ್ತಿರುವುದು ಪ್ರಾಚ್ಯ ಸಂಶೋಧಕರಿಗೆ ಬೇಸರ ತರಿಸಿದೆ. ಈ ಹಿನ್ನಲೆಯಲ್ಲಿ ಈ ಮರದ ಮಹತ್ವವನ್ನು ಉಡುಪಿಯ ಪ್ರಾಚ್ಯ ಸಂಶೋಧನಾ ಕೇಂದ್ರದ ನಿರ್ದೇಶಕ ಫ್ರೋ.ಎಸ್.ಎ. ಕೃಷ್ಣಯ್ಯ ಅವರು ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದಾರೆ. ಈ ಶ್ರೀತಾಳೆ ಮರ ಬಹಳ ಮಹತ್ವ ಹೊಂದಿದೆ. ಹಸಿರು, ಹಸಿವು, ಅಕ್ಷರ ಸಂಪತ್ತನ್ನು ಒದಗಿಸುವ ಮಹತ್ವದ ಗುಣವನ್ನು ಶ್ರೀತಾಳೆ ಮರ ಹೊಂದಿದೆ. ಈ‌ ಮರ ಹೂ ಬಿಟ್ಟರೆ ಕೇಡುಗಾಲ ವಕ್ಕರಿಸಿದ ಹಾಗೇ, ಸೂತಕದ ಛಾಯೆ ಗ್ರಾಮದವರಿಗೆ ಕಟ್ಟಿಟ್ಟ ಬುತ್ತಿ ಎನ್ನುವ ಮೌಢ್ಯದ ನಂಬಿಕೆಯಿಂದಾಗಿ ಈಗ ಮರ ಕಡಿಯಲು ಗ್ರಾಮಸ್ಥರು ಮುಂದಾಗಿದ್ದಾರೆ ಎಂದು ಫ್ರೋ.ಎಸ್.ಎ. ಕೃಷ್ಣಯ್ಯ ಅಭಿಪ್ರಾಯಪಟ್ಟಿದ್ದಾರೆ.

ಈ‌ ಮರದ ಸಸ್ಯನಾಮ ಕೊರಿಫಾ ಅಂಬ್ರಕುಲಿಫೆರಾ (Corypha Umbraculifera) ಎಂಬುವುದಾಗಿದ್ದು, ಇಂಡೋನೇಷ್ಯಾ ಭಾಗದಲ್ಲಿ ಲೊಂಟಾರ (Lontara) ಎಂಬುದಾಗಿ ಕರೆಯುತ್ತಾರೆ. ಈ‌ ಮರಕ್ಕೆ ಕನ್ನಡದಲ್ಲಿ ಶ್ರೀತಾಳೆ/ ಸೀತಾಳೆ, ಸಂಸ್ಕೃತದಲ್ಲಿ ಅವಿನಾಶಿ, ಕೇರಳದಲ್ಲಿ ಕೊಡಪಣ ಮರ ಹಾಗೂ ತುಳುವಿನಲ್ಲಿ ಪಣೋಲಿದ ಮರ ಎಂದೂ ಕರೆಯುತ್ತಾರೆ. ಈ ಮರವು ಸುಮಾರು 66 ವರ್ಷಗಳಿಗೊಮ್ಮೆ ಹೂ ಬಿಡವುದರ‌ ಮೂಲಕ ಎರಡು ಲಕ್ಷಕ್ಕೂ ಹೆಚ್ಚು ಬೀಜವನ್ನು ಬಿಡುತ್ತದೆ. ಈ ಮರದ ಒಡಲಲ್ಲಿ ಸುಮಾರು 200-250 ಕೆ.ಜಿ.ಯಷ್ಟು ಸಬ್ಬಕ್ಕಿಯಂತ ಹಿಟ್ಟು/ತಿರುಳು ದೊರಕುತ್ತದೆ‌.

ಇಂತಹಾ ಮರಗಳು ಕಾಡು-ನಾಡಿನಲ್ಲಿ ಇದ್ದರೆ ಸುಮಾರು 100 ಕುಟುಂಬಗಳು 3 ತಿಂಗಳುಗಳ ಕಾಲದಷ್ಟು ಆಹಾರವನ್ನು ಪಡೆಯಬಹುದು. ಇದರಲ್ಲಿ ಸಂಗ್ರಹ ಮಾಡಿದ ಸುಮಾರು 38000 ಬೀಜಗಳನ್ನು ಕಾವೇರಿಯಿಂದ ವಾರಣಾಸಿಯವರೆಗೆ ಈಗಾಗಲೇ ಪ್ರಸಾರಣ ಮಾಡಲಾಗಿದೆ. ಭಾರತೀಯ ಇತಿಹಾಸ, ಪುರಾಣ, ಕಾವ್ಯಗಳನ್ನು ಅಕ್ಷರ ರೂಪದಲ್ಲಿ ಬರೆದಿರುವುದು ಈ‌ ಮರದ ಎಲೆಗಳಿಂದಲೇ. ಇವುಗಳನ್ನು “ತಾಡೋಲೆ ಗ್ರಂಥ” ಎಂದು ಕರೆಯಲಾಗುತ್ತದೆ.

ಒಟ್ಟಿನಲ್ಲಿ ಮರ ಕಡಿಯದಂತೆ ಪರಿಸರ ಪ್ರೇಮಿಗಳ ತಂಡ, ಊರವರಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಸ್ವಾಮಿಜಿಯೊಬ್ಬರಿಗೂ ಮನವಿ ಸಲ್ಲಿಸಿದ್ದಾರೆ. ಆದರೆ ಪರಿಸರ ಪ್ರೇಮಿಗಳ ಒತ್ತಡಕ್ಕೆ ಮಣಿದು ಮರ ಕಡಿಯುವುದನ್ನು ನಿಲ್ಲಿಸುತ್ತಾರೆಯೇ ಅಥವಾ ಅನಿಷ್ಟ ಅಂತ ಮರ ಕಡಿದು ತೀರುತ್ತಾರಾ ಕಾದು ನೋಡಬೇಕಿದೆ.

ವರದಿ: ಹರೀಶ್ ಪಾಲೆಚ್ಚಾರ್

ಇದನ್ನೂ ಓದಿ:
ಕಲ್ಪತರು ನಾಡಿನಲ್ಲಿ ಮರ ಕಡಿಯುವ ಶಬ್ದ ಆಲಿಸಿಕೊಂಡು ಹೋಗಿ ಶ್ರೀ ಗಂಧ ಕಳ್ಳರ ಮೇಲೆ ಫೈರಿಂಗ್, ತಮಿಳುನಾಡಿನ ಮೂವರು ಅರೆಸ್ಟ್

ಬೆಂಗಳೂರು ಮೆಟ್ರೋ ಯೋಜನೆಗಾಗಿ ಮರ ಕಡಿಯಲು ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್​

Click on your DTH Provider to Add TV9 Kannada