Modi Cabinet: ಮೋದಿ ಸಂಪುಟದಲ್ಲಿ ಸಚಿವರಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಇಂದು ಪ್ರಮಾಣವಚನ ಸ್ವೀಕಾರ ಸಾಧ್ಯತೆ

|

Updated on: Jun 09, 2024 | 4:50 PM

PM Swearing in Ceremony: ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಮೋದಿ ಸಂಪುಟದಲ್ಲಿ ಕರ್ನಾಟಕದ ಮೂವರು ಅಥವಾ ನಾಲ್ಕು ಸಂಸದರಿಗೆ ಸಚಿವರಾಗುವ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.

Modi Cabinet: ಮೋದಿ ಸಂಪುಟದಲ್ಲಿ ಸಚಿವರಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಇಂದು ಪ್ರಮಾಣವಚನ ಸ್ವೀಕಾರ ಸಾಧ್ಯತೆ
ಜೆ.ಪಿ. ನಡ್ಡಾ - ನರೇಂದ್ರ ಮೋದಿ
Follow us on

ನವದೆಹಲಿ: ನರೇಂದ್ರ ಮೋದಿ ಅವರು ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ (Rashtrapati Bhavan) ಸತತ 3ನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ (Prime Minister Narendra Modi Swearing in Ceremony) ಸ್ವೀಕಾರ ಮಾಡಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಜಗತ್ ಪ್ರಕಾಶ್ ನಡ್ಡಾ (ಜೆಪಿ ನಡ್ಡಾ) ಕೂಡ ನರೇಂದ್ರ ಮೋದಿ ಸರ್ಕಾರದಲ್ಲಿ (Narendra Modi 3.0 Cabinet) ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ನರೇಂದ್ರ ಮೋದಿ ಜೊತೆಗೆ ಕೆಲವು ಸಚಿವರು ಮಾತ್ರ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರಲ್ಲಿ ಜೆಪಿ ನಡ್ಡಾ (JP Nadda) ಕೂಡ ಒಬ್ಬರು ಎನ್ನಲಾಗುತ್ತಿದೆ.

ಬಿಜೆಪಿ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ ಈ ತಿಂಗಳು ಮುಕ್ತಾಯಗೊಳ್ಳಲಿದೆ. ಹೀಗಾಗಿ, ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎನ್ನಲಾಗಿದೆ. ಗುಜರಾತ್ ಸಂಸದ ಸಿಆರ್ ಪಾಟೀಲ್ ಕೂಡ ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನಾಯಕರ ತಾತ್ಕಾಲಿಕ ಪಟ್ಟಿಯಲ್ಲಿ ಜೆಡಿಎಸ್ ನಾಯಕ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಹೆಸರು ಕೂಡ ಕೇಳಿಬರುತ್ತಿದೆ.

ಇದನ್ನೂ ಓದಿ: Narendra Modi Oath Taking Ceremony: ಪ್ರಮಾಣವಚನಕ್ಕೂ ಮುನ್ನ ಮೋದಿಯನ್ನು ಭೇಟಿಯಾದ ಚಿರಾಗ್ ಪಾಸ್ವಾನ್, ಕುಮಾರಸ್ವಾಮಿ

ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ತೆಲಂಗಾಣ ನಾಯಕರಾದ ಬಂಡಿ ಸಂಜಯ್ ಕುಮಾರ್ ಮತ್ತು ಕಿಶನ್ ಕುಮಾರ್ ರೆಡ್ಡಿ, ಪಂಜಾಬ್ ಬಿಜೆಪಿ ನಾಯಕ ರವನೀತ್ ಬಿಟ್ಟು ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ರಾಜಸ್ಥಾನದಿಂದ ಗಜೇಂದ್ರ ಸಿಂಗ್ ಶೇಖಾವತ್, ಜೆಡಿಯು ನಾಯಕರಾದ ಲಾಲನ್ ಸಿಂಗ್ ಮತ್ತು ರಾಮನಾಥ್ ಠಾಕೂರ್, ಮತ್ತು ಗಿರಿರಾಜ್ ಸಿಂಗ್ ಮತ್ತು ನಿತ್ಯಾನಂದ ರೈ ಕೂಡ ಇಂದು ಸಚಿವರಾಗಲಿದ್ದಾರೆ.

ಎಚ್‌ಎಎಂ ಮುಖ್ಯಸ್ಥ ಜಿತನ್ ರಾಮ್ ಮಾಂಝಿ, ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್, ಜಿತಿನ್ ಪ್ರಸಾದ್ ಮತ್ತು ಲಕ್ಷ್ಮೀಕಾಂತ್ ಬಾಜ್‌ಪೈ ಕೂಡ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಿರಣ್ ರಿಜಿಜು ಕೂಡ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.

ಎಚ್​ಡಿ ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಬಿಜೆಪಿ ತನ್ನ ನೆಲೆಯನ್ನು ಬಲಪಡಿಸುವ ಕಾರ್ಯತಂತ್ರ ರೂಪಿಸಲಾಗಿದೆ. ಬಿಜೆಪಿ ನಾಯಕರಾದ ನಿರ್ಮಲಾ ಸೀತಾರಾಮನ್ ಮತ್ತು ಸರ್ಬಾನಂದ ಸೋನೋವಾಲ್ ಕೂಡ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಕರ್ನಾಟಕದಿಂದ ಕೇಂದ್ರ ಸಚಿವರಾಗುವವರು ಇವರೇ ನೋಡಿ

ಇವರ ಜೊತೆಗೆ ಅಮಿತ್ ಶಾ, ರಾಜನಾಥ್ ಸಿಂಗ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಕೂಡ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.

ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಬಿಜೆಪಿ 240 ಸ್ಥಾನಗಳನ್ನು ಗೆದ್ದುಕೊಂಡಿತು. ಒಟ್ಟು 28 ಸ್ಥಾನಗಳನ್ನು ಹೊಂದಿರುವ ಎನ್ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ನರೇಂದ್ರ ಮೋದಿಗೆ ಬೆಂಬಲ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ